ADVERTISEMENT

ಗದಗ– ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿ ದುಸ್ಥಿತಿ: ಕನಸಾಗಿಯೇ ಉಳಿದ ಸರ್ವಋತು ರಸ್ತೆ

ಪ್ರಯಾಣಕ್ಕೆ ತೀವ್ರ ತೊಂದರೆ

ಪ್ರಜಾವಾಣಿ ವಿಶೇಷ
Published 27 ಆಗಸ್ಟ್ 2024, 4:57 IST
Last Updated 27 ಆಗಸ್ಟ್ 2024, 4:57 IST
ಮುಳಗುಂದ ಗದಗ ನಡುವಿನ ರಸ್ತೆ, ಮಳೆ ಪರಿಣಾಮ ಗುಂಡಿ ಬಿದ್ದು ಹಾಳಾಗಿರುವುದು
ಮುಳಗುಂದ ಗದಗ ನಡುವಿನ ರಸ್ತೆ, ಮಳೆ ಪರಿಣಾಮ ಗುಂಡಿ ಬಿದ್ದು ಹಾಳಾಗಿರುವುದು   

ಮುಳಗುಂದ: ಗದಗ- ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿ ಹಾಳಾಗಿ ಹಲವು ವರ್ಷಗಳು ಕಳೆದಿದ್ದು, ಈವರೆಗೆ ದುರಸ್ತಿ ಕಾರ್ಯ ನಡೆದಿಲ್ಲ. 2008ರಲ್ಲಿ ಸರ್ವಋತು ರಸ್ತೆ ನಿರ್ಮಾಣದ ಗುರಿ ಹೊಂದಲಾಗಿತ್ತು, ಆದರೆ ಅದು ಈವರೆಗೂ ಈಡೆರಲ್ಲ. ಯೋಜನೆ ಮುಗಿದು, ಸುಗಮ ಸಂಚಾರ ಯಾವಾಗ ಎನ್ನುವ ಪ್ರಶ್ನೆ ಸಾರ್ವಜನಿಕರನ್ನು ಈಗಲೂ ಕಾಡುತ್ತಿದೆ.

ರಸ್ತೆ ಹಾಳಾದ ಪರಿಣಾಮ ವಾಹನ ಸವಾರರು ನಿತ್ಯ ತೊಂದರೆ ಅನುಭವಿಸುವುದು ತಪ್ಪದಾಗಿದೆ. ಮುಳಗುಂದ ಗದಗ ನಡುವಿನ ಮುಖ್ಯ ರಸ್ತೆ ಹಾಳಾಗಿದ್ದು, ಸುಗಮ ಸಂಚಾರಕ್ಕೆ ಕಂಟಕವಾಗಿ ಪರಿಣಮಿಸಿದೆ. ಮಳೆ ಆಗುವ ಪೂರ್ವದಲ್ಲೇ ರಸ್ತೆ ತಗ್ಗು ಬಿದ್ದು ಹಾಳಾಗಿತ್ತು. ಈಗ ಮತ್ತಷ್ಟು ಹಾಳಾಗಿದೆ. ಕಳೆದ ಒಂದು ತಿಂಗಳಿಂದ ನಿರಂತರ ಮಳೆ ಆಗುತ್ತಿರುವ ಕಾರಣ ಹರ್ತಿ ಗ್ರಾಮದಿಂದ ನಾಗಾವಿ ಕ್ರಾಸ್‌ವರೆಗೆ 10 ಕಿ.ಮೀ. ಡಾಂಬರ ರಸ್ತೆ ಕಿತ್ತು, ದಾರಿ ಉದ್ದಕ್ಕು ಗುಂಡಿಗಳು ಬಿದ್ದು, ಹೊಂಡಗಳು ಸೃಷ್ಟಿಯಾಗಿವೆ. ಮಾಗಡಿ ಹತ್ತಿರ ರಸ್ತೆ ಸಂಪೂರ್ಣ ಹಾಳಾಗಿದೆ. ಬೈಕ್, ವಾಹನ ಸವಾರರು ಎದ್ದು ಬಿದ್ದು ಹೋಗುವ ಸ್ಥಿತಿ ನಿರ್ಮಾಣವಾಗಿದೆ.

2022ರಲ್ಲಿ ಅಭಿವೃದ್ದಿಪಡಿಸಿದ್ದ ಡಾಂಬರು ರಸ್ತೆ ಹೆಚ್ಚುದಿನ ಬಾಳಿಕೆ ಬಾರದೆ ಹಾಳಾಗಿದೆ. ವಾಹನಗಳ ವೇಗಕ್ಕೆ ತಡೆಯೊಡ್ಡುವಂತೆ ತಗ್ಗು ದಿಣ್ಣೆಗಳು ಬಿದ್ದಿವೆ. ಸಕಾಲದಲ್ಲಿ ದುರಸ್ತಿ ಕಾರ್ಯ ಕೈಗೊಂಡಿಲ್ಲ, ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಕೂಡ ನಿರ್ಲಕ್ಷ್ಯ ವಹಿಸಿದೆ. 2022ರಲ್ಲಿ ಹರ್ತಿಯಿಂದ ಬಸಾಪೂರ ಕ್ರಾಸ್‌ವರೆಗೆ ಅಂದಾಜು 5 ಕಿ.ಮೀ ರಸ್ತೆ ಹಾಗೂ ನಾಗಾವಿ ಕ್ರಾಸ್‌ನಿಂದ ಮುಳಗುಂದವರೆಗೆ ರಸ್ತೆ ಅಭಿವೃದ್ದಿ ಪಡಿಸಲಾಗಿತ್ತು. ಕಾಮಗಾರಿ ಮುಕ್ತಾಯವಾದ ಕೆಲವೇ ದಿನಗಳಲ್ಲಿ ರಸ್ತೆ ಹಾಳಾಗಿದೆ. ಈ ಭಾಗದ ರಸ್ತೆ ಅಭಿವೃದ್ದಿ ಕಾಮಗಾರಿಗಳು ಯೋಜನಾ ಬದ್ದವಾಗಿ ನಡೆದಿಲ್ಲ ಎಂದು ಸಾರ್ವಜನಕರು ದೂರಿದ್ದಾರೆ.

ಈಚಲಹಳ್ಳದ ಸೇತುವೆ ಹತ್ತಿರ ದೊಡ್ಡ ಕಂದಕ ಉಂಟಾಗಿದೆ. ಮುಳಗುಂದ ದ್ವಾರ ಬಾಗಿಲ ಹತ್ತಿರ ರಸ್ತೆ ಕಿತ್ತು ಹೋಗಿದ್ದು, ರಾತ್ರಿ ವೇಳೆ ಬೈಕ್‌, ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಶೀತಾಲಹರಿ ಕ್ರಾಸ್ ಹತ್ತಿರ ರಸ್ತೆ ನಡುವೆ ದೊಡ್ಡ ಗುಂಡಿಬಿದ್ದು ನೀರು ನಿಂತಿದೆ. ಬೇಸಿಗೆಯಲ್ಲಿ ದುರಸ್ತಿ ಕಾಮಗಾರಿ ಮಾಡದಿರುವ ಪರಿಣಾಮ ರಸ್ತೆ ಹಾಳಾಗಿದೆ ಎಂದು ರಾಘವೇಂದ್ರ ಕುಂಬಾರಗೇರಿ ಲೋಕೋಪಯೋಗಿ ಇಲಾಖೆ ವಿರುದ್ದ ಆರೋಪ ಮಾಡಿದ್ದಾರೆ.

ADVERTISEMENT
ಮುಳಗುಂದ– ಗದಗ ಮಾರ್ಗದಲ್ಲಿ ನಿತ್ಯ ಪ್ರಯಾಣಿಕ ವಾಹನಗಳು ಟಿಪ್ಪರ್‌ ಲಾರಿ ಬೈಕ್ ಸೇರಿದಂತೆ ಸಾವಿರಾರು ವಾಹನಗಳ ಸಂಚರಿಸುತ್ತವೆ. ಪ್ರತಿವರ್ಷ ಮಳೆಗಾಲದಲ್ಲಿ ರಸ್ತೆ ಹಾಳಾಗುವುದು ಸಾಮಾನ್ಯವಾಗಿದ್ದು ಸರ್ವಋತು ರಸ್ತೆ ನಿರ್ಮಿಸಲು ಕ್ರಮವಹಿಸಬೇಕು.
–ವೀರಭದ್ರಯ್ಯ, ಸ್ಥಳೀಯ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.