ಗದಗ: ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ರೋಹಿತ್ ಚಕ್ರತೀರ್ಥ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ, ಕೂಡಲೇ ಬಂಧಿಸಬೇಕು ಎಂದು ಗದಗ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.
‘ವಿಕೃತ ಮನಸ್ಸಿನ ವ್ಯಕ್ತಿಯನ್ನು ಪಠ್ಯ ಪರಿಷ್ಕರಣಾ ಸಮಿತಿಗೆ ಆಯ್ಕೆ ಮಾಡಿದ್ದು ಸರಿಯಲ್ಲ. ಶಿಕ್ಷಣ ಸಚಿವ ನಾಗೇಶ ಅವರು ಈ ಕೂಡಲೇ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದೆ.
‘ರಾಷ್ಟ್ರಕವಿ ಕುವೆಂಪು ಅವರು ನಾಡಗೀತೆ ರಚಿಸಿದ್ದಾರೆ. ನಾಡಿನ ಎಲ್ಲ ಜನ ಅದನ್ನು ಒಪ್ಪಿಕೊಂಡಿದ್ದಾರೆ. ಸರ್ಕಾರಿ, ಖಾಸಗಿ ಯಾವುದೇ ಕಾರ್ಯಕ್ರಮವಾಗಲಿ ನಾಡಗೀತೆ ಹಾಡುವಾಗ ಎಲ್ಲರೂ ಎದ್ದು ನಿಂತು ಗೌರವ ಸಲ್ಲಿಸುತ್ತಾರೆ. ಇದಕ್ಕೆ ಯಾವುದೇ ಜಾತಿ ಧರ್ಮ ಇಲ್ಲ. ಇಂತಹ ನಾಡಗೀತೆಯನ್ನು ವಿಕೃತ ಮನಸ್ಸಿನ ಪದಗಳಿಂದ ಅವಮಾನ ಮಾಡಿದ್ದು ಅಕ್ಷಮ್ಯ’ ಎಂದು ಒಕ್ಕೂಟದ ಸಂಚಾಲಕ ಷರೀಫ್ ಬಿಳೆಯಲಿ ಕಿಡಿಕಾರಿದ್ದಾರೆ.
‘ಇಂತಹ ಸಮಾಜದ್ರೋಹಿ, ದೇಶದ್ರೋಹಿಯನ್ನು ಈ ಕೂಡಲೇ ಬಂಧಿಸುವಂತೆ ರಾಜ್ಯಪಾಲರು ಸರ್ಕಾರಕ್ಕೆ ಆದೇಶ ನೀಡಬೇಕು’ ಎಂದು ಅವರು ಆಗ್ರಹಿಸಿದ್ದಾರೆ.
‘ನಾಡಿನ ಯಾವುದೇ ಸಾಹಿತಿಗಳು ಮತ್ತು ಬರಹಗಾರರನ್ನು ಪಠ್ಯ ಪರಿಷ್ಕರಣೆಗೆ ಪರಿಗಣಿಸದಿರುವುದು ಖಂಡನೀಯ. ಪಠ್ಯ ಪರಿಷ್ಕರಣೆಯ ಸಮಿತಿ ಅಧ್ಯಕ್ಷನೇ ಕೋಮುವಾದಿಯಾಗಿದ್ದು, ಇಂತಹ ವ್ಯಕ್ತಿಯಿಂದ ಶಾಲಾ ಮಕ್ಕಳಿಗೆ ಕೋಮುವಾದ ಬಿಟ್ಟು ಏನು ಕಲಿಸಲು ಸಾಧ್ಯ? ಮೂಲ ಇತಿಹಾಸ ತಿರುಚಿ ಮನುವಾದವನ್ನು ಮತ್ತೆ ಪುನರ್ ಸ್ಥಾಪಿಸುವ ಹಿನ್ನೆಲೆಯಲ್ಲಿ ಪಠ್ಯ ಪರಿಷ್ಕರಣೆ ನೆಪದಲ್ಲಿ ನಾಡಿನ ಇತಿಹಾಸವನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ’ ಎಂದು ಮುತ್ತು ಬಿಳೆಯಲಿ ದೂರಿದ್ದಾರೆ.
ರೋಹಿತ್ ಅವರನ್ನು ಬಂಧಿಸುವಂತೆ ಆಗ್ರಹಿಸಿ ದಲಿತ ಸಂಘಟನೆಗಳ ಒಕ್ಕೂಟದಿಂದ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಆನಂದ ಶಿಂಗಾಡಿ, ಯಲ್ಲಪ್ಪ ರಾಮಗಿರಿ, ಶಿವಾನಂದ ತಮ್ಮಣ್ಣವರ, ಪರಶು ಕಾಳೆ, ಬಸವರಾಜ ಬಿಳೆಯಲಿ, ಪೂಜಾ ಬೇವುರ, ಮಂಜುಳಾ ಕಲಕೇರಿ, ಅನಿಲ ಕಾಳೆ, ಶ್ರೀಕಾಂತ್ ಮಳಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.