ನರಗುಂದ (ಗದಗ ಜಿಲ್ಲೆ): ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಸಂಜೆ ವಿದ್ಯುತ್ ಪೂರೈಕೆಯಿರದ ಕಾರಣ ಮೊಬೈಲ್ ಫೋನ್ ಬೆಳಕಿನಲ್ಲೇ ಎರಡು ಗಂಟೆ ಜನಸ್ಪಂದನ ಸಭೆ ನಡೆಯಿತು. ಜೆನರೇಟರ್ ಸೌಲಭ್ಯವೂ ಇರಲಿಲ್ಲ.
ಮೊಬೈಲ್ ಫೋನ್ ಬೆಳಕಿನಲ್ಲೇ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್ ಅವರು ಸಾರ್ವಜನಿಕರ ಅರ್ಜಿಗಳನ್ನು ಪರಿಶೀಲಿಸಿದರು.
ಸರಿಯಾದ ಬೆಳಕು, ಧ್ವನಿವರ್ಧಕದ ವ್ಯವಸ್ಥೆ ಇರದ ಕಾರಣ ಸಾರ್ವಜನಿಕರು ಮತ್ತು ಅಧಿಕಾರಿಗಳಿಗೆ ಕಷ್ಟವಾಯಿತು. ಸಭೆ ಮುಗಿದ ಮೇಲೆ ವಿದ್ಯುತ್ ಪೂರೈಕೆಯಾಯಿತು.
‘ನರಗುಂದ 110 ಕೆ.ವಿಯ ಟ್ರಾನ್ಸ್‌ಫಾರ್ಮರ್‌ಗೆ ಪೂರೈಕೆಯಾಗುವ ವಿದ್ಯುತ್ ತಂತಿಯಲ್ಲಿ ಕಿಡಿ ಹೊತ್ತಿಕೊಂಡು ತಾಂತ್ರಿಕ ಸಮಸ್ಯೆ ಉಂಟಾಯಿತು. ಹೀಗಾಗಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು’ ಎಂದು ಹೆಸ್ಕಾಂ ಅಧಿಕಾರಿ ಎಚ್.ಎಂ.ಖುದಾವಂದ ತಿಳಿಸಿದ್ದಾರೆ.
‘ಇದು ಆಕಸ್ಮಿಕ ಹಾಗೂ ಅನಿರೀಕ್ಷಿತ ಘಟನೆ. ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಕಚೇರಿಯಲ್ಲಿನ ಯುಪಿಎಸ್ ಕೈಕೊಟ್ಟವು. ಪರಿಸ್ಥಿತಿ ಕೈ ಮೀರಿದ್ದರಿಂದ ಏನೂ ಮಾಡಲು ಸಾಧ್ಯವಾಗಲಿಲ್ಲ’ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.