ADVERTISEMENT

ಮುಂಡರಗಿ: ಮಧ್ಯಂತರ ಪರಿಹಾರಕ್ಕೆ ರೈತರ ಆಗ್ರಹ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2023, 12:53 IST
Last Updated 29 ಡಿಸೆಂಬರ್ 2023, 12:53 IST
ಮಧ್ಯಂತರ ಬೆಳೆವಿಮೆ ಪರಿಹಾರಕ್ಕಾಗಿ ಆಗ್ರಹಿಸಿ ಮುಂಡರಗಿ ತಾಲ್ಲೂಕಿನ ವಿವಿಧ ಗ್ರಾಮಗಳ ರೈತರು ಕೃಷಿ ಅಧಿಕಾರಿ ಪ್ರಮೋದ ತುಂಬಳ ಅವರಿಗೆ ಮನವಿ ಸಲ್ಲಿಸಿದರು
ಮಧ್ಯಂತರ ಬೆಳೆವಿಮೆ ಪರಿಹಾರಕ್ಕಾಗಿ ಆಗ್ರಹಿಸಿ ಮುಂಡರಗಿ ತಾಲ್ಲೂಕಿನ ವಿವಿಧ ಗ್ರಾಮಗಳ ರೈತರು ಕೃಷಿ ಅಧಿಕಾರಿ ಪ್ರಮೋದ ತುಂಬಳ ಅವರಿಗೆ ಮನವಿ ಸಲ್ಲಿಸಿದರು   

ಮುಂಡರಗಿ: ಬೆಳೆನಷ್ಟ ಕುರಿತು ರೈತರಿಗೆ ಮಧ್ಯಂತರ ಪರಿಹಾರ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲ್ಲೂಕಿನ ಡಂಬಳ ಹಾಗೂ ಮುಂಡರಗಿ ಹೋಬಳಿಗಳ ರೈತರು ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕ ಪ್ರಮೋದ ತುಂಬಳ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಡಂಬಳ ಹಾಗೂ ಮುಂಡರಗಿ ಹೋಬಳಿಗಳಲ್ಲಿ ಸಾಕಷ್ಟು ರೈತರು ಮಳೆಯಾಶ್ರಿತ ಹಾಗೂ ನೀರಾವರಿ ಜಮೀನುಗಳಲ್ಲಿ ಸೂರ್ಯಕಾಂತಿ ಬೆಳೆ ಬೆಳೆದಿದ್ದಾರೆ. ಆದರೆ, ಏಜೆಂಟರು ಮತ್ತು ಮಧ್ಯವರ್ತಿಗಳು ಕೆಲ ರೈತರನ್ನು ಸಂಪರ್ಕಿಸಿ ಹಣ ಪಡೆದು, ಅವರಿಗೆ ಮಾತ್ರ ಮಧ್ಯಂತರ ಪರಿಹಾರ ದೊರಕುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು.

ಸೂರ್ಯಕಾಂತಿ ಬಿತ್ತನೆ ಮಾಡದಿರುವ ರೈತರಿಗೆ ಹಾಗೂ ಅರ್ಜಿ ಸಲ್ಲಿಸದ ರೈತರಿಗೆ ಬೆಳೆನಷ್ಟ ವಿಮೆ ಮಧ್ಯಂತರ ಪರಿಹಾರ ಮಂಜೂರು ನೀಡಲಾಗಿದೆ. ಇದರಲ್ಲಿ ಅಧಿಕಾರಿಗಳು, ಕಂಪನಿಯ ಅಧಿಕಾರಿಗಳು, ಏಜೆಂಟರು ಹಾಗೂ ಮಧ್ಯವರ್ತಿಗಳು ಶಾಮೀಲಾಗಿದ್ದಾರೆ. ಅವರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕು. ಅರ್ಹ ರೈತರಿಗೆ ಮಧ್ಯಂತರ ಬೆಳೆವಿಮೆ ಪರಿಹಾರ ಕೊಡಿಸಬೇಕು. ಇಲ್ಲದಿದ್ದಲ್ಲಿ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ರೈತರು ಎಚ್ಚರಿಸಿದರು.

ADVERTISEMENT

‘ಕೃಷಿ ಇಲಾಖೆಯ ಯಾವ ಅಧಿಕಾರಿ ಹಾಗೂ ಸಿಬ್ಬಂದಿ ಇದರಲ್ಲಿ ಶಾಮೀಲಾಗಿಲ್ಲ. ಆದರೆ ಈ ಬಗ್ಗೆ ಬಗ್ಗೆ ತನಿಖೆ ನಡೆಸಲಾಗುವುದು. ತಾಲ್ಲೂಕುಮಟ್ಟದ ಕೃಷಿ ಸಿಬ್ಬಂದಿ ಸಭೆ ನಡೆಸಿ, ಈ ಕುರಿತು ಮುಂಜಾಗ್ರತೆ ವಹಿಸುವಂತೆ ಸೂಚಿಸಲಾಗುವುದು’ ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಪ್ರಮೋಧ ತುಂಭಳ ರೈತರಿಗೆ ಭರವಸೆ ನೀಡಿದರು.

ಎಸ್.ಡಿ.ಕಂಬಳಿ, ಹನುಮಂತಪ್ಪ ಹೂಗಾರ, ವಿ.ಎಂ.ಪಾಟೀಲ, ಎಚ್.ಪಿ.ಶೀರನಹಳ್ಳಿ, ಪಿ.ಎನ್.ಮೂಗನೂರ, ಮಾಬುಸಾಬ ಕಮ್ಮಾರ, ಮಳ್ಳಪ್ಪ ಮುಂಡಾಸದ, ಎಸ್.ಎಸ್.ಗುಬ್ಬನಕೊಪ್ಪ, ಎಚ್.ಬಿ.ಕಬ್ಬೇರಳ್ಳಿ, ಎಚ್.ಆರ್.ರೋಣದ, ಎಸ್.ಬಿ.ನಾಗನೂರ, ಎಸ್.ಎಚ್.ಬಣವಿ, ಶಿವಕುಮಾರ ಪರಡ್ಡಿ, ಹನುಮಪ್ಪ ಭೂತರಡ್ಡಿ, ಎಂ.ವಿ.ಸಂಶಿ, ಜಿ.ಎಸ್.ರಡ್ಡೇರ, ಈರಪ್ಪ ಕಡ್ಲಿಕೊಪ್ಪ, ಅಡಿವೆಪ್ಪ ಹಡಪದ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.