ನರಗುಂದ: ಜನರ ಅಹವಾಲು ಆಲಿಸುವ ಜಿಲ್ಲಾಧಿಕಾರಿಗಳ ನೇತೃತ್ವದ ತಾಲ್ಲೂಕು ಮಟ್ಟದ ಜನಸ್ಪಂದನ ಶುಕ್ರವಾರ ಸಂಜೆ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗೊಂದಲದ ಗೂಡಾಗಿ ಕತ್ತಲಲ್ಲೇ ಆರಂಭಗೊಂಡು ಕತ್ತಲಲ್ಲಿಯೇ ಮುಗಿಯಿತು. ಎರಡು ಗಂಟೆಗಳ ಕಾಲ ನಡೆದ ಸಭೆಯಲ್ಲಿ ವಿದ್ಯುತ್ ಕೈಕೊಟ್ಟ ಪರಿಣಾಮ ಪರ್ಯಾಯ ಬೆಳಕಿನ ವ್ಯವಸ್ಥೆ ಮಾಡದ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿ ಸಭೆ ಮುಗಿಯುವವರೆಗೂ ಹಿಡಿಶಾಪ ಹಾಕಿಸಿಕೊಂಡಿತು.
ಸಭೆ ಆರಂಭಗೊಂಡು ಅರ್ಧಗಂಟೆಯಾದರೂ ವಿದ್ಯುತ್ ಬಾರದ ಪರಿಣಾಮ ರೈತರು, ಸಾರ್ವಜನಿಕರು ಡಿಸಿ ಎದುರೇ ಸಭೆಯಲ್ಲಿದ್ದ ಹೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಪರ್ಯಾಯ ವ್ಯವಸ್ಥೆ ಮಾಡುವಂತೆ ನಿರಂತರ ಆಗ್ರಹಿಸಿದರೂ ಪ್ರಯೋಜನವಾಗಲಿಲ್ಲ.ಜಿಲ್ಲಾಧಿಕಾರಿಗಳು ಅಷ್ಟಾಗಿ ವಿದ್ಯುತ್ ಸಮಸ್ಯೆ ಪರಿಗಣಿಸಲಿಲ್ಲ.
ಗೊಂದಲದ ನಡುವೆಯೇ ಜಿಲ್ಲಾಧಿಕಾರಿ ವೈಶಾಲಿಎಂ.ಎಲ್.ಮಾತ್ರ ಮೊಬೈಲ್ ಬ್ಯಾಟರಿ ಬೆಳಕಿನಲ್ಲಿಯೇ ಸಾರ್ವಜನಿಕರ ಅರ್ಜಿ ಪರಿಶೀಲಿಸಿದರು. ಇವರ ಜೊತೆ ಉಪವಿಭಾಗಾಧಿಕಾರಿ ಭರತ್ ಸಾಥ್ ನೀಡಿದರು. ಬೆಳಕಿಲ್ಲದೇ, ಧ್ವನಿವರ್ಧಕವಿಲ್ಲದೇ ಜನಸ್ಪಂದನದ ಉದ್ದೇಶ ಈಡೇರದೇ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು.
ಆರಂಭದಲ್ಲಿ ಒಂದೊಂದಾಗಿ ಅರ್ಜಿ ಪರಿಶೀಲನೆ ನಡೆದರೆ, ನಂತರ ಕಾಟಾಚಾರಕ್ಕೆ ಗುಂಪು, ಗುಂಪಾಗಿ ಜನರ ಅರ್ಜಿ ಪರಿಶೀಲನೆ ನಡೆಯಿತು. ಕೆಲವು ಅಧಿಕಾರಿಗಳಂತೂ ತಮಗೆ ಸಂಬಂಧವಿಲ್ಲವೆಂಬಂತೆ ಸಭೆ ಚಲನವಲನ ವೀಕ್ಷಿಸಿದರು. ಸಭೆಯಲ್ಲಿ ಸಮಸ್ಯೆಗಳ ಸ್ಪಷ್ಟ ಮಾಹಿತಿ ಗೊತ್ತಾಗಲೇ ಇಲ್ಲ. ಸಭೆ ಮುಗಿದ ಮೇಲೆ ವಿದ್ಯುತ್ ಪೂರೈಕೆಯಾಯಿತು. ಅಧಿಕಾರಿಗಳು ಪರಸ್ಪರ ಮುಖ ನೋಡಿಕೊಂಡಿದ್ದು ಸಾರ್ವಜನಿಕರ ಗಮನ ಸೆಳೆಯಿತು.
ಚಿಕ್ಕನರಗುಂದದ ಮುತ್ತು ರಾಯರಡ್ಡಿ ಅರ್ಜಿ ಸಲ್ಲಿಸಿ ತಾಲ್ಲೂಕಿನಲ್ಲಿ ಮಲಪ್ರಭಾ ಕಾಲುವೆಗಳು ಹೂಳು ತುಂಬಿವೆ. ನೀರು ಬಂದರೂ ಜಮೀನಿಗೆ ಬರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ದೊಡ್ಡ ಗ್ರಾಮ ಚಿಕ್ಕನರಗುಂದಕ್ಕೆ ದೂರದ ಕೊಣ್ಣೂರ ಗ್ರಿಡ್ ನಿಂದ ವಿದ್ಯುತ್ ಪೂರೈಕೆ ಯಾಗುತ್ತಿದೆ.ಅದರ ಬದಲಾಗಿ ನರಗುಂದ ಗ್ರಿಡ್‌ನಿಂದ ವಿದ್ಯುತ್ ಪೂರೈಕೆ ವ್ಯವಸ್ಥೆ ಆಗಬೇಕು. ಈ ಕುರಿತು ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ವೈಶಾಲಿ ಕೂಡಲೇ ಇದನ್ನು ಪರಿಹರಿಸುವಂತೆ ಸೂಚಿಸಿದರು.
ಬಸವರಾಜ ಸಾಬಳೆ, ವಿಠಲ ಜಾಧವ ಹುತಾತ್ಮ ರೈತರ ಸ್ಮಾರಕಕ್ಕೆ ಪ್ರತ್ಯೇಕ ಜಾಗೆ ನೀಡಬೇಕು. ಬೆಳೆ ಪರಿಹಾರ ತುರ್ತಾಗಿ ವಿತರಣೆ ಮಾಡುವಂತೆ ಮನವಿ ಮೂಲಕ ಒತ್ತಾಯಿಸಿದರು. ಬುಡ್ನೆಸಾಬ ಸುರೇಬಾನ ತಾಲ್ಲೂಕಿನಲ್ಲಿ ಹಾವು ಕಡಿತಕ್ಕೆ ಔಷಧವಿಲ್ಲದೇ ಹಲವಾರು ಜನ ಸಾವನ್ನಪ್ಪಿದ್ದಾರೆ ಎಂದು ದೂರಿದರು. ವಿಠಲ ಜಾಧವ, ಕರಿಯಪ್ಪ ಎನ್ನುವವರು ತಾಲ್ಲೂಕಿನಲ್ಲಿ ಪಶು ವೈದ್ಯರ ಕೊರತೆ ಗಮನ ಸೆಳೆದರು. ಖಾನಾಪುರದ ಶಂಕರಗೌಡ ಕಗದಾಳ ' ಹದಲಿಯಲ್ಲಿ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವದಲ್ಲಿ ನಮ್ಮ ಜಾಗೆಗೆ ಸಂಬಂಧಿಸಿದಂತೆ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈಗಲಾದರೂ ಸಮಸ್ಯೆ ಬಗೆಹರಿಸುವಂತೆ ಡಿಸಿ ಎದುರು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ, ತಹಶೀಲ್ದಾರ್ ಶ್ರೀಶೈಲ ತಳವಾರ, ಪುರಸಭೆ ಮುಖ್ಯಾಧಿಕಾರಿ ಅಮಿತ ತಾರದಾಳೆ, ಕಂದಾಯ ಇಲಾಖೆ, ತಾಲ್ಲೂಕು ಮಟ್ಟದ ವಿವಿಧ ಅಧಿಕಾರಿಗಳು ಹಾಜರಿದ್ದರು.
77 ಅರ್ಜಿಗಳು
ರೈತರಿಗೆ ಸಂಬಂಧಿಸಿದ ಅರ್ಜಿಗಳೇ ಬಹುಪಾಲು ಬಂದಿದ್ದವು. ಬೆಳೆ ಪರಿಹಾರ ಬೆಳೆ ವಿಮೆ ಬರದೇ ರೈತರು ತಮ್ಮ ಅಳಲನ್ನು ತೋಡಿಕೊಂಡಿರು. ಅದನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ಇವುಗಳನ್ನು ತುರ್ತಾಗಿ ವಿಲೇವಾರಿ ಮಾಡುವಂತೆ ಕೃಷಿ ಇಲಾಖೆ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.
77ಅರ್ಜಿಗಳಲ್ಲಿ 35ಕ್ಕೂ ಹೆಚ್ಚು ಅರ್ಜಿಗಳು ಬೆಳೆಬರ ಪರಿಹಾರ ಕ್ಕೆ ಸಂಬಂಧಿಸಿದ್ದಾಗಿವೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಉಳಿದಂತೆ ವಿವಿಧ ಸಮಸ್ಯೆಗಳ ಅರ್ಜಿಗಳನ್ನು ಕಾಲಹರಣ ಮಾಡದೇ ಇಂದಿನಿಂದಲೇ ಪರಿಹಾರ ರೂಪಿಸಲು ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈಶಾಲಿ ತಾಕೀತು ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.