ADVERTISEMENT

ಗದಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತೆ ಮುಂದಕ್ಕೆ!

ಸಾಹಿತ್ಯ ಸಮ್ಮೇಳನಕ್ಕೆ ಕೂಡಿಬರದ ಸಮಯ; ಜನವರಿಯಲ್ಲಿ ನಡೆಯುವ ನಿರೀಕ್ಷೆ

ಕೆ.ಎಂ.ಸತೀಶ್ ಬೆಳ್ಳಕ್ಕಿ
Published 26 ನವೆಂಬರ್ 2024, 4:13 IST
Last Updated 26 ನವೆಂಬರ್ 2024, 4:13 IST
<div class="paragraphs"><p>ಕನ್ನಡ ಬಾವುಟ</p></div>

ಕನ್ನಡ ಬಾವುಟ

   

ಗದಗ: ಚುನಾವಣೆ ಘೋಷಣೆ, ಮಳೆಗಾಲ ಎಂಬ ಕಾರಣಕ್ಕೆ ನವೆಂಬರ್‌ಗೆ ಮುಂಡೂಡಲ್ಪಟ್ಟಿದ್ದ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಈಗ ಮತ್ತೇ ಮುಂದಕ್ಕೆ ಹೋಗಿದೆ. 2025ರ ಜನವರಿ ಮೊದಲ ವಾರದಲ್ಲಿ ಗಜೇಂದ್ರಗಡ ಪಟ್ಟಣದಲ್ಲಿ ಸಮ್ಮೇಳನ ನಡೆಯಲಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ತಿಳಿಸಿದ್ದಾರೆ.

ಈ ಹಿಂದೆ ಸ್ಥಳ ಹಾಗೂ ದಿನಾಂಕ ನಿಗದಿಗೊಂಡ ನಂತರ ಲೋಕಸಭಾ ಚುನಾವಣೆ ಘೋಷಣೆ ಆಯಿತು. ಬಳಿಕ ಆಗಸ್ಟ್‌ನಲ್ಲಿ ದಿನಾಂಕ ನಿಗದಿಗೊಳಿಸಿ ಸಿದ್ಧತೆ ಆರಂಭಿಸಲಾಗಿತ್ತು. ಆದರೆ, ರೋಣ ಶಾಸಕ ಜಿ.ಎಸ್‌.ಪಾಟೀಲ ಹಾಗೂ ಗಜೇಂದ್ರಗಡ ತಹಶೀಲ್ದಾರ್‌ ಮುಂಜಾಗ್ರತಾ ಕ್ರಮವಾಗಿ ಹವಾಮಾನ ವರದಿ ವೀಕ್ಷಿಸಿ, ಮಳೆಗಾಲದಲ್ಲಿ ಸಮ್ಮೇಳನ ನಡೆಸುವುದು ಕಷ್ಟಕರ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದರಿಂದಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನವನ್ನು ನವೆಂಬರ್‌/ಡಿಸೆಂಬರ್‌ನಲ್ಲಿ ನಡೆಸಬೇಕು ಎಂಬ ನಿರ್ಧಾರಕ್ಕೆ ಬಂದಿತ್ತು.

ADVERTISEMENT

ಆದರೆ, ಈಗ ಮತ್ತೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದಿನಾಂಕ ಹೊಂದಾಣಿಕೆ ಸಮಸ್ಯೆ ಎದುರಾಗಿದ್ದರಿಂದ ಸಮ್ಮೇಳನ ಮುಂದಕ್ಕೆ ಹೋಗಿದೆ. ಪೂರ್ವನಿಗದಿಯಂತೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ನವೆಂಬರ್‌ನಲ್ಲಿ 30 ದಿನಗಳ ನಿರಂತರ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಆಯೋಜಿಸಿದೆ. ಈ ಕಾರಣದಿಂದ ಡಿಸೆಂಬರ್‌ನಲ್ಲಿ ಸಮ್ಮೇಳನ ಮಾಡುವ ಉದ್ದೇಶ ಹೊಂದಿದ್ದ ಜಿಲ್ಲಾ ಘಟಕಕ್ಕೆ ಈಗ ರಾಜ್ಯ ಸಮಿತಿಯವರು ಅನುಮತಿ ನೀಡಿಲ್ಲ. ಈ ಅವಧಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ಕಾರಣಕ್ಕೆ ಅನುಮತಿ ಸಿಕ್ಕಿಲ್ಲ.

‘ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಚರಣೆ ದಿನಾಂಕ ವಿವಿಧ ಕಾರಣಗಳಿಂದ ಮುಂದಕ್ಕೆ ಹೋಗಿದೆ. ಜಿಲ್ಲಾ ಸಮ್ಮೇಳನವನ್ನು ಡಿಸೆಂಬರ್‌ನಲ್ಲಿ ಆಚರಿಸುವ ಉದ್ದೇಶ ಇತ್ತು. ಆದರೆ, ಮುಂದಿನ ತಿಂಗಳು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ಕಾರಣ ಅದನ್ನು ಜನವರಿಗೆ ಮುಂದೂಡಲಾಗಿದೆ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ತಿಳಿಸಿದ್ದಾರೆ.

ರೋಣ ಶಾಸಕ ಜಿ.ಎಸ್‌.ಪಾಟೀಲ ಅವರು ಸ್ವಾಗತ ಸಮಿತಿ ಅಧ್ಯಕ್ಷರಾಗಿದ್ದು ಸಮ್ಮೇಳನವನ್ನು ಅಚ್ಚುಕಟ್ಟಾಗಿ ನಡೆಸಲು ಮುತುವರ್ಜಿ ವಹಿಸಿದ್ದಾರೆ. ಪೆಂಡಾಲ್ ಹಾಗೂ ಊಟ ವ್ಯವಸ್ಥೆ ಮಾಡಿಕೊಡುವುದಾಗಿ ಹೇಳಿದ್ದಾರೆ.
ವಿವೇಕಾನಂದಗೌಡ ಪಾಟೀಲ, ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ

ಮೂರು ದಿನಗಳ ಸಮ್ಮೇಳನ

ಜನವರಿ ಮೊದಲವಾರದಲ್ಲಿ ಗಜೇಂದ್ರಗಡದಲ್ಲಿ ನಡೆಯುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮೂರು ದಿನಗಳ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ. ಮೊದಲ ದಿನ ಜಕ್ಕಲಿಯಿಂದ ಗಜೇಂದ್ರಗಡ ಪಟ್ಟಣದವರೆಗೆ ಕನ್ನಡ ದೀಪ ಹಾಗೂ ಭುವನೇಶ್ವರಿ ತಾಯಿ ಭಾವಚಿತ್ರ ಮೆರವಣಿಗೆ ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಎರಡು ಮತ್ತು ಮೂರನೇ ದಿನ ಸಭಾ ಕಾರ್ಯಕ್ರಮಗಳ ರೂಪುರೇಷೆ ಸಿದ್ಧಪಡಿಸಲಾಗಿದೆ.

ಅಂದಾಜು ₹30 ಲಕ್ಷ ವೆಚ್ಚ ಆಗಲಿದ್ದು 10 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಸಮ್ಮೇಳನ ಮುಗಿದ ನಂತರ ರಾಜ್ಯ ಸಮಿತಿಯಿಂದ ₹5 ಲಕ್ಷ ಅನುದಾನ ಸಿಗಲಿದೆ. ಉಳಿದ ಹಣವನ್ನು ಸಮುದಾಯ ಸಂಘ ಸಂಸ್ಥೆಗಳಿಂದ ಸಂಗ್ರಹಿಸಲಾಗುವುದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ತಿಳಿಸಿದೆ.

ಸಾಹಿತ್ಯ ಗೋಷ್ಠಿ ಅಭಿವೃದ್ಧಿ ಚರ್ಚೆ

‘ಕರ್ನಾಟಕ ಏಕೀಕರಣಕ್ಕೆ ಗದಗ ಜಿಲ್ಲೆ ಕೊಡುಗೆ’ ಈ ವಿಷಯ ಇರಿಸಿಕೊಂಡು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವುದು ಜಿಲ್ಲಾ ಘಟಕ ತಿಳಿಸಿದೆ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಪ್ರೊ. ಚಂದ್ರಶೇಖರ ವಸ್ತ್ರದ ಅವರನ್ನು ಆಯ್ಕೆ ಮಾಡಲಾಗಿದೆ.

ಕನ್ನಡ ನಾಡು ನುಡಿಗಾಗಿ ಗದಗ ಜಿಲ್ಲೆ ಕೊಡುಗೆ ಏನು? ಗದಗ ಜಿಲ್ಲೆಯಾಗಿ 25 ವರ್ಷಗಳಾಗಿದ್ದು ಅಭಿವೃದ್ಧಿ ಪ್ರಗತಿ ಕುರಿತಾಗಿ ಚರ್ಚೆ ಕವಿಗೋಷ್ಠಿ ಪುಸ್ತಕ ಬಿಡುಗಡೆ ಸಾಹಿತ್ಯ ಗೋಷ್ಠಿ ಗಜೇಂದ್ರಗಡ ತಾಲ್ಲೂಕಿನ ಇತಿಹಾಸ ಪರಂಪರೆ ಕುರಿತಾಗಿ ಚರ್ಚೆಗಳು ನಡೆಯಲಿವೆ.

ಗಜೇಂದ್ರಗಡ ಕೋಟೆ ನಾಡು ಸಾಂಸ್ಕೃತಿಕ ಮತ್ತು ಐತಿಹಾಸಿಕ ಪ್ರಸಿದ್ಧ ತಾಣ. ಆ ಹಿನ್ನಲೆಯಲ್ಲಿ ಗಜೇಂದ್ರಗಡ ಆಯ್ಕೆ ಮಾಡಲಾಗಿದೆ. ಅದಲ್ಲದೇ ಇಲ್ಲಿ ಸಮ್ಮೇಳನ ನಡೆದು 12 ವರ್ಷಗಳಾಗಿದ್ದವು. ಸ್ಥಳ ಆಯ್ಕೆ ಕುರಿತಾದ ಚರ್ಚೆಯಲ್ಲಿ ಗಜೇಂದ್ರಗಡ ತಾಲ್ಲೂಕು ಪದಾಧಿಕಾರಿಗಳು ಮುಂದೆ ಬಂದಿದ್ದರಿಂದ ಇದೇ ಸ್ಥಳವನ್ನು ಆಯ್ಕೆ ಮಾಡಲಾಯಿತು ಎಂದು ಜಿಲ್ಲಾ ಘಟಕ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.