ಗದಗ: ಜಿಲ್ಲಾ ಪೊಲೀಸ್ ಪ್ರಕಟಣೆ ಹೆಸರಿನಲ್ಲಿ ಗುರುವಾರ ವಿವಿಧ ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಹರಿದಾಡುತ್ತಿದ್ದ ಸಂದೇಶವೊಂದು ನಾಗರಿಕರಲ್ಲಿ ಆತಂಕ ಉಂಟುಮಾಡಿತ್ತು.
ಆದರೆ, ಜಿಲ್ಲಾ ಪೊಲೀಸರು ಇದಕ್ಕೆ ಪ್ರತಿಕ್ರಿಯಿಸಿ, ‘ಇದೊಂದು ‘ಫೇಕ್’ ಸಂದೇಶವಾಗಿದೆ. ನಾಗರಿಕರು ಆತಂಕ ಪಡುವ ಅಗತ್ಯವಿಲ್ಲ’ ಎಂದು ತಿಳಿಸಿದ್ದಾರೆ.
ಗದಗ ಜಿಲ್ಲಾ ಪೊಲೀಸ್ ಪ್ರಕಟಣೆ ಹೆಸರಿನಲ್ಲಿ ಹರಿದಾಡುತ್ತಿದ್ದ ಸಂದೇಶ ಇಂತಿದೆ: ‘ಯಾರಾದರೂ ಮನೆ ಹತ್ರ ಬಂದು ನಾವು ಸರ್ಕಾರಿ ಆಸ್ಪತ್ರೆಯಿಂದ ಬಂದಿದ್ದೇವೆ. ಇನ್ಸುಲಿನ್, ವಿಟಮಿನ್ ಇಂಜೆಕ್ಷನ್ ಮಾಡ್ತೀವಿ ಅಂತ ಹೇಳಿದ್ರೆ ನಂಬಬೇಡಿ. ನಂಬಿ ಆತುರಪಟ್ಟು ಇಂಜೆಕ್ಷನ್ ಮಾಡಿಸಿಕೊಳ್ಳದಿರಿ. ಜಿಹಾದಿ, ಟೆರರಿಸ್ಟುಗಳು ಈ ರೀತಿ ಯಾಮಾರಿಸಿ ಹಿಂದೂಗಳಿಗೆ ಏಡ್ಸ್ ಇಂಜೆಕ್ಷನ್ ಮಾಡುತ್ತಿದ್ದಾರಂತೆ. ಜಾಗ್ರತೆಯಿಂದಿರಿ. ನಿಮಗೆ ಸಂಬಂಧಿಸಿದ ಎಲ್ಲಾ ಗ್ರೂಪ್‌ಗಳಿಗೆ ಕಳಿಸಿ, ಅಮಾಯಕರ ಪ್ರಾಣ ಉಳಿಸಿ’.
ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಹರಿದಾಡುತ್ತಿದ್ದ ಸಂದೇಶದ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ಅವರು, ‘ಇದೊಂದು ಫೇಕ್ ಸಂದೇಶವಾಗಿದ್ದು, ಜನರು ಭಯಪಡಬಾರದು. ಸಾರ್ವಜನಿಕರಲ್ಲಿ ಭೀತಿ ಮೂಡಿಸುವಂತಹ ಸಂದೇಶ ಹಾಕಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ನಕಲಿ ಸಂದೇಶದ ಮೂಲ ಪತ್ತೆ ಹಚ್ಚಲು ಸೈಬರ್ ವಿಭಾಗದ ಪೊಲೀಸರಿಗೆ ಸೂಚಿಸಲಾಗುವುದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.