ಡಂಬಳ: ದೀಪಾವಳಿ ಹಬ್ಬಕ್ಕೂ ಮುನ್ನ ಪಾತಾಳಕ್ಕೆ ಕುಸಿದಿದ್ದ ಈರುಳ್ಳಿ ಬೆಲೆ ರೈತರನ್ನು ಆತಂಕಕ್ಕೆ ದೂಡಿತ್ತು. ದೀಪಾವಳಿ ಹಬ್ಬ ಮುಗಿಯುತ್ತಿದ್ದಂತೆ ದಿಢೀರ್ ಏರಿಕೆಯಾಗಿದೆ.
ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಈರುಳ್ಳಿ ಬೆಲೆಯಿಂದಾಗಿ ರೈತರು ಹರ್ಷಗೊಂಡಿದ್ದಾರೆ. ಡಂಬಳ ಭಾಗದಲ್ಲಿ ಬೆಳೆಯುವ ಗುಣಮಟ್ಟದ ಕೆಂಪು ಈರುಳ್ಳಿಗೆ ಹೆಚ್ಚಿನ ಬೇಡಿಕೆ ಇದ್ದು, ಉತ್ತಮ ದರ ದೊರೆಯುತ್ತಿದೆ. ರೈತರು ಬೆಂಗಳೂರು, ಹುಬ್ಬಳ್ಳಿ, ಮೈಸೂರು, ದಾವಣಗೆರೆ, ಚಿತ್ರದುರ್ಗ, ಮಧುರೈ, ಕುಂಭಕೋಣಂ, ನೆಲ್ಲೂರ, ತಿರುಚಿ, ಚೆನ್ನೈ ಮುಂತಾದ ನಗರ ಪ್ರದೇಶದ ಮಾರುಕಟ್ಟೆಗೆ ಈರುಳ್ಳಿ ಕಳುಹಿಸುತ್ತಿದ್ದಾರೆ.
‘ತಮಿಳುನಾಡು ರಾಜ್ಯದ ಪ್ರಮುಖ ಮಾರುಕಟ್ಟೆಯಾದ ಮಧುರೈಗೆ ಈರುಳ್ಳಿ ಮಾರಾಟ ಮಾಡಲು ಹೋಗಿದ್ದೆವು. ಗುಣಮಟ್ಟದ ಪ್ರತಿ ಕ್ವಿಂಟಲ್ ಈರುಳ್ಳಿಗೆ ₹4,400 ಲಭಿಸಿದೆ. ಒಟ್ಟು 150 ಪ್ಯಾಕೆಟ್ ಚೀಲ ಈರುಳ್ಳಿ, ಎರಡು ಮತ್ತು ಮೂರನೇ ದರ್ಜೆ ಈರುಳ್ಳಿಗೂ ಉತ್ತಮ ದರವಿದೆ. ಆದರೆ ಲಾರಿ ಬಾಡಿಗೆ ಹಾಗೂ ಇತರ ಖರ್ಚು ವೆಚ್ಚ ಸ್ವಲ್ಪ ದುಬಾರಿಯಾಗುತ್ತದೆ’ ಎನ್ನುತ್ತಾರೆ ಡಂಬಳ ಗ್ರಾಮದ ರೈತ ಅಶೋಕ ಪಾಟೀಲ.
ದೀಪಾವಳಿ ಪೂರ್ವದಲ್ಲಿ ಬೆಂಗಳೂರು ಹಾಗೂ ಇತರ ನಗರ ಪ್ರದೇಶದಲ್ಲಿ ಈರುಳ್ಳಿ ಪ್ರತಿ ಕ್ವಿಂಟಲ್‌ಗೆ ₹1000– ₹1500 ದರಕ್ಕೆ ಮಾರಾಟವಾಗುತ್ತಿತ್ತು. ಇದರಿಂದ ರೈತರು ಸಂಕಷ್ಟ ಎದುರಿಸುವಂತಾಗಿತ್ತು. ಆದರೆ ದೀಪಾವಳಿ ಹಬ್ಬ ಮುಗಿಯುತ್ತಿದ್ದಂತೆ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳವಾಗಿದೆ. ಗುಣಮಟ್ಟದ ಎರಡು ಹಾಗೂ ಮೂರನೇ ದರ್ಜೆಯ ಈರುಳ್ಳಿಗೆ ಕನಿಷ್ಠ ₹1500– ₹5500ದವರೆಗೆ ದರವಿದೆ ಎಂದು ತಿಳಿಸಿದರು.
‘ನಮ್ಮ ಈರುಳ್ಳಿ ಬೆಂಗಳೂರು ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ ₹4,100 ಮಾರಾಟವಾಗಿದೆ. ಪ್ರಸ್ತುತ ಮಾರುಕಟ್ಟೆಯ ದರ ಉತ್ತಮವಾಗಿದೆ’ ಎನ್ನುತ್ತಾರೆ ಡಂಬಳದ ರೈತ ಬೀರಪ್ಪ ಎಸ್. ಬಂಡಿ.
‘₹1500– ₹5800ರಷ್ಟು ದರವಿದೆ. ಗುಣಮಟ್ಟದ ಈರುಳ್ಳಿಗೆ ಬೇಡಿಕೆ ಇದ್ದು ಉತ್ತಮ ದರ ದೊರೆಯುತ್ತಿದೆ. ಎರಡು ಮತ್ತು ಮೂರನೆ ದರ್ಜೆ ಈರುಳ್ಳಿ ಸಹ ಪ್ರತಿ ಕ್ವಿಂಟಲ್‌ಗೆ ₹2,500ರಿಂದ ₹3,500 ರವರೆಗೂ ಮಾರಾಟವಾಗುತ್ತಿವೆ. ಬುಧವಾರ ಮಾರುಕಟ್ಟೆಗೆ 18 ಸಾವಿರ ಪ್ಯಾಕೆಟ್ ಈರುಳ್ಳಿ ಆವಕವಾಗಿದೆ’ ಎಂದು ಬೆಂಗಳೂರು ಎಪಿಎಂಸಿ ಮಾರುಕಟ್ಟೆಯ ಈರುಳ್ಳಿ ಮತ್ತು ಆಲೂಗಡ್ಡೆ ವ್ಯಾಪಾರಸ್ಥರಾದ ಮಹಾಂತೇಶ ಹಸಬಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.