ಗದಗ: ಉತ್ತಮ ರಸ್ತೆ ಸಂಪರ್ಕ ಜಾಲವು ಅಭಿವೃದ್ಧಿಗೆ ವೇಗ ನೀಡುತ್ತದೆ. ಪ್ರವಾಸೋದ್ಯಮ ಅಭಿವೃದ್ಧಿ, ಕಡಿಮೆ ವೆಚ್ಚದಲ್ಲಿ ಸರಕು, ಸಾಗಣೆ, ಉದ್ಯಮಗಳ ಬೆಳವಣಿಗೆಗೆ ಶಕ್ತಿಮದ್ದಿನಂತೆ ಕೆಲಸ ನಿರ್ವಹಿಸುತ್ತದೆ. ಆದರೆ, ಗದಗ ಜಿಲ್ಲೆಯ ರಸ್ತೆಯ ಸ್ಥಿತಿಗತಿಗಳು ಅಷ್ಟೇನೂ ಆಶಾದಾಯಕವಾಗಿಲ್ಲ. ಅದರಲ್ಲೂ ಗ್ರಾಮೀಣ ಪ್ರದೇಶದಿಂದ ಪಟ್ಟಣ, ನಗರ ಸಂಪರ್ಕಿಸುವ ರಸ್ತೆಗಳ ಜಾಲ ಅಮೂಲಾಗ್ರವಾಗಿ ಸುಧಾರಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.
ಗದಗ ನಗರದಿಂದ ಹುಬ್ಬಳ್ಳಿ, ಹೊಸಪೇಟೆ, ಮುಂಡರಗಿ, ರೋಣ ಸಂಪರ್ಕಿಸುವ ರಸ್ತೆ ಮಾರ್ಗಗಳು ಉತ್ತಮವಾಗಿವೆ. ಆದರೆ, ಗದಗ– ಲಕ್ಷ್ಮೇಶ್ವರ ರಸ್ತೆಯ ಸ್ಥಿತಿ ಸದ್ಯಕ್ಕೆ ಭಯಾನಕವಾಗಿದೆ.
ಅರ್ಧ, ಮುಕ್ಕಾಲು ಗಂಟೆಯಲ್ಲಿ ತಲುಪಬಹುದಾದ ಸ್ಥಳಕ್ಕೆ ಕನಿಷ್ಠ ಒಂದೂವರೆ ಗಂಟೆ ಹಿಡಿಯುತ್ತಿದೆ. ನಾಗಾವಿ ಕ್ರಾಸ್‌ನಿಂದ ಲಕ್ಷ್ಮೇಶ್ವರ ತಲುಪುವ ವೇಳೆಗೆ ವಾಹನಗಳು ನೂರಾರು ತಗ್ಗು ಗುಂಡಿಗಳನ್ನು ಇಳಿದು ಹತ್ತಬೇಕು. ಹೀಗೆ ವಾಹನಗಳ ಚಕ್ರಗಳು ಗುಂಡಿ ಹತ್ತಿ ಇಳಿಯುವ ಸಂದರ್ಭದಲ್ಲಿ ಪ್ರಯಾಣಿಕರ ಮೈಮೂಳೆಗಳಿಗೆ ಸಾಕಷ್ಟು ನೋವುಂಟಾಗುತ್ತದೆ. ವೃದ್ಧರು, ಗರ್ಭಿಣಿಯರು, ಬಾಣಂತಿಯರಿಗೆ ಈ ರಸ್ತೆ ದುಃಸ್ವಪ್ನವಾಗಿ ಕಾಡುತ್ತಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ತಕ್ಷಣವೇ ಈ ರಸ್ತೆ ದುರಸ್ತಿಗೆ ಕ್ರಮವಹಿಸಬೇಕು ಎಂದು ಪ್ರಯಾಣಿಕರು ಆಗ್ರಹಿಸುತ್ತಾರೆ.
ಗದಗ– ಲಕ್ಷ್ಮೇಶ್ವರ ರಸ್ತೆ ಇಷ್ಟೊಂದು ಹದಗೆಡಲು ಕಾರಣವೇನು?: ಲಕ್ಷ್ಮೇಶ್ವರ, ಶಿರಹಟ್ಟಿ ಮತ್ತು ಮುಂಡರಗಿ ತಾಲ್ಲೂಕಿನಲ್ಲಿ ಮರಳು ಗಣಿಗಾರಿಕೆ, ಕ್ರಷರ್ ಚಟುವಟಿಕೆಗಳು ಜೋರಾಗಿವೆ. ಜಲ್ಲಿಕಲ್ಲು, ಎಂ– ಸ್ಯಾಂಡ್, ಮರಳನ್ನು ನಿಯಮಕ್ಕೂ ಮೀರಿ ತುಂಬಿಕೊಂಡ ಅತಿಭಾರದ ನೂರಾರು ಟಿಪ್ಪರ್‌ಗಳು ಈ ರಸ್ತೆಯಲ್ಲಿ ರಾತ್ರಿ– ಬೆಳಿಗ್ಗೆ ಎನ್ನದೇ ಸಂಚರಿಸುತ್ತವೆ. ಇದೇ ಕಾರಣಕ್ಕಾಗಿ ಈ ನಿರ್ದಿಷ್ಟ ವ್ಯಾಪ್ತಿಯಲ್ಲಿನ ರಸ್ತೆಗಳು ತೀವ್ರ ಹದಗೆಟ್ಟಿವೆ ಎನ್ನುತ್ತಾರೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು.
ರಸ್ತೆ ದುರಸ್ತಿ, ಅಭಿವೃದ್ಧಿ ಕಾಮಗಾರಿ ಯಾವಾಗ?: ‘ಕಾರವಾರ– ಕೈಗಾ– ಇಳಕಲ್ ರಾಜ್ಯ ಹೆದ್ದಾರಿ 5ರಲ್ಲಿ ಬರುವ ಲಕ್ಷ್ಮೇಶ್ವರ– ಗದಗ ಸಂಪರ್ಕಿಸುವ ರಸ್ತೆ ತೀವ್ರ ಹದಗೆಟ್ಟಿದೆ. ಈ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿದ್ದು, ಶೀಘ್ರ ಕಾಮಗಾರಿ ಆರಂಭಿಸಲಾಗುವುದು’ ಎನ್ನುತ್ತಾರೆ ಗದಗ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ವಿ.ಎನ್.ಪಾಟೀಲ.
‘ಗದಗ ತಾಲ್ಲೂಕಿನ ನಾಗಾವಿ ಕ್ರಾಸ್‌ನಿಂದ ಮುಳಗುಂದ ವರೆಗಿನ ರಸ್ತೆ ಅಭಿವೃದ್ಧಿಗೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಎಸ್‌ಎಚ್‌ಡಿಪಿ) ಅಡಿ ₹25 ಕೋಟಿ ಅನುದಾನ ಮಂಜೂರಾಗಿದೆ. ಇದರಲ್ಲಿ ಈಗಿರುವ ಐದೂವರೆ ಮೀಟರ್ ರಸ್ತೆಯನ್ನು ಏಳು ಮೀಟರ್‌ಗೆ ವಿಸ್ತರಣೆ ಮಾಡಿ ಅಭಿವೃದ್ಧಿಪಡಿಸಲಾಗುವುದು. ವರ್ಕ್ ಆರ್ಡರ್ ಸಿಕ್ಕ ಒಂದು ವಾರದಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ’ ಎಂದು ತಿಳಿಸಿದ್ದಾರೆ.
‘ಅಲ್ಲಿಂದ ಮುಂದಿನ ರಸ್ತೆಯನ್ನು ಮರು ಡಾಂಬರೀಕರಣ ಮಾಡಲು ₹4 ಕೋಟಿ ಸಿಆರ್‌ಎಫ್ ಅನುದಾನ ಬಳಸಲಾಗುವುದು. ಈ ಕೆಲಸವನ್ನು ರಾಷ್ಟ್ರೀಯ ಹೆದ್ದಾರಿ ವಿಭಾಗದವರು ಮಾಡುತ್ತಾರೆ. ಅಲ್ಲಿಂದ ಮುಂದಕ್ಕೆ ಶಿರಹಟ್ಟಿ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಗದಗ– ಲಕ್ಷ್ಮೇಶ್ವರ ರಸ್ತೆ ತೀವ್ರ ಹದಗೆಟ್ಟಿದೆ. ಇದರ ಅಭಿವೃದ್ಧಿಗಾಗಿ ಅನುದಾನ ಕೋರಿ ಪ್ರಸ್ತಾವ ಸಲ್ಲಿಸಲಾಗುತ್ತಿದ್ದು, ಇದಕ್ಕೂ ಹಣ ಬಿಡುಗಡೆಯಾದರೆ ಗದಗ ಲಕ್ಷ್ಮೇಶ್ವರ ಮಾರ್ಗದ ರಸ್ತೆ ಒಂದು ಹಂತಕ್ಕೆ ಬರಲಿದೆ’ ಎನ್ನುತ್ತಾರೆ ಅವರು.
ಸದ್ಯಕ್ಕೆ ಅನುದಾನ ಮಂಜೂರು ಆಗದ ಕಡೆಗಳಲ್ಲಿನ ತಗ್ಗು ಗುಂಡಿಗಳನ್ನು ಮುಚ್ಚಿಸಲು ಶೀಘ್ರ ಕೆಲಸ ಆರಂಭಿಸಲಾಗುವುದು. ಕಾರವಾರ– ಕೈಗಾ– ಇಳಕಲ್ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಬೇಕು ಎಂಬುದು ಸ್ಥಳೀಯರ ಬೇಡಿಕೆ ಆಗಿದೆ. ಈ ರಸ್ತೆ ರಾಷ್ಟ್ರೀಯ ಹೆದ್ದಾರಿ ಆದರೆ ರಸ್ತೆಯ ಗುಣಮಟ್ಟ ಸುಧಾರಿಸುವುದರ ಜತೆಗೆ ಜಿಲ್ಲೆ ಆರ್ಥಿಕವಾಗಿಯೂ ಅಭಿವೃದ್ಧಿ ಹೊಂದುತ್ತದೆ ಎಂಬುದು ಇಲಾಖೆ ಅಧಿಕಾರಿಗಳ ಅಭಿಪ್ರಾಯವಾಗಿದೆ.
ಅಂಕಿ ಅಂಶ
799 ಕಿ.ಮೀಗದಗ ಜಿಲ್ಲಾ ಲೋಕೋಪಯೋಗಿ ಇಲಾಖೆ ವಿಭಾಗಕ್ಕೆ ಬರುವ ರಾಜ್ಯ ಹೆದ್ದಾರಿ
1,417 ಕಿ.ಮೀಜಿಲ್ಲಾ ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುವ ಜಿಲ್ಲಾ ಮುಖ್ಯರಸ್ತೆಗಳು
ಮೈಲುಗೂಲಿಗಳ ನೇಮಕ
ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಅವರ ನಿರ್ದೇಶನದ ಮೇರೆಗೆ ರಸ್ತೆಗಳನ್ನು ಕಾಯಲು ಮೈಲುಗೂಲಿಗಳನ್ನು ನೇಮಿಸಿಕೊಳ್ಳಲಾಗಿದೆ. ಗದಗ ಜಿಲ್ಲೆಯಲ್ಲಿ ಸದ್ಯ 50 ಮಂದಿ ಮೈಲುಗೂಲಿಗಳು ಇದ್ದಾರೆ. ‘ರಸ್ತೆಗಳ ಸಂರಕ್ಷಣೆ ಮಾಡುವುದು ಮೈಲುಗೂಲಿಗಳ ಕೆಲಸ. ರಸ್ತೆ ಅತಿಕ್ರಮಣ ಗಮನಿಸುವುದು ರಸ್ತೆ ಬದಿ ನೀರು ನಿಂತಿದ್ದರೆ ಸ್ವಚ್ಛಗೊಳಿಸುವುದು ಹೆದ್ದಾರಿಗಳಿಗೆ ಸಂಬಂಧಿಸಿದಂತೆ ಮಳೆಗಾಲದಲ್ಲಿ ಎದುರಾಗುವ ಸಮಸ್ಯೆಗಳನ್ನು ನಿಭಾಯಿಸುವುದು ಇವರ ಕೆಲಸ’ ಎಂದು ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ವಿ.ಎನ್.ಪಾಟೀಲ ತಿಳಿಸಿದ್ದಾರೆ.
ಜಿಲ್ಲೆಯಲ್ಲಿನ ರಸ್ತೆಗಳ ಸುಧಾರಣೆಗೆ ಕ್ರಮ
‘ಎರಡು ವರ್ಷಗಳ ಹಿಂದಕ್ಕೆ ಒಮ್ಮೆ ತಿರುಗಿ ನೋಡಿದರೆ ರಸ್ತೆ ಸರಿ ಇಲ್ಲ ಎಂಬ ಕಾರಣಕ್ಕೆ ಜಿಲ್ಲೆಯ ಒಂದಲ್ಲ ಒಂದು ಕಡೆಗಳಲ್ಲಿ ಪ್ರತಿದಿನ ಪ್ರತಿಭಟನೆ ನಡೆಯುತ್ತಿದ್ದವು. ಆದರೆ ಸದ್ಯ ಈಗ ಆ ಸ್ಥಿತಿ ಇಲ್ಲ. ಜಿಲ್ಲೆಯಲ್ಲಿನ ರಸ್ತೆಗಳ ಅಭಿವೃದ್ಧಿಗೆ ಪರಿಣಾಮಕಾರಿಯಾಗಿ ಯೋಜನೆ ರೂಪಿಸಿದ್ದರಿಂದ ಗದಗ ನಗರಕ್ಕೆ ಎಲ್ಲ ಕಡೆಗಳಿಂದಲೂ ಉತ್ತಮ ಸಂಪರ್ಕ ಜಾಲ ರೂಪುಗೊಂಡಿದೆ’ ಎನ್ನುತ್ತಾರೆ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ವಿ.ಎನ್.ಪಾಟೀಲ. ‘ಗದಗ ಜಿಲ್ಲೆಯಲ್ಲಿ ಲಕ್ಷ್ಮೇಶ್ವರ ಶಿರಹಟ್ಟಿ ಮತ್ತು ಮುಂಡರಗಿ ತಾಲ್ಲೂಕಿನ ಸ್ವಲ್ಪ ಭಾಗದ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬೇಕಿದೆ. ಮಳೆಗೆ ಸಿಕ್ಕು ಈ ಭಾಗದ ಸಾಕಷ್ಟು ರಸ್ತೆಗಳು ಹಾಳಾಗಿವೆ. ಜತೆಗೆ ಈ ಭಾಗದಲ್ಲಿ ಮೈನಿಂಗ್ ಚಟುವಟಿಕೆಗೆ ಜಾಸ್ತಿ ಇರುವುದರಿಂದ ನಿರ್ವಹಣೆಗೆ ಹೆಚ್ಚಿನ ಅನುದಾನ ಬೇಕಿದೆ’ ಎನ್ನುತ್ತಾರೆ ಅವರು. ‘ರೋಣ ಪಟ್ಟಣ ವ್ಯಾಪ್ತಿಯಲ್ಲಿನ ರಸ್ತೆ ಅಭಿವೃದ್ಧಿಗೆ ₹20 ಕೋಟಿ ನರಗುಂದ ವಿಧಾನಸಭಾ ಕ್ಷೇತ್ರಕ್ಕೆ ₹10 ಕೋಟಿ ಶಿರಹಟ್ಟಿ ವಿಧಾನಸಭಾ ಕ್ಷೇತ್ರಕ್ಕೆ ₹10 ಕೋಟಿ ಎಸ್‌ಎಚ್‌ಡಿಪಿ ಅನುದಾನ ಬಿಡುಗಡೆ ಆಗಿದೆ. ಗದಗ– ರೋಣ ರಸ್ತೆಯ ವಿಸ್ತರಣೆ ಉದ್ದೇಶ ಇದೆ. ಆದರೆ ಸದ್ಯ ರಸ್ತೆಯ ಸ್ಥಿತಿ ಚೆನ್ನಾಗಿದೆ. ಸಂಚಾರ ದಟ್ಟಣೆ ಜಾಸ್ತಿ ಆದರೆ ಅದನ್ನು ಕೈಗೆತ್ತಿಕೊಳ್ಳಲಾಗುವುದು. ನರಗುಂದ ಭಾಗದಲ್ಲಿ ಎಲ್ಲ ರಸ್ತೆಗಳು ಚೆನ್ನಾಗಿವೆ’ ಎನ್ನುತ್ತಾರೆ ಅವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.