ADVERTISEMENT

ಕಪ್ಪತ್ತಗುಡ್ಡ ಗಣಿಗಾರಿಕೆಗೆ ಅನುಮತಿ ನೀಡಿದರೆ ಹೋರಾಟ: ಬಸವರಾಜ ಸೂಳಿಭಾವಿ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 15:56 IST
Last Updated 18 ಅಕ್ಟೋಬರ್ 2024, 15:56 IST
ಕಪ್ಪತ್ತಗುಡ್ಡ
ಕಪ್ಪತ್ತಗುಡ್ಡ   

ಗದಗ: ಜಿಲ್ಲೆಯ ಜನರ ಜೀವನಾಡಿ, ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಹೆಸರು ಪಡೆದಿರುವ ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಿದರೆ ಉಗ್ರವಾದ ಹೋರಾಟಕ್ಕೆ ಮುಂದಾಗುತೇವೆ ಎಂದು ಸಾಹಿತಿ ಬಸವರಾಜ ಸೂಳಿಭಾವಿ ಎಚ್ಚರಿಕೆ ನೀಡಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಯಲು ಸೀಮೆ ಜನರ ಜೀವನಾಡಿ ಆಗಿರುವ ಕಪ್ಪತ್ತಗುಡ್ಡ ಕೇವಲ ಸಸ್ಯಕಾಶಿಯಾಗಿರದೆ ಈ ಭಾಗದ ಮಳೆಗಳಿಗೆ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಔಷಧಿ ಗುಣಗಳನ್ನು ಹೊಂದಿರುವ ವನ್ಯ ಸಂಪತ್ತು ರಕ್ಷಿಸಬೇಕು. ಈಗ ಇಲ್ಲಿಗೆ ಬರಲು ದೊಡ್ಡ ಕಂಪನಿಗಳ ಕಣ್ಣು ಬಿದ್ದಿದೆ. ವಿದೇಶಿ ಕಂಪನಿಗಳು ತುದಿಗಾಲಲ್ಲಿ ನಿಂತಿವೆ. ಆಗ ದೊಡ್ಡ ಹೋರಾಟದ ಫಲವಾಗಿ ಕಪ್ಪತ್ತಗುಡ್ಡವನ್ನು ಉಳಿಸಲಾಗಿತ್ತು. ಈಗ ಮತ್ತೆ ಗಣಿಗಾರಿಕೆಗೆ ಸರ್ಕಾರದಿಂದ ಅನುಮತಿ ನೀಡುವ ಸಾಧ್ಯತೆ ಇದ್ದು, ಅನುಮತಿ ನೀಡಿದರೆ ಹೋರಾಟ ಮಾಡಲಾಗುವುದು ಎಂದರು.

2017ರಲ್ಲಿ ಸರ್ಕಾರ ಕಪ್ಪತ್ತಗುಡ್ಡವನ್ನು ಸಂರಕ್ಷಿತ ಅರಣ್ಯ ಪ್ರದೇಶ ಅಂತ ಘೋಷಣೆ ಮಾಡಿದೆ. ಯಾವುದೇ ಗಣಿಗಾರಿಕೆ ಮಾಡಬಾರದು ಅಂತ ನಿಷೇಧ ಮಾಡಿತ್ತು. ನಂತರ ಹಲವು ಕಂಪನಿಗಳು ಹೈಕೊರ್ಟ್ ಮೊರೆ ಹೋದಾಗ ಹೈಕೊರ್ಟ್ ಸರ್ಕಾರದ ಆದೇಶ ಎತ್ತಿ ಹಿಡಿದು ನ್ಯಾಯ ಒದಗಿಸಿಕೊಟ್ಟಿದೆ. ಅಂದು ಕಪ್ಪತ್ತಗುಡ್ಡ ಉಳಿಸುವ ಹೋರಾಟದಲ್ಲಿ ಸಿದ್ದರಾಮಯ್ಯನವರು ಆಗಮಿಸಿ ಬೆಂಬಲಿಸಿದ್ದರು. ಆದರೆ, ಈಗ ಸಿಎಂ ಸ್ಥಾನದಲ್ಲಿರುವ ಅವರು ಇದಕ್ಕೆ ಅನುಮತಿ ನೀಡಲು ಹೋರಟಿರುವುದು ಶೋಚನೀಯ ಎಂದರು.

ADVERTISEMENT

ಜಿಲ್ಲಾ ಉಸ್ತುವಾರಿ ಸಚಿವ ಎಚ್. ಕೆ. ಪಾಟೀಲರು ಕೂಡ ಗಣಿಗಾರಿಕೆ ಪ್ರಸ್ತಾವವನ್ನು ತಿರಸ್ಕರಿಸುವಂತೆ ಸಿಎಂ ಮೇಲೆ ಒತ್ತಡ ಹೇರಬೇಕು. ಗಣಿಗಾರಿಕೆ ಲಾಬಿಗೆ ಸರ್ಕಾರ ಮಣಿಯಬಾರದು. ಅಪರೂಪದ ಔಷಧಿ ಸಸ್ಯ ಪ್ರಭೇದ ಕಪ್ಪತಗುಡ್ಡದಲ್ಲಿ ಇರುವುದು ಹಲವು ಸಂಶೋಧನೆಗಳಿಂದ ಬಹಿರಂಗವಾಗಿದೆ. ಕುರುಚಲು ಸಸ್ಯಗಳು ಇಲ್ಲಿ ಕಾಣಸಿಗುತ್ತವೆ. ಇವುಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.

ಚಂದ್ರಕಾಂತ್ ಚವಾಣ, ಜೆ.ಬಿ.ಪಾಟೀಲ, ಬಾಲರಾಜ ಅರಬರ, ಶೇಖಣ್ಣ ಕವಳಿಕಾಯಿ, ಶರೀಫ ಬಿಳೆಯಲಿ, ಕಾಶಿನಾಥ ಬಗಲಿ, ಅನಿಲ ಕಾಳೆ, ಪರಶು ಕಾಳೆ, ಬಸವರಾಜ ಬಿಳೆಯಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.