ADVERTISEMENT

ಗಜೇಂದ್ರಗಡ: ಬೆಲೆ ಏರಿಕೆ ನೀತಿ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 16:19 IST
Last Updated 22 ಜೂನ್ 2024, 16:19 IST
ಗಜೇಂದ್ರಗಡದಲ್ಲಿ ಬಿಜೆಪಿ ರೋಣ ಮಂಡಲದ ವತಿಯಿಂದ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿ ಖಂಡಿಸಿ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಕಿರಣಕುಮಾರ ಕುಲಕರ್ಣಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು
ಗಜೇಂದ್ರಗಡದಲ್ಲಿ ಬಿಜೆಪಿ ರೋಣ ಮಂಡಲದ ವತಿಯಿಂದ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿ ಖಂಡಿಸಿ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಕಿರಣಕುಮಾರ ಕುಲಕರ್ಣಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು   

ಗಜೇಂದ್ರಗಡ: ʼಗ್ಯಾರಂಟಿ ಯೋಜನೆಗಳ ಮೂಲಕ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ಪೆಟ್ರೋಲ್‌, ಡಿಸೇಲ್‌ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಸುವ ಮೂಲಕ ಜನಸಾಮಾನ್ಯರ ಬದುಕು ದುಸ್ತರಗೊಳಿಸುತ್ತಿದೆʼ ಎಂದು ಬಿಜೆಪಿ ಮುಖಂಡ ಶಿವಾನಂದ ಮಠದ ಆರೋಪಿಸಿದರು.

ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ಬಿಜೆಪಿ ರೋಣ ಮಂಡಲದ ವತಿಯಿಂದ ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿ ಖಂಡಿಸಿ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ʼರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಿ ಟಿಕೆಟ್‌ ದರ ಏರಿಸಿದೆ. ಕುಳಿತುಕೊಳ್ಳಲು ಜಾಗ ಇಲ್ಲದಂತೆ ಮಾಡಿದೆ. ಉಚಿತ ವಿದ್ಯುತ್‌ ನೀಡಿ ವಾಣಿಜ್ಯ ಉದ್ದೇಶಕ್ಕೆ ಬಳಸುವ ವಿದ್ಯುತ್‌ ದರ ದುಪ್ಪಟ್ಟಾಗಿಸಿದೆ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬ ನಾಣ್ನುಡಿಯಂತೆ ಜನಸಾಮಾನ್ಯರಿಗೆ ಉಚಿತ ಯೋಜನೆ ಕೊಡುವ ನೆಪದಲ್ಲಿ ಬೇರೊಂದು ರೂಪದಲ್ಲಿ ಮತ್ತದೆ ಜನಸಾಮಾನ್ಯರಿಂದ ಹಣ ಸಂಗ್ರಹಿಸುವ ಮೂಲಕ ಉಚಿತ ಯೋಜನೆಗಳನ್ನು ನಡೆಸುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಬೆಲೆ ಏರಿಕೆ ತಡೆದು ಜನಸಾಮಾನ್ಯರ ನೆರವಿಗೆ ಬರದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದುʼ ಎಂದು ಎಚ್ಚರಿಸಿದರು.

ADVERTISEMENT

ಪ್ರಧಾನ ಕಾರ್ಯದರ್ಶಿ ಉಮೇಶ ಮಲ್ಲಾಪುರ ಮಾತನಾಡಿ, ರಾಜ್ಯದಲ್ಲಿ ಕಳೆದೊಂದು ವರ್ಷದಿಂದ ದುರಾಡಳಿತ ನಡೆಸುತ್ತಿರುವ ಕಾಂಗ್ರೆಸ್‌ ಸರ್ಕಾರ ಪೆಟ್ರೋಲ್‌, ಡಿಸೇಲ್‌, ಹಾಲು, ಅಬಕಾರಿ ಶುಲ್ಕ, ನೋಂದಣಿ ಶುಲ್ಕ, ಬಸ್‌ ಪ್ರಯಾಣ ದರ ಸೇರಿದಂತೆ ರೈತರಿಗೆ ಸಬ್ಸಿಡಿ ದರದಲ್ಲಿ ನೀಡುತ್ತಿದ್ದ ಬಿತ್ತನೆ ಬೀಜದ ದರವನ್ನೂ ಏರಿಸುವ ಮೂಲಕ ಜನ ವಿರೋಧಿ ಆಡಳಿತ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಂತರ ತಹಶೀಲ್ದಾರ್‌ ಕಿರಣಕುಮಾರ ಕುಲಕರ್ಣಿ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ನಗರ ಘಟಕದ ಅಧ್ಯಕ್ಷ ರಾಜೇಂದ್ರ ಘೋರ್ಪಡೆ, ಯುವ ಮೋರ್ಚಾದ ಉಮೇಶ ಚನ್ನು ಪಾಟೀಲ, ರೈತ ಮೋರ್ಚಾದ ಬಾಲಾಜಿರಾವ್ ಬೋಸಲೆ, ಅಂದಪ್ಪ ಅಂಗಡಿ, ಪುರಸಭೆ ಸದಸ್ಯರಾದ ಕನಕಪ್ಪ ಅರಳಿಗಿಡದ, ಸುಭಾಸ್‌ ಮ್ಯಾಗೇರಿ, ಯು.ಆರ್.ಚನ್ನಮ್ಮನವರ, ಮುಖಂಡರಾದ ಸಿದ್ದು ಬಳಿಗೇರ, ಬಸವರಾಜ ಬಂಕದ, ಕಳಕಪ್ಪ ಮುಶಿಗೇರಿ, ಬುಡ್ಡಪ್ಪ ಮೂಲಿಮನಿ, ಶ್ರೀನಿವಾಸ್ ಸವದಿ, ಮುತ್ತಣ್ಣ ಚಟ್ಟೇರ, ಸೂಗೂರೇಶ ಕಾಜಗಾರ, ಮಹಾಂತೇಶ ಪೂಜಾರ, ಡಿ.ಜಿ.ಕಟ್ಟಿಮನಿ, ವಿಶ್ವನಾಥ ಕುಷ್ಟಗಿ, ಶಂಕರ ಇಂಜನಿ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.