ADVERTISEMENT

ಗದಗ ಕ್ಷೇತ್ರ: ಜೆಡಿಎಸ್‌ನಿಂದ ವೆಂಕನಗೌಡ ಗೋವಿಂದಗೌಡ್ರ ಕಣಕ್ಕೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2023, 14:10 IST
Last Updated 18 ಏಪ್ರಿಲ್ 2023, 14:10 IST
ವೆಂಕನಗೌಡ ಗೋವಿಂದಗೌಡ್ರ
ವೆಂಕನಗೌಡ ಗೋವಿಂದಗೌಡ್ರ   

ಗದಗ: ‘ಗದಗ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯಾಗಿ ಮೇ 20ರಂದು ನಾಮಪತ್ರ ಸಲ್ಲಿಸುತ್ತಿದ್ದು, ಜೆಡಿಎಸ್‌ ಯುವನಾಯಕ ನಿಖಿಲ್‌ ಕುಮಾರ್‌ಸ್ವಾಮಿ ಅವರ ಉಪಸ್ಥಿತಿ ನಿರೀಕ್ಷಿಸಲಾಗಿದೆ’ ಎಂದು ಜೆಡಿಎಸ್‌ ಅಭ್ಯರ್ಥಿ ವೆಂಕನಗೌಡ ಗೋವಿಂದಗೌಡ್ರ ತಿಳಿಸಿದರು.

ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಗದಗ ಕ್ಷೇತ್ರ ಹಿಂದುಳಿಯಲು ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರೇ ಕಾರಣ. ಎರಡೂ ಪಕ್ಷಗಳ ನಾಯಕರು ಸೇರಿ ಗದಗ ಕ್ಷೇತ್ರಕ್ಕೆ ಕತ್ತಲು ಹಿಡಿಸಿದ್ದಾರೆ. ಕತ್ತಲು ಸರಿಸಿ, ಬೆಳಕು ಹರಿಸುವ ಸಲುವಾಗಿಯೇ ಜೆಡಿಎಸ್‌ನಿಂದ ಸ್ಪರ್ಧೆ ಮಾಡುತ್ತಿದ್ದು, ಗೆಲ್ಲುವ ವಿಶ್ವಾಸವಿದೆ’ ಎಂದು ಹೇಳಿದರು.

ಬಿಜೆಪಿ ಅಭ್ಯರ್ಥಿ ಅನಿಲ್‌ ಮೆಣಿಸಿನಕಾಯಿ ಅವರ ಕಾರಿನ ಮೇಲೆ ಕಲ್ಲು ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ‘ಎಲ್ಲ ಹಲ್ಲೆಗಳು ಅನಿಲ್‌ ಮೆಣಸಿನಕಾಯಿ ಅವರ ಮೇಲೆಯೇ ಆಗುತ್ತವೆ. ಕಾರಣ ಏನೆಂದು ಗೊತ್ತಿಲ್ಲ’ ಎಂದು ಲಘುವಾಗಿ ಕಾಲೆಳೆದರು.

ADVERTISEMENT

‘ಯಾರೇ ಆಗಲಿ ಹಲ್ಲೆ ನಡೆಸುವ ಪ್ರಯತ್ನ ಮಾಡಿದ್ದು ತಪ್ಪು. ಕಾರ್ಯಕರ್ತರು ಬಹಳ ಹುಷಾರಿನಿಂದ ಇರಬೇಕು. ಏಕೆಂದರೆ, ಮೇ 15ರ ನಂತರ ಗೆದ್ದವರು ಬೆಂಗಳೂರು ಸೇರುತ್ತಾರೆ. ಕಾರ್ಯಕರ್ತರು ಚುನಾವಣೆ ಮುಗಿಸಿದ ನಂತರವೂ ಇಲ್ಲೇ ಜೀವನ ಮಾಡಬೇಕು. ಹಾಗಾಗಿ, ಯಾರೂ ಆವೇಶಕ್ಕೆ ಒಳಗಾಗಿ ಚುನಾವಣೆ ನಡೆಸಬಾರದು’ ಎಂದು ಕಿವಿಮಾತು ಹೇಳಿದರು.

‘ಹೊಸ ಗದಗ ಬೆಟಗೇರಿ ಎಂಬ ಘೋಷಣೆಯೊಂದಿಗೆಯೇ ನಾವು ಚುನಾವಣೆ ಎದುರಿಸಲಿದ್ದೇವೆ. ಈ ಸಂಬಂಧ ನಗರದ 35 ವಾರ್ಡ್‌ಗಳು ಹಾಗೂ ಗ್ರಾಮೀಣ ಭಾಗದಲ್ಲಿ ಒಂದು ಸುತ್ತಿನ ಪ್ರಚಾರ ಕಾರ್ಯ ಮುಗಿಸಿದ್ದು, ಮತ್ತೊಂದು ಸುತ್ತಿನಲ್ಲಿ ಪ್ರಚಾರ ನಡೆಸಲಾಗುವುದು. ಆಗ ಪಕ್ಷದ ಹಿರಿಯ ನಾಯಕರು ಕೂಡ ಬರಲಿದ್ದಾರೆ’ ಎಂದು ತಿಳಿಸಿದ್ದಾರೆ.

‘ಗೆಲ್ಲುವ ಉದ್ದೇಶದಿಂದಲೇ ಚುನಾವಣೆಗೆ ಸ್ಪರ್ಧಿಸಿದ್ದು ನಾನು ಮಾಡಿರುವ ಒಳ್ಳೆ ಕೆಲಸಗಳೇ ನನ್ನನ್ನು ದಡ ಮುಟ್ಟಿಸಲಿವೆ. ಆಟೊ ಚಾಲಕರು, ಬೀದಿಬದಿ ವ್ಯಾಪಾರಿಗಳು, ಕಾರ್ಮಿಕರು ಸೇರಿದಂತೆ ಮೊದಲಾದ ಶ್ರಮಿಕ ವರ್ಗದ ಜನರ ನೋವಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದೇನೆ. ಆ ಕೃತಘ್ನತೆಯನ್ನು ಅವರು ಚುನವಾಣೆಯಲ್ಲಿ ಪ್ರದರ್ಶಿಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಜೆಡಿಎಸ್‌ ಪಕ್ಷ ರೈತರ ಪರವಾಗಿದೆ. ಅಂತೆಯೇ ಕನ್ನಡದ ಉಳಿವಿಗೂ ಹೋರಾಡುತ್ತಿದೆ. ಕನ್ನಡದ ಅಸ್ಮಿತೆಗೆ ಧಕ್ಕೆ ಬಂದಾಗಲೆಲ್ಲವೂ ಎಚ್‌.ಡಿ.ಕುಮಾರಸ್ವಾಮಿ ಗಟ್ಟಿ ಧ್ವನಿ ಎತ್ತಿದ್ದಾರೆ. ಹಾಗಾಗಿ, ರೈತ ಸಮುದಾಯ ಮತ್ತು ಕನ್ನಡಪರ ಸಂಘಟನೆಗಳ ಬಲವೂ ನನ್ನ ಜತೆಗೆ ಸೇರಿಕೊಂಡಿದೆ. ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳು, ನಾಯಕರೆಲ್ಲರ ಆಶೀರ್ವಾದದಿಂದ ಜೆಡಿಎಸ್‌ನಿಂದ ಸ್ಪರ್ಧಿಸುವ ಅವಕಾಶ ಸಿಕ್ಕಿದೆ. ಅದಕ್ಕಾಗಿ ಎಲ್ಲರಿಗೂ ಧನ್ಯವಾದ ತಿಳಿಸುವೆ’ ಎಂದು ತಿಳಿಸಿದರು.

‘ಕುಡಿಯುವ ನೀರು ಸಮರ್ಪಕ ಪೂರೈಕೆ, ರಸ್ತೆಗಳ ಸುಧಾರಣೆ, ಸ್ಥಳೀಯವಾಗಿ ಉದ್ಯೋಗ ಸೃಷ್ಟಿ, ಕೈಗಾರಿಕೆಗಳ ಸ್ಥಾಪನೆ ನಮ್ಮ ಆದ್ಯತೆಯಾಗಿದೆ’ ಎಂದು ತಿಳಿಸಿದರು.

ಜೆಡಿಎಸ್‌ ಮುಖಂಡರಾದ ಫ್ರಾನ್ಸಿಸ್‌ ಕನ್ಹಯ್ಯ, ಪ್ರಪುಲ್ಲ ಪುಣೇಕರ್‌, ಶಂಕರ್‌ ಗೋಕಾವಿ, ಸಿರಾಜ್‌ ಕದಡಿ, ಪ್ರಭುರಾಜ್‌ಗೌಡ ಪಾಟೀಲ, ರಾಜೇಸಾಬ್‌ ತಹಶೀಲ್ದಾರ್‌ ಇದ್ದರು.

*

ರಾಷ್ಟ್ರೀಯ ಪಕ್ಷಗಳಂತೆ ಜಾತಿ ಆಧರಿಸಿ ಮತ ಕೇಳುವುದಿಲ್ಲ. ಕಷ್ಟದಲ್ಲಿರುವ ಜನರ ಕಣ್ಣೀರು ಒರೆಸಿರುವೆ. ಆರಿಸಿ ಬಂದರೆ ಅವರು ಕಣ್ಣೀರು ಹಾಕದಂತೆ ನೋಡಿಕೊಳ್ಳುವೆ.
-ವೆಂಕನಗೌಡ ಗೋವಿಂದಗೌಡ್ರ, ಜೆಡಿಎಸ್‌ ಅಭ್ಯರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.