ಮುಂಡರಗಿ: ತಾಲ್ಲೂಕಿನ ಬೂದಿಹಾಳ ಗ್ರಾಮದ ಹಾಲೇಶ ಮನೋಹರಪ್ಪ ಲಿಂಗಶೆಟ್ಟರ ಅವರು ಕೃಷಿ, ಹೈನುಗಾರಿಕೆ, ಸಂಚಾರಿ ಕಿರಾಣಿ ಅಂಗಡಿ ನಿರ್ವಹಣೆ ಹೀಗೆ ವೈವಿಧ್ಯಮಯ ಕೆಲಸ ಕಾರ್ಯಗಳನ್ನು ಮಾಡುತ್ತಾ ನಿರಂತರ ಆದಾಯ ಪಡೆದುಕೊಳ್ಳುತ್ತಿದ್ದಾರೆ. ಆ ಮೂಲಕ ಯುವ ರೈತ ಸಮುದಾಯಕ್ಕೆ ಮಾದರಿಯಾಗಿದ್ದಾರೆ.
ಹಾಲೇಶ ಅವರು ಬೂದಿಹಾಳ ಗ್ರಾಮದಲ್ಲಿ 4.5 ಎಕರೆ ಸ್ವಂತ ಜಮೀನು ಹೊಂದಿದ್ದು, ಅದರಲ್ಲಿಯೇ ವೈವಿಧ್ಯಮಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಎರಡು ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆದು ಅದರಿಂದ ಸಾಕಷ್ಟು ಆದಾಯ ಪಡೆದುಕೊಂಡಿದ್ದಾರೆ. ಅರ್ಧ ಎಕರೆ ಜಮೀನಿನಲ್ಲಿ ಟೊಮೊಟೊ, ಬದನೆಕಾಯಿ, ಹೀರೇಕಾಯಿ ಮೊದಲಾದ ತರಕಾರಿಗಳನ್ನು ಬೆಳೆದು ನಿಯಮಿತವಾಗಿ ಹಣ ಸಂಪಾದಿಸುತ್ತಿದ್ದಾರೆ.
ಜಮೀನಿನ ಬದುವುಗಳಲ್ಲಿ ಆರು ಮಾವಿನ ಗಿಡ, ನಾಲ್ಕು ಚಿಕ್ಕು ಹಣ್ಣಿನ ಗಿಡ ಹಾಗೂ ನಾಲ್ಕು ತೆಂಗಿನ ಮರಗಳನ್ನು ನೆಟ್ಟಿದ್ದು, ಅವುಗಳಿಂದ ನಿತ್ಯ ಹಣ ಸಂಪಾದಿಸುತ್ತಿದ್ದಾರೆ. ಮನೆಯ ಅನ್ಯ ಖರ್ಚುಗಳನ್ನು ಧೀರ್ಘಾವಧಿ ಫಸಲು ನೀಡುವ ಗಿಡಗಳಿಂದ ಸಂಪಾದಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಇನ್ನು ಹಲವು ಗಿಡಗಳನ್ನು ನೆಡುವ ಯೋಜನೆ ಹಾಕಿಕೊಂಡಿದ್ದಾರೆ.
ಜಮೀನಿನಲ್ಲಿ ಹಾಲೇಶ ಅವರು 12 ಜರ್ಸಿ ಹಸುಗಳನ್ನು ಸಾಕಿದ್ದು, ಅವುಗಳಿಂದ ನಿತ್ಯ 60-70ಲೀಟರ್ ಹಾಲು ಕರೆಯುತ್ತಿದ್ದಾರೆ. ಗ್ರಾಮದಲ್ಲಿರುವ ಕೆಎಂಎಫ್ ಸೊಸೈಟಿಗೆ ನಿತ್ಯ ಎರಡು ಹೊತ್ತು ಹಾಲು ಮಾರಾಟ ಮಾಡುತ್ತಿದ್ದು, ಒಂದು ಲೀಟರ್ ಹಾಲು ₹35 ದರಲ್ಲಿ ಮಾರಾಟವಾಗುತ್ತಲಿದೆ. ಹಸುಗಳಿಗೆ ನಿಯಮಿತವಾಗಿ ಹೊಟ್ಟು, ಮೇವು, ಹಿಂಡಿ ಹಾಕಲು ಹಾಲೇಶ ಅವರು ಒಬ್ಬ ಕೂಲಿಯಾಳನ್ನು ಗೊತ್ತು ಮಾಡಿದ್ದು, ಅವರು ಹಸುವಿನ ಸಮಗ್ರ ನಿರ್ವಹಣೆ ಮಾಡುತ್ತಿದ್ದಾರೆ.
ನಿತ್ಯ ಅಪಾರ ಪ್ರಮಾಣದ ಹಾಲನ್ನು ಪಡೆದುಕೊಳ್ಳಲು ಹಾಲೇಶ ಅವರು ಹಸುಗಳಿಗೆ ಹೊಟ್ಟು, ಮೇವಿನ ಜೊತೆಗೆ ತಲಾ ಐದು ಕೇಜಿಯಂತೆ ಗೋದಿಗೂಸಾ, ಹತ್ತಿಹಿಂಡಿ ಹಾಗೂ ಶೇಂಗಾ ಹಿಂಡಿಯ ಮಿಶ್ರಣವನ್ನು ನಿಯಮಿತವಾಗಿ ನೀಡುತ್ತಿದ್ದಾರೆ. ಜೊತೆಗೆ ಹಸುಗಳಿಗಾಗಿಯೇ ಎರಡು ಎಕರೆ ಜಮೀನಿನಲ್ಲಿ ಹಸಿ ಹುಲ್ಲನ್ನು ಬೆಳೆದಿದ್ದು, ಅವುಗಳಿಗೆ ಸಾಕಷ್ಟು ಹಸಿ ಹುಲ್ಲು ನೀಡಲಾಗುತ್ತಿದೆ.
ಈ ಕಾರಣದಿಂದ ಹಸುಗಳು ನಿತ್ಯ ನಿರೀಕ್ಷಿಸಿದಷ್ಟು ಹಾಲು ನೀಡುತ್ತಲಿವೆ. ಹೈನೋತ್ಪನ್ನಗಳಿಂದಲೇ ಹಾಲೇಶ ಅವರು ಮಾಸಿಕ ₹60 ಸಾವಿರದಿಂದ ₹70 ಸಾವಿರ ಆದಾಯ ಪಡೆದುಕೊಳ್ಳುತ್ತಿದ್ದಾರೆ. ಹಾಲೇಶ ಅವರು ಜಿಲ್ಲೆಯ ಒಬ್ಬ ಮಾದರಿ ಹೈನೋದ್ಯಮಿಯಾಗಿದ್ದಾರೆ. 2007ರಲ್ಲಿ ಕೇವಲ ಎರಡು ಹಸುಗಳಿಂದ ಆರಂಭವಾದ ಅವರ ಹೈನುಗಾರಿಕೆ ಇಂದು ಬೃಹದಾಕಾರವಾಗಿ ಬೆಳೆದಿದೆ.
ಹಾಲೇಶ ಅವರು ಕೃಷಿ ಹಾಗೂ ಹೈನೋದ್ಯಮದ ಜೊತೆಗೆ ಸಂಚಾರಿ ಕಿರಾಣಿ ಅಂಗಡಿಯನ್ನು ನಿರ್ವಹಿಸುತ್ತಿದ್ದಾರೆ. ಸ್ವಂತ ಒಂದು ಟಾಟಾ ಎಸಿ ವಾಹನವನ್ನು ಖರೀದಿಸಿದ್ದು ವಾರದಲ್ಲಿ ನಾಲ್ಕು ದಿನ ಅದರಲ್ಲಿ ದಿನಬಳಕೆಗೆ ಬೇಕಾಗುವ ಅಗತ್ಯ ಕಿರಾಣಿ ಸಾಮಗ್ರಿಗಳನ್ನು ಮಾರಾಟ ಮಾಡುತ್ತಾರೆ. ತಾಲ್ಲೂಕಿನ ಹೆಸರೂರು ಕೊರ್ಲಹಳ್ಳಿ ಶೀರನಹಳ್ಳಿ ಗಂಗಾಪೂರ ಶಿಂಗಟಾಲೂರ ಮೊದಲಾದ ಗ್ರಾಮಗಳಿಗೆ ತೆರಳಿ ಕಿರಾಣಿ ವ್ಯಾಪಾರ ಮಾಡುತ್ತಾರೆ. ವಾರದ ನಾಲ್ಕು ದಿನಗಳಲ್ಲಿ ನಿತ್ಯ ಕೇವಲ ನಾಲ್ಕು ಗಂಟೆಗಳ ಕಾಲ ಕಿರಾಣಿ ವ್ಯಾಪಾರ ಮಾಡಿ ಯಥಾ ರೀತಿ ಕೃಷಿ ಕಾಯಕಕ್ಕೆ ತೆರಳುತ್ತಾರೆ. ಸಂಚಾರಿ ಕಿರಾಣಿ ಅಂಗಡಿಯ ಮೂಲಕ ಹಾಲೆಶ ಅವರು ಮಾಸಿಕ ಒಂದು ಲಕ್ಷ ರೂಪಾಯಿ ವ್ಯವಹಾರ ನಿರ್ವಹಿಸುತ್ತಾರೆ. ಅವರ ಕೆಲಸ ಕಾರ್ಯಗಳಿಗೆ ಕುಟುಂಬದ ಸದಸ್ಯರು ನೆರವು ನೀಡುತ್ತಿದ್ದಾರೆ.
ಮನಸ್ಸು ಕೊಟ್ಟು ಯೋಜನಾಬದ್ಧವಾಗಿ ಕೃಷಿ ಮಾಡಿದರೆ ಅದರಿಂದ ಹೆಚ್ಚು ಲಾಭ ಗಳಿಸಬಹುದು. ಕೃಷಿಯ ಜೊತೆಗೆ ಕೃಷಿಯೇತರ ಕಾಯಕಗಳು ರೈತರನ್ನು ನಷ್ಟದಿಂದ ಪಾರುಮಾಡುತ್ತವೆ.-ಹಾಲೇಶ ಲಿಂಗಶೆಟ್ಟರ, ಯುವ ರೈತ ಬೂದಿಹಾಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.