ADVERTISEMENT

ದೆಹಲಿಯಲ್ಲಿ ರೈತರಿಂದ ಸಂಸದರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 15:09 IST
Last Updated 25 ಜುಲೈ 2024, 15:09 IST
ಮಹದಾಯಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ದೆಹಲಿಯಲ್ಲಿ ನರಗುಂದದ ರೈತ ಸೇನೆಯ ಸದಸ್ಯರು ವೀರೇಶ ಸೊಬರದಮಠ ನೇತೃತ್ವದಲ್ಲಿ ಸಂಸದ ಡಾ.ಮಂಜುನಾಥ್ ರವರಿಗೆ ಮನವಿ ಸಲ್ಲಿಸಿದರು
ಮಹದಾಯಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ದೆಹಲಿಯಲ್ಲಿ ನರಗುಂದದ ರೈತ ಸೇನೆಯ ಸದಸ್ಯರು ವೀರೇಶ ಸೊಬರದಮಠ ನೇತೃತ್ವದಲ್ಲಿ ಸಂಸದ ಡಾ.ಮಂಜುನಾಥ್ ರವರಿಗೆ ಮನವಿ ಸಲ್ಲಿಸಿದರು   

ನರಗುಂದ: ಮಹದಾಯಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕಳೆದ ಮೂರು ದಿನಗಳ ಕಾಲ ರೈತ ಸೇನೆ ಕರ್ನಾಟಕ ರಾಜ್ಯ ಘಟಕದ ಸದಸ್ಯರು ವೀರೇಶ ಸೊಬರದಮಠ ನೇತೃತ್ವದಲ್ಲಿ ದೆಹಲಿಯಲ್ಲಿಯೇ ಬೀಡು ಬಿಟ್ಟು ರಾಜ್ಯದ ಸಂಸದರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಈ ಕುರಿತು ಗುರುವಾರ ಮಾತನಾಡಿದ ವೀರೇಶ ಸೊಬರದಮಠ, 'ನಮ್ಮ ಭಾಗದ ಮಹದಾಯಿ ಯೋಜನೆ ಅನುಷ್ಠಾನಗೊಳ್ಳುತ್ತಿಲ್ಲ. ಆದ್ದರಿಂದ ದೆಹಲಿಗೆ ಬಂದು ಸಂಸದರನ್ನು ಭೇಟಿ ಮಾಡಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಮನವಿ ಮಾಡಲಾಗುತ್ತಿದೆ. ಸಚಿವರಾದ ವಿ.ಸೋಮಣ್ಣ, ಎಚ್.ಡಿ.ಕುಮಾರಸ್ವಾಮಿ, ಸಂಸದರಾದ ವೀಶ್ವೆಶ್ವರ ಹೆಗಡೆ ಕಾಗೇರಿ, ಡಾ.ಮಂಜುನಾಥ್, ಗೋವಿಂದ ಕಾರಜೋಳ,ಬಸವರಾಜ ಬೊಮ್ಮಾಯಿ, ಸಾಗರ ಖಂಡ್ರೆ, ಜಗದೀಶ್ ಶೆಟ್ಟರ, ಸೇರಿದಂತೆ ವಿವಿಧ ಸಂಸದರನ್ನು ನಮ್ಮ ರೈತ ಸೇನೆ ಸದಸ್ಯರು ಭೇಟಿ ಮಾಡಿದ್ದೇವೆ’ ಎಂದರು.

‘ಮನವಿಗೆ ಸ್ಪಂದಿಸುವ ವಿಶ್ವಾಸವಿದೆ. ಮಹದಾಯಿ ನದಿಯನ್ನು ಮಲಪ್ರಭೆ ನದಿಗೆ ಜೋಡಿಸುವಂತೆ ಆಗ್ರಹಿಸಿ 2016ರಿಂದಲೇ ನಿರಂತರ ಹೋರಾಟ ನಡೆಸಲಾಗುತ್ತಿದೆ. ಈ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಾಕಷ್ಟು ಬಾರಿ ಮನವಿಯನ್ನೂ ಸಲ್ಲಿಸಲಾಗಿದೆ. ಆದರೆ, ಸರ್ಕಾರವೇ ಪ್ರಾಮಾಣಿಕ ಹೋರಾಟವನ್ನು ಹತ್ತಿಕ್ಕುವ ಕುತಂತ್ರಕ್ಕೆ ಮುಂದಾಗಿ ಹೋರಾಟ ಗಾರರು ತೊಂದರೆ ಪಡುವಂತಾಗಿದೆ. 2016ರಲ್ಲಿ ರೈತರು ಮಹದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಹುಬ್ಬಳ್ಳಿಯಲ್ಲಿ ರೈಲ್ವೆ ರೋಖೋ ಚಳವಳಿ ನಡೆಸಿದಾಗ ರೈತರ ಮೇಲೆ ಲಾಠಿ ಚಾರ್ಚ್ ಮಾಡಲಾಗಿದೆ. ಹೋರಾಟ ನಿರತ ಅನೇಕರು ಮೃತಪಟ್ಟಿದ್ದಾರೆ. 60 ಜನ ರೈತ ಮುಖಂಡರು, 500 ರೈತರ ಮೇಲೆ ಪೊಲೀಸರು 16 ಕೇಸ್‌ಗಳನ್ನು ದಾಖಲಿಸಿದ್ದಾರೆ. ಈಗಾಗಲೇ ಕೆಲವು ರೈತರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೂ ಅನೇಕ ಜನರನ್ನು ಬಂಧಿಸುವ ಕಾರ್ಯ ಪೊಲೀಸರಿಂದ ನಡೆದಿದೆ. ಸರ್ಕಾರ ರೈತರ ಮೇಲಿನ ಎಲ್ಲ ಕೇಸ್‌ಗಳನ್ನು ಕೈಬಿಡಲು ಶಿಫಾರಸು ಮಾಡಬೇಕು ಎಂದು ಒತ್ತಾಯಿಸಲಾಗಿದೆ. ಸಂಸದರು ನಮ್ಮ ಬೇಡಿಕೆಗಳಿಗೆ ಸ್ಪಂದಿಸಬೇಕಿದೆ ಎಂದರು.

ADVERTISEMENT

ರೈತ ಸೇನೆಯ ಮಲ್ಲಣ್ಣ ಅಲೇಕಾರ ಹಾಗೂ ಸದಸ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.