ADVERTISEMENT

ನರಗುಂದ | ಫುಟ್‌ಪಾತ್‌ ಮಾಯ; ಪಾದಚಾರಿಗಳ ಸ್ಥಿತಿ ಅಯೋಮಯ

ವ್ಯಾಪಾರಿಗಳಿಂದ ಪಾದಚಾರಿ ಮಾರ್ಗ ಅತಿಕ್ರಮಣ: ತೆರವಿಗೆ ಕ್ರಮವಹಿಸದ ಪುರಸಭೆ– ಆರೋಪ

ಬಸವರಾಜ ಹಲಕುರ್ಕಿ
Published 8 ಜುಲೈ 2024, 5:06 IST
Last Updated 8 ಜುಲೈ 2024, 5:06 IST
ನರಗುಂದದಲ್ಲಿ ಹುಬ್ಬಳ್ಳಿ– ವಿಜಯಪುರ ರಾಷ್ಟ್ರೀಯ ಹೆದ್ದಾರಿಯ ಫುಟ್‌ಪಾತ್‌ಗಳನ್ನೂ ಗೂಡಂಗಡಿಗಳು ಆಕ್ರಮಿಸಿಕೊಂಡ ದೃಶ್ಯ 
ನರಗುಂದದಲ್ಲಿ ಹುಬ್ಬಳ್ಳಿ– ವಿಜಯಪುರ ರಾಷ್ಟ್ರೀಯ ಹೆದ್ದಾರಿಯ ಫುಟ್‌ಪಾತ್‌ಗಳನ್ನೂ ಗೂಡಂಗಡಿಗಳು ಆಕ್ರಮಿಸಿಕೊಂಡ ದೃಶ್ಯ    

ನರಗುಂದ: ಹುಬ್ಬಳ್ಳಿ- ವಿಜಯಪುರ ರಾಷ್ಟ್ರೀಯ ಹೆದ್ದಾರಿ ಮಧ್ಯೆ ಇರುವ ನರಗುಂದ ಪಟ್ಟಣ ವೇಗವಾಗಿ ಬೆಳೆಯುತ್ತಿದೆ. ಪಟ್ಟಣ ಅಭಿವೃದ್ಧಿಗೊಂಡಂತೆ ಜನದಟ್ಟಣೆ, ವಾಹನದಟ್ಟಣೆಯ ಸಮಸ್ಯೆ ಕೂಡ ಹೆಚ್ಚಾಗಿದೆ. ಅದರ ಜತೆಗೆ ಅಪಘಾತ, ಸಾವು– ನೋವುಗಳು ಹೆಚ್ಚುತ್ತಲೇ ಇವೆ. ಈ ಬಗೆಯ ಬೆಳವಣಿಗೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಸಿಂಧನೂರು– ಹೆಮ್ಮಡಗಾ ರಾಜ್ಯ ಹೆದ್ದಾರಿ, ಹುಬ್ಬಳ್ಳಿ– ವಿಜಯಪುರ ರಾಷ್ಟ್ರೀಯ ಹೆದ್ದಾರಿ ಪಟ್ಟಣದ ಬಸ್ ನಿಲ್ದಾಣದ ಪಕ್ಕದಲ್ಲೇ ಹಾದು ಹೋಗಿದೆ. ನಿತ್ಯವೂ ಇಲ್ಲಿ ಸಾವಿರಾರು ಬಸ್‌ಗಳು, ಟ್ರಕ್‌ಗಳು ಸೇರಿದಂತೆ ವಾಹನ ಸಂಚಾರ ಅಧಿಕವಾಗಿದೆ. ಇದರಿಂದ ಇಲ್ಲಿ ಎಚ್ಚರದಿಂದ ಹೆಜ್ಜೆ ಇಡಬೇಕಿದೆ. ಆದರೆ, ನರಗುಂದ ಪಟ್ಟಣದಲ್ಲಿ ಪಾದಚಾರಿಗಳು ಸಂಚರಿಸಲು ಬೇಕಾದ ಫುಟ್‌ಪಾತ್‌ಗಳು ಇದ್ದು ಇಲ್ಲದಂತಾಗಿವೆ. ಇದರಿಂದ ಹೆದ್ದಾರಿ ನಡುವೆಯೇ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ವಿಜಯಪುರ ರಸ್ತೆಯ ವೀರನಗೌಡ್ರ ಪೆಟ್ರೋಲ್ ಪಂಪ್‌ನಿಂದ ಹುಬ್ಬಳ್ಳಿ ರಸ್ತೆಯ ಕಲಕೇರಿ ಸಮೀಪದ ಹಿರೇಹಳ್ಳದವರೆಗೂ ರಾಷ್ಟ್ರೀಯ ಹೆದ್ದಾರಿ ನರಗುಂದ ವಿಭಾಗದವರು ಫುಟ್‌ಪಾತ್‌ ಮತ್ತು ರಸ್ತೆ ವಿಭಜಕ ನಿರ್ಮಿಸಬೇಕಿತ್ತು. ಆದರೆ, ಅಲ್ಲಲ್ಲಿ ಮಾತ್ರ ಫುಟ್‌ಪಾತ್ ನಿರ್ಮಿಸಲಾಗಿದೆ. ಆದರೆ, ಕೆಲವಡೆ ಇನ್ನೂ ನಿರ್ಮಾಣವೇ ಆಗಿಲ್ಲ. ಇದರ ಹಿಂದಿನ ಕಾರಣ ಮಾತ್ರ ತಿಳಿಯುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ADVERTISEMENT

ರಸ್ತೆ ವಿಭಜಕ ಕಾಮಗಾರಿಯೂ ಅರ್ಧಂಬರ್ಧ ಆಗಿದ್ದು, ಸರ್ಕಾರದ ಹಣ ಸಮರ್ಪಕವಾಗಿ ಬಳಕೆಯಾಗದಿರುವುದು ಗೋಚರವಾಗುತ್ತದೆ.

ಗೂಡಂಗಡಿಳದ್ದೇ ಸಾಮ್ರಾಜ್ಯ

ಬಸ್‌ ನಿಲ್ದಾಣದ ಸುತ್ತಮುತ್ತ ಇವರು ಫುಟ್‌ಪಾತ್‌ಗಳು ಇದ್ದೂ ಇಲ್ಲದಂತಾಗಿವೆ. ಏಕೆಂದರೆ, ಅಲ್ಲಿರುವ ಫುಟ್‌ಪಾತ್‌ ಮೇಲೆ ಹಾಗೂ ಅವುಗಳ ಪಕ್ಕದಲ್ಲಿರುವ ಕಾಂಕ್ರೀಟ್ ಚರಂಡಿ ಮೇಲೆ ಗೂಡಂಗಡಿಗಳು ನಿರ್ಮಾಣಗೊಂಡಿವೆ. ಕೆಲವರು ಹೆದ್ದಾರಿಯ ಮೇಲೂ ಅಂಗಡಿ ಚಾಚಿದ್ದಾರೆ. ಇದರಿಂದ ಬಸ್ ನಿಲ್ದಾಣದ ಸಮೀಪ ಶಿವಾಜಿ ವೃತ್ತದಿಂದ ಹಿಡಿದು ಹೆಸ್ಕಾಂ ಕಚೇರಿಯವರೆಗೂ ಗೂಡಂಗಡಿಳದ್ದೇ ಸಾಮ್ರಾಜ್ಯವಾಗಿದೆ.

ಫುಟ್‌ಪಾತ್‌ಗಳ ಅತಿಕ್ರಮಣದಿಂದ ಸಂಚಾರ ದಟ್ಟಣೆ ನಿರ್ವಹಣೆ ಮಾಡಲು ಪೊಲೀಸರು ಹರಸಾಹಸ ಪಡಬೇಕಿದೆ. ಬಸ್ ನಿಲ್ದಾಣದ ಎದುರು ವಾಣಿಜ್ಯ ಮಳಿಗೆಗಳು ಇದ್ದು, ಅವುಗಳನ್ನು ಬಾಡಿಗೆ ಪಡೆದುಕೊಂಡ ಅಂಗಡಿದಾರರು ಫುಟ್‌ಪಾತ್ ದಾಟಿ ಅಂಗಡಿಗಳನ್ನು ವಿಸ್ತರಿಸಿದ್ದಾರೆ. ಇದರಿಂದ ಬಸ್ ನಿಲ್ದಾಣಕ್ಕೆ ಬರಲು ಪ್ರಯಾಣಿಕರು ತೊಂದರೆ ಪಡಬೇಕಿದೆ.

ಮಿನಿವಿಧಾನಸೌಧ, ಶಾಸಕರ ಜನಸಂಪರ್ಕ ಕಾರ್ಯಾಲಯ ಹಾಗೂ ಸ್ವಗೃಹ ವಿಶ್ವೇಶ್ವರಯ್ಯ ಪಾಲಿಟೆಕ್ನಿಕ್ ಡಿಪ್ಲೊಮಾ ಕಾಲೇಜು ಇದೆ. ಹೋಟೆಲ್, ಡಾಬಾಗಳು ಸಾಕಷ್ಟಿವೆ. ನಿತ್ಯವೂ ನೂರಾರು ವಿದ್ಯಾರ್ಥಿಗಳು, ಸಾವಿರಾರು ಜನರು ಇದೇ ಹೆದ್ದಾರಿ ಮೂಲಕ ತೆರಳುತ್ತಾರೆ. ಆದರೆ, ಫುಟ್‌ಪಾತ್‌ಗಳು ಮಾತ್ರ ಪೂರ್ಣ ಪ್ರಮಾಣದಲ್ಲಿ ನಿರ್ಮಾಣಗೊಂಡಿಲ್ಲ. ಇಲ್ಲೆಲ್ಲಾ ಜನದಟ್ಟಣೆಯಿಂದ ಕೂಡಿರುತ್ತದೆ. ಆದರೆ ಇಲ್ಲಿ ಫುಟ್‌ಪಾತ್ ಮೇಲೆ ನಡೆದು ಹೋಗಬೇಕಿದ್ದ ಜನರು ಫುಟ್‌ಪಾತ್ ಬಿಟ್ಟು ರಸ್ತೆಗೆ ಇಳಿಯುವುದು ಅನಿವಾರ್ಯವಾಗಿದೆ.

ವಾಹನಗಳ ನಿಲುಗಡೆ

 ಕೆಲವೆಡೆ ಅರ್ಧಂಬರ್ಧ ಫುಟ್‌ಪಾತ್ ನಿರ್ಮಿಸಲಾಗಿದೆ. ಕೆಲವೆಡೆ ಫುಟ್‌ಪಾತ್ ಮೇಲೆ ಮುಳ್ಳುಕಂಟಿಗಳು ಬೆಳೆದಿವೆ. ಕೆಲವರು ವಾಹನ ನಿಲುಗಡೆ ಮಾಡುತ್ತಾರೆ. ಹೀಗಾಗಿ ಕೆಲವೆಡೆ ಪಾದಚಾರಿ ಮಾರ್ಗವೇ ಕಣ್ಮರೆಯಾಗಿವೆ. ಇದರಿಂದ ಸರ್ಕಾರದ ಅನುದಾನ ವ್ಯರ್ಥವಾಗಿರುವುದಷ್ಟೇ ಅಲ್ಲ, ಸುಗಮ ಸಂಚಾರಕ್ಕೆ, ಸಾರ್ವಜನಿಕರ ಸುರಕ್ಷತೆಗೆ ಸರ್ಕಾರದ ಕ್ರಮವೂ ವಿಫಲವಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಪಟ್ಟಣದಲ್ಲಿ ಪಾದಚಾರಿ ಮಾರ್ಗಗಳ ಅತಿಕ್ರಮಣ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರು ಆಗ್ರಹಿಸಿದರೂ ಪ್ರಯೋಜನವಾಗುತ್ತಿಲ್ಲ. ಸಿಂಧನೂರು ಹೆಮ್ಮಡಗಾ ರಾಜ್ಯ ಹೆದ್ದಾರಿಯಾದ ಸವದತ್ತಿ ರಸ್ತೆಯದ್ದೂ ಇದೇ ಸ್ಥಿತಿ.

ಆಸ್ಪತ್ರೆ ಎದುರೇ ಗೂಡಂಗಡಿ

ತಾಲ್ಲೂಕು ಭಾವೆ ಸರ್ಕಾರಿ ಆಸ್ಪತ್ರೆ ಹುಬ್ಬಳ್ಳಿ ವಿಜಯಪುರ ರಾಷ್ಟ್ರೀಯ ಹೆದ್ಜಾರಿ ಪಕ್ಕವೇ ಇದ್ದು, ಅದಕ್ಕೆ ಹೊಂದಿಕೊಂಡೇ ಫುಟ್‌ಪಾತ್ ಮೇಲೆ ಗೂಡಂಗಡಿಗಳು ತಲೆ ಎತ್ತಿವೆ. ಅದರಲ್ಲಿ ಶೇ 90ರಷ್ಟು ಚಹಾ, ಎಗ್ ರೈಸ್ ಅಂಗಡಿಗಳೇ ಇವೆ. ಇದರಿಂದ ಅದರ ವಾಸನೆ ಆಸ್ಪತ್ರೆ ರೋಗಿಗಳಿಗೆ ತೊಂದರೆ ಉಂಟು ಮಾಡಿದರೆ, ಅಂಗಡಿಯವರು ತಮ್ಮ ಅಂಗಡಿಗಳ ತ್ಯಾಜ್ಯವನ್ನು ಹಿಂದೆ ಆಸ್ಪತ್ರೆ ಆವರಣದಲ್ಲಿ ಕಂಪೌಂಡಗೆ ಚೆಲ್ಲುವುದು ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ.

ಈ ಹೆದ್ದಾರಿಗೆ ಹೊಂದಿಕೊಂಡು ಬಾಲಕಿಯರ ಸರ್ಕಾರಿ ಪ್ರೌಢ ಶಾಲೆ ಹಾಗೂ ಶಾಸಕರ ಮಾದರಿ ಪ್ರಾಥಮಿಕ ಶಾಲೆ ನಂ 1 ಹಾಗೂ ಕ್ಷೇತ್ರ ಶಿಕ್ಷಣ ಸಂಪನ್ಮೂಲ ಕೇಂದ್ರಗಳಿವೆ. ಆದರೆ ಇವುಗಳಿಗೆ ತೆರಳಲು ವಿದ್ಯಾರ್ಥಿಗಳು ತೀವ್ರ ತೊಂದರೆಪಡಬೇಕಿದೆ. ಹೆದ್ದಾರಿ ದಾಟಲು ಮೇಲ್ಸೇತುವೆ (ಫ್ಲೈ ಒವರ್) ನಿರ್ಮಿಸಲು ಮುಂದಾಗಿದ್ದು, ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ.

ವಾಹನಗಳದ್ದೇ ಕಾರುಬಾರು

ಹೆದ್ದಾರಿ ಪಕ್ಕವೇ ಸ್ಥಳೀಯ ಆಟೊ, ಗೂಡ್ಸ್‌ ಗಾಡಿಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಲಾಗುತ್ತಿದೆ. ಒಂದೆಡೆ ಫುಟ್‌ಪಾತ್‌ ಇಲ್ಲ, ಮತ್ತೊಂದೆಡೆ ಹೆದ್ದಾರಿ ಪಕ್ಕ ವಾಹನಗಳದ್ದೇ ಕಾರುಬಾರು. ಹೀಗಾದರೆ ಸುಗಮ ಸಂಚಾರ ನಡೆದೀತೆ ಎಂದು ಸಾರ್ವಜನಿಕರು ನಿತ್ಯ ಬೇಸರ ವ್ಯಕ್ತಪಡಿಸುತ್ತಾರೆ.

ಯಾವಾಗಲೂ ಸಂಚಾರ ದಟ್ಟಣೆಯಿಂದ ಕೂಡಿರುವ ಸವದತ್ತಿ ರಸ್ತೆಯಲ್ಲೂ ಪಾದಚಾರಿಗಳು ಸಂಚರಿಸದ ಸ್ಥಿತಿ ಇದೆ. ರಸ್ತೆ ಪಕ್ಕವೇ ಕೆಎಸ್ಆರ್‌ಟಿಸಿ ವಾಣಿಜ್ಯ ಮಳಿಗೆಗಳು ಇದ್ದು, ಅದರಲ್ಲಿಯ ಅಂಗಡಿಗಳು ವಿಸ್ತರಣೆಗೊಂಡಿದ್ದು ಇದರಿಂದ ಈ ಹೆದ್ದಾರಿಯಲ್ಲೂ ನಿತ್ಯ ತೊಂದರೆ ಪಡಬೇಕಿದೆ. ಇದನ್ನು ಸಮರ್ಪಕವಾಗಿ ನಿರ್ವಹಿಸಬೇಕಾದ ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳು, ಪುರಸಭೆ ಅಧಿಕಾರಿಗಳು ರಸ್ತೆ ಅತಿಕ್ರಮಣ ತೆರವುಗೊಳಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಾರೆ. ಆದ್ದರಿಂದ ಸಂಬಂಧಿಸಿದ ವಿವಿಧ ಇಲಾಖೆಗಳ ಅಧಿಕಾರಿಗಳು ಅತಿಕ್ರಮಣ ತೆರವಿಗೆ ಮುಂದಾಗಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

ಯಾರು ಏನಂತಾರೆ?

‘ಪಾದಚಾರಿಗಳಿಗೆ ಸಂಕಷ್ಟ’

ಗೂಡಂಗಡಿಗಳು ರಾಷ್ಟ್ರೀಯ ಹೆದ್ದಾರಿಯ ಫುಟ್‌ಪಾತ್‌ನ್ನೇ ಆಕ್ರಮಿಸಿವೆ. ಇದರಿಂದ ಸಂಚಾರಕ್ಕೆ ತೊಂದರೆಯಾಗಿದ್ದು ಪಾದಚಾರಿಗಳ ಸಂಕಷ್ಟ ಹೇಳತೀರದಾಗಿದೆ. ತಾಲ್ಲೂಕು ಶಹರ ಮಟ್ಟಕ್ಕೆ ಸಂಬಂಧಿಸಿದ ಇಲಾಖಾಧಿಕಾರಿಗಳು ಗಮನಹರಿಸಬೇಕು. ಇಲ್ಲವಾದರೆ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗುವುದು –ಎಸ್.ಎಸ್‌.ಪಾಟೀಲ ಅಧ್ಯಕ್ಷರು ಭಾರತೀಯ ಕಿಸಾನ್‌ ಸಂಘ ನರಗುಂದ ಘಟಕ

‘ಮಾಲೀಕರಿಗೆ ನೋಟಿಸ್‌’

ಜಾರಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಫುಟ್‌ಪಾತ್‌ಗಳ ಅತಿಕ್ರಮಣ ಮಾಡಿರುವ ಗೂಡಂಗಡಿಗಳ ಮಾಲೀಕರಿಗೆ ಎರಡು ವಾರದ ಹಿಂದೆ ನೋಟಿಸ್ ನೀಡಲಾಗಿದೆ. ತೆರವುಗೊಳಿಸದೇ ಇದ್ದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಇನ್ನೂ ನಿರ್ಮಾಣಗೊಳ್ಳಬೇಕಾದ ಫುಟ್‌ಪಾತ್ ಹಾಗೂ ರಸ್ತೆ ವಿಭಜಕ ಕಾಮಗಾರಿ ಪೂರ್ಣಗೊಳಿಸಲು ಸಂಬಂಧಿಸಿದ ಗುತ್ತಿಗೆದಾರರಿಗೆ ಸೂಚಿಸಲಾಗಿದೆ – ಸಂತೋಷ ಆರ್. ಕೋಟಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಷ್ಟ್ರೀಯ ಹೆದ್ದಾರಿ ವಿಭಾಗ ನರಗುಂದ

‘ಜಂಟಿ ಕಾರ್ಯಾಚರಣೆಗೆ ಯೋಜನೆ’

ಫುಟ್‌ಪಾತ್ ತೆರವುಗೊಳಿಸಲು ಸಾರ್ವಜನಿಕರ ಮನವಿ ಪರಿಗಣಿಸಿ ಪೊಲೀಸ್ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆಗಳ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಲಾಗುವುದು. ಅಮಿತ್ ತಾರದಾಳೆ ಪುರಸಭೆ ಮುಖ್ಯಾಧಿಕಾರಿ ಸಾರ್ವಜನಿಕರಿಗೆ ತೊಂದರೆ ಫುಟ್‌ಪಾತ್‌ಗಳ ಅತಿಕ್ರಮಣದಿಂದ ಸಾರ್ವಜನಿಕರು ವಿದ್ಯಾರ್ಥಿಗಳು ರಸ್ತೆಯಲ್ಲಿಯೇ ನಡೆದು ಹೋಗುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಅದರಿಂದ ಅಪಘಾತಗಳು ಸಂಭವಿಸುತ್ತಿವೆ. ಆದ್ದರಿಂದ ಕೂಡಲೇ ಅತಿಕ್ರಮಣ ತೆರವುಗೊಳಿಸಬೇಕು. ಇಲ್ಲವಾದರೆ ಪ್ರತಿಭಟನೆ ಮಾಡಲಾಗುವುದು – ನಬೀಸಾಬ್ ಕಿಲ್ಲೇದಾರ ಅಧ್ಯಕ್ಷರು ಕರವೇ ನರಗುಂದ

ನರಗುಂದದಲ್ಲಿ ಹುಬ್ಬಳ್ಳಿ– ವಿಜಯಪುರ ರಾಷ್ಟ್ರೀಯ ಹೆದ್ದಾರಿಯ ಫುಟ್‌ಪಾತ್‌ಗಳನ್ನೂ ಗೂಡಂಗಡಿಗಳು ಆಕ್ರಮಿಸಿಕೊಂಡಿರುವುದು

ನರಗುಂದದಲ್ಲಿ ಹುಬ್ಬಳ್ಳಿ– ವಿಜಯಪುರ ರಾಷ್ಟ್ರೀಯ ಹೆದ್ದಾರಿಯ ಫುಟ್‌ಪಾತ್‌ಗಳನ್ನೂ ಗೂಡಂಗಡಿಗಳು ಆಕ್ರಮಿಸಿಕೊಂಡಿರುವುದು

ನರಗುಂದದಲ್ಲಿ ಹುಬ್ಬಳ್ಳಿ– ವಿಜಯಪುರ ರಾಷ್ಟ್ರೀಯ ಹೆದ್ದಾರಿಯ ಕೆಲವುಕಡೆ ಫುಟ್‌ಪಾತ್‌ ಇಲ್ಲದ ಪರಿಣಾಮ ವಿದ್ಯಾರ್ಥಿಗಳು ಹೆದ್ದಾರಿಯಲ್ಲಿಯೇ ನಡೆಯುತ್ತಿರುವುದು

ನರಗುಂದದ ಸವದತ್ತಿ ರಸ್ತೆಯಲ್ಲಿ ಪಾರ್ಕಿಂಗ್‌ಗೆ ಅವಕಾಶ ಇಲ್ಲದಿದ್ದರೂ ಫುಟ್‌ಪಾತ್ ಪಕ್ಕವೇ ದ್ವಿಚಕ್ರ ವಾಹನಗಳನ್ನು ಸಾಲಾಗಿ ನಿಲ್ಲಿಸಿದ ಪರಿಣಾಮ ಪಾದಚಾರಿಗಳ ಸಂಚಾರಕ್ಕೆ ತೊಂದರೆಯಾಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.