ADVERTISEMENT

ಮುಂಡರಗಿ: ತುಂಗಭದ್ರೆಯಲ್ಲಿ ಮತ್ತೆ ಗರಿಗೆದರಿದ ಮೀನುಗಾರಿಕೆ

ಕಾಶಿನಾಥ ಬಿಳಿಮಗ್ಗದ
Published 14 ಸೆಪ್ಟೆಂಬರ್ 2024, 6:11 IST
Last Updated 14 ಸೆಪ್ಟೆಂಬರ್ 2024, 6:11 IST
ಮುಂಡರಗಿ ತಾಲ್ಲೂಕಿನ ಕೊರ್ಲಹಳ್ಳಿ ಗ್ರಾಮದ ಬಳಿ ಹರಿದಿರುವ ತುಂಗಭದ್ರಾ ನದಿಯಲ್ಲಿ ಮೀನು ಹಿಡಿಯುತ್ತಿರುವ ಮೀನುಗಾರರು
ಮುಂಡರಗಿ ತಾಲ್ಲೂಕಿನ ಕೊರ್ಲಹಳ್ಳಿ ಗ್ರಾಮದ ಬಳಿ ಹರಿದಿರುವ ತುಂಗಭದ್ರಾ ನದಿಯಲ್ಲಿ ಮೀನು ಹಿಡಿಯುತ್ತಿರುವ ಮೀನುಗಾರರು   

ಮುಂಡರಗಿ: ಮಳೆ ಕೊರತೆ, ನದಿಯಲ್ಲಿ ನೀರಿನ ಅಭಾವ ಹಾಗೂ ಮತ್ತಿತರ ಕಾರಣಗಳಿಂದ ತುಂಗಭದ್ರಾ ನದಿಯಲ್ಲಿ ಕಳೆದ ಹಲವು ತಿಂಗಳುಗಳಿಂದ ಸ್ಥಗಿತಗೊಂಡಿದ್ದ ಮೀನುಗಾರಿಕೆ ಈಗ ಪುನಃ ಗರಿಗೆದರಿದ್ದು, ನದಿ ಪಾತ್ರದ ಗ್ರಾಮಗಳ ಮೀನುಗಾರರ ಮುಖದಲ್ಲಿ ಮಂದಹಾಸ ಮೂಡಿದೆ.

ತುಂಗಭದ್ರಾ ನದಿ ದಂಡೆಯ ಮೇಲಿರುವ ತಾಲ್ಲೂಕಿನ ಹೆಸರೂರು, ಕಕ್ಕೂರು, ಕೊರ್ಲಹಳ್ಳಿ, ಶಿಂಗಟಾಲೂರು, ಹಮ್ಮಿಗಿ, ಬಿದರಳ್ಳಿ ಮೊದಲಾದ ಗ್ರಾಮಗಳಲ್ಲಿ ನೂರಾರು ಮೀನುಗಾರ ಕುಟುಂಬಗಳು ವಾಸಿಸುತ್ತಿವೆ. ಕೊರ್ಲಹಳ್ಳಿ ಗ್ರಾಮವೊಂದರಲ್ಲಿಯೇ ಸುಮಾರು 300 ಮೀನುಗಾರ ಕುಟುಂಬಗಳಿವೆ. ಅವರೆಲ್ಲ ಮೀನುಗಾರಿಕೆಯೊಂದನ್ನೇ ಅವಲಂಬಿಸಿದ್ದು, ಅದರಿಂದಲೇ ಜೀವನ ನಿರ್ವಹಿಸುತ್ತಾರೆ.
ಕಳೆದ ಬೇಸಿಗೆಯಲ್ಲಿ ಅವಧಿ ಪೂರ್ವದಲ್ಲಿಯೇ ತುಂಗಭದ್ರಾ ನದಿ ಬತ್ತಿದ್ದರಿಂದ ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿಯೇ ಮೀನುಗಾರಿಕೆ ಸಂಪೂರ್ಣ ಸ್ಥಗಿತಗೊಂಡಿತ್ತು. ಮೀನುಗಾರರು ಮಳೆ ಹಾಗೂ ಹೊಳೆ ಬರುವುದನ್ನೆ ಕಾಯುತ್ತಿದ್ದರು. ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಸಕಾಲದಲ್ಲಿ ನಿರೀಕ್ಷಿಸಿದಷ್ಟು ಮಳೆಯಾಗದ ಕಾರಣ ಮೀನುಗಾರಿಕೆ ಇಲ್ಲದೇ ನೂರಾರು ಕುಟುಂಬಗಳು ಪರಿತಪಿಸಿದವು.

ಎರಡು-ಮೂರು ತಿಂಗಳಿಂದ ಶಿವಮೊಗ್ಗ, ಮಲೆನಾಡು ಸೇರಿದಂತೆ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಸಾಕಷ್ಟು ಮಳೆ ಸುರಿದ ಕಾರಣ ತುಂಗಭದ್ರಾ ನದಿಗೆ ಸಾಕಷ್ಟು ನೀರು ಹರಿದು ಬರತೊಡಗಿತು. ಜೂನ್, ಜುಲೈ ತಿಂಗಳಿನಲ್ಲಿ ನದಿ ಭರ್ತಿಯಾಗಿ ಸಾಕಷ್ಟು ನೀರು ಹರಿಯತೊಡಗಿತು. ಇದರಿಂದಾಗಿ ಕಳೆದ ಹಲವು ದಿನಗಳಿಂದ ನದಿಯಲ್ಲಿ ಮೀನು ಹಿಡಿಯುವ ಕಾರ್ಯ ಭರದಿಂದ ಸಾಗಿದ್ದು, ಮೀನುಗಾರರಿಗೆ ಕೈತುಂಬಾ ಕಾಸು ಹಾಗೂ ಕೆಲಸ ದೊರೆಯುವಂತಾಗಿದೆ.

ADVERTISEMENT

ಕೊರ್ಲಹಳ್ಳಿ ಗ್ರಾಮದ ಬಳಿ ತುಂಗಭದ್ರಾ ನದಿಯಲ್ಲಿ ನಿತ್ಯ ಹಲವು ಮೀನುಗಾರ ಕುಟುಂಬಗಳ ಸದಸ್ಯರು ತೆಪ್ಪಗಳ (ನೀರಿನಲ್ಲಿ ಮೀನು ಹಿಡಿಯಲು ಮೀನುಗಾರರು ಬಳಸುವ ಬುಟ್ಟಿ) ನೆರವಿನಿಂದ ಮೀನು ಹಿಡಿಯುವ ಕಾಯಕದಲ್ಲಿ ನಿರತರಾಗಿರುತ್ತಾರೆ. ನಸುಕಿನಲ್ಲಿಯೇ ನದಿಗೆ ಇಳಿಯುವ ಮೀನುಗಾರರು ಮುಂಜಾನೆ 9ರಿಂದ10ಗಂಟೆಯೊಳಗೆ ತಲಾ 8-10 ಕೆ.ಜಿ ಮೀನು ಸಂಗ್ರಹಿಸಿ ದಡ ಸೇರುತ್ತಾರೆ.

ನದಿಯಲ್ಲಿ ಹಿಡಿದ ಮೀನುಗಳನ್ನು ಹತ್ತಿರದ ಏಜಂಟರಿಗೆ ಅಥವಾ ವ್ಯಾಪಾರಸ್ಥರಿಗೆ ಮಾರಾಟ ಮಾಡುತ್ತಾರೆ. ಇಲ್ಲಿ ದೊರೆಯುವ ಮೀನುಗಳನ್ನು ಹತ್ತಿರದ ಹೂವಿನಹಡಗಲಿ, ಮುಂಡರಗಿ, ಕೊಪ್ಪಳ, ಶಿರಹಟ್ಟಿ, ಲಕ್ಷ್ಮೇಶ್ವರ ಮೊದಲಾದ ಪಟ್ಟಣಗಳ ವ್ಯಾಪಾರಸ್ಥರು ಕೊಂಡುಕೊಳ್ಳುತ್ತಾರೆ.

ನದಿಯಲ್ಲಿ ನೀರು ಈಗಿರುವಂತೆ ತಟಸ್ಥವಾಗಿ ನಿಂತರೆ ಡಿಸೆಂಬರ್‌ವರೆಗೆ ಮೀನುಗಳನ್ನು ಸುಲಭವಾಗಿ ಹಿಡಿಯಬಹುದು. ಆದರೆ ನದಿಯಲ್ಲಿ ಅಕಾಲದಲ್ಲಿ ನೀರು ಖಾಲಿಯಾದರೆ ಅಥವಾ ಮಳೆ ಹೆಚ್ಚಾಗಿ ನದಿಯಲ್ಲಿ ನೀರು ರಭಸವಾಗಿ ಹರಿಯತೊಡಗಿದರೆ ಪುನಃ ಮೀನುಗಾರಿಕೆಗೆ ಹಿನ್ನಡೆಯಾಗುತ್ತದೆ. ಹಾಗಾಗದಿರಲಿ ಎಂದು ಮೀನುಗಾರರು ಬೇಡಿಕೊಳ್ಳುತ್ತಾರೆ.

ಸಾಮಾನ್ಯವಾಗಿ ಪ್ರತಿ ವರ್ಷ ಆಗಸ್ಟ್‌ ತಿಂಗಳಿನಿಂದ ಮೀನುಗಾರಿಕೆ ವೇಗ ಪಡೆದುಕೊಳ್ಳುತ್ತದೆ. ಆದರೆ ಈ ವರ್ಷ ಆಗಸ್ಟ್‌ನಲ್ಲಿ ಹೊಸಪೇಟೆ ಬಳಿಯ ತುಂಗಭದ್ರಾ ಡ್ಯಾಂನ 19ನೇ ಗೇಟ್ ಮುರಿದು ಹೋಯಿತು. ಇದರಿಂದಾಗಿ ಸಾಕಷ್ಟು ಪ್ರಮಾಣದ ನೀರು ನಿತ್ಯ ಹರಿದು ಹೋಯಿತು. ಹೀಗೆ ನಿತ್ಯ ನೀರು ರಭಸದಿಂದ ಹರಿಯತೊಡಗಿದ್ದರಿಂದ ಇಲ್ಲಿಯ ಮೀನುಗಾರಿಕೆ ವಿಳಂಬವಾಯಿತು.

ಮುಂಡರಗಿ ಪಟ್ಟಣದ ಜಾಗೃತ್ ವೃತ್ತದ ಮಾರುಕಟ್ಟೆಯಲ್ಲಿ ಮೀನು ಮಾರಾಟದಲ್ಲಿ ತೊಡಗಿರುವ ವ್ಯಾಪಾರಿಗಳು
ಸದ್ಯ ನದಿಯಲ್ಲಿ ಸಾಕಷ್ಟು ನೀರಿದ್ದು ಮೀನುಗಾರಿಕೆಗೆ ತುಂಬಾ ಅನುಕೂಲವಾಗಿದೆ. ಡಿಸೆಂಬರ್ ತಿಂಗಳವರೆಗೂ ಇದೇ ರೀತಿ ನೀರು ತಟಸ್ಥವಾಗಿ ನಿಂತರೆ ಮೀನುಗಾರ ಕುಟುಂಬಗಳು ನಾಲ್ಕು ಕಾಸು ಮಾಡಿಕೊಳ್ಳುತ್ತವೆ
ಮಹೇಶ ಕಿಳ್ಳಿಕ್ಯಾತರ ಕೊರ್ಲಹಳ್ಳಿ ಗ್ರಾಮದ ಮೀನುಗಾರ
ಮಧ್ಯವರ್ತಿಗಳಿಗೆ ಮಾತ್ರ ಲಾಭ
ತುಂಗಭದ್ರಾ ನದಿಯಲ್ಲಿ ಜಿಲೇಬಿ ಹವಳಮಟ್ಟು ಮುರುಕೋಡು ಕಾಗಿ ಬಾಳಿ ಮೊದಲಾದ ತಳಿಯ ಮೀನುಗಳು ದೊರೆಯುತ್ತವೆ. ಒಂದೊಂದು ತಳಿಯ ಮೀನಿಗೆ ಒಂದೊಂದು ದರ ನಿಗದಿಯಾಗಿರುತ್ತದೆ. ಆದರೆ ಇಲ್ಲಿಯ ಮೀನುಗಾರರು ಸಾಮಾನ್ಯವಾಗಿ ಒಂದು ಕೆ.ಜಿ ಮೀನನ್ನು ₹ 50-60ಕ್ಕೆ ಮಾರಾಟ ಮಾಡುತ್ತಾರೆ. ಪ್ರತಿಯೊಬ್ಬ ಮೀನುಗಾರರು ನಿತ್ಯ ₹ 400- ₹ 500 ಆದಾಯ ಪಡೆದುಕೊಂಡು ಮಧ್ಯಾಹ್ನ ಬೇರೆ ಕೆಲಸಕ್ಕೆ ತೆರಳುತ್ತಾರೆ. ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ಮೀನುಗಳ ತಳಿ ಗಾತ್ರ ಆಕಾರ ಮೊದಲಾದವುಗಳಿಗೆ ಅನುಗುಣವಾಗಿ ₹ 100- ₹200ಕ್ಕೆ ಕೆಜಿಯಂತೆ ಗ್ರಾಹಕರಿಗೆ ಮಾರಾಟ ಮಾಡುತ್ತಾರೆ. ಎಲ್ಲ ಮಾರುಕಟ್ಟೆಗಳಲ್ಲಿ ಇರುವಂತೆ ಇಲ್ಲಿಯೂ ಮೀನುಗಾರರಿಗಿಂತ ಮಧ್ಯವರ್ತಿಗಳೇ ಹೆಚ್ಚು ಲಾಭ ಮಾಡಿಕೊಳ್ಳುತ್ತಾರೆ.
ನೀರು ತಟಸ್ಥವಾಗಿರಬೇಕು
ನದಿಯಲ್ಲಿ ನೀರು ರಭಸವಾಗಿ ಹರಿದರೆ ಮೀನುಗಾರರಿಗೆ ಸಾಕಷ್ಟು ಮೀನುಗಳು ದೊರೆಯುವುದಿಲ್ಲ. ನೀರು ತಟಸ್ಥವಾಗಿ ನಿಂತರೆ ಭರಪೂರ ಮೀನುಗಳು ದೊರೆಯುತ್ತವೆ. ಹೀಗಾಗಿ ಮೀನುಗಾರರು ನದಿಯಲ್ಲಿ ನೀರು ತಟಸ್ಥವಾಗಿ ನಿಲ್ಲಬೇಕೆಂದು ಬಯಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.