ADVERTISEMENT

ಗದಗ | ವ್ಯಸನ ಬಿಟ್ಟು ಯಶಸ್ಸಿನ ಹಾದಿಯಲ್ಲಿ ನಡೆಯಿರಿ: ಪೊಲೀಸ್ ವರಿಷ್ಠಾಧಿಕಾರಿ

ಯುವಜನತೆಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ.ಸಂಕದ ಸಲಹೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2024, 15:42 IST
Last Updated 26 ಜೂನ್ 2024, 15:42 IST
ಗದಗ ನಗರದ ಆದರ್ಶ ವಿದ್ಯಾ ಸಂಸ್ಥೆಯಲ್ಲಿ ಬುಧವಾರ ನಡೆದ ಮಾದಕ ವ್ಯಸನ ಮತ್ತು ಅಕ್ರಮ ಕಳ್ಳಸಾಗಣೆ ವಿರುದ್ಧದ ಅಂತರರಾಷ್ಟ್ರೀಯ ದಿನಾಚರಣೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ.ಸಂಕದ ಮಾತನಾಡಿದರು
ಗದಗ ನಗರದ ಆದರ್ಶ ವಿದ್ಯಾ ಸಂಸ್ಥೆಯಲ್ಲಿ ಬುಧವಾರ ನಡೆದ ಮಾದಕ ವ್ಯಸನ ಮತ್ತು ಅಕ್ರಮ ಕಳ್ಳಸಾಗಣೆ ವಿರುದ್ಧದ ಅಂತರರಾಷ್ಟ್ರೀಯ ದಿನಾಚರಣೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ.ಸಂಕದ ಮಾತನಾಡಿದರು   

ಗದಗ: ‘ಇಂದಿನ ವಿದ್ಯಾರ್ಥಿಗಳ ಕೈಯಲ್ಲಿ ದೇಶದ ಮುಂದಿನ ಭವಿಷ್ಯವಿದೆ. ಯುವಜನರು ಮಾದಕವಸ್ತುಗಳ ವ್ಯಸನಕ್ಕೆ ಬಲಿಪಶುಯಾಗದೇ; ಉತ್ತಮ ಆರೋಗ್ಯದಿಂದ ಜೀವನದಲ್ಲಿ ಯಶಸ್ಸಿನೆಡೆಗೆ ಸಾಗಬೇಕು’ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ.ಸಂಕದ ಹೇಳಿದರು.

ನಗರದ ಆದರ್ಶ ವಿದ್ಯಾ ಸಂಸ್ಥೆಯ ವಿ.ಆರ್.ಕುಷ್ಟಗಿ ಸ್ಮಾರಕ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬುಧವಾರ ಜಿಲ್ಲಾಡಳಿತದ ವತಿಯಿಂದ ನಡೆದ ಮಾದಕ ವ್ಯಸನ ಮತ್ತು ಅಕ್ರಮ ಕಳ್ಳಸಾಗಣೆ ವಿರುದ್ಧದ ಅಂತರರಾಷ್ಟ್ರೀಯ ದಿನ ಉದ್ಘಾಟಿಸಿ ಮಾತನಾಡಿದರು.

‘ಸ್ವಾತಂತ್ರ್ಯಾ ನಂತರದಲ್ಲಿ ದೇಶದಲ್ಲಿ ಬಡತನ, ಹಸಿವು, ಶಿಕ್ಷಣದಿಂದ ವಂಚಿತರಾದಂತ ಸಮಸ್ಯೆಗಳು ಇದ್ದವು. ಪ್ರಸ್ತುತ ನಮ್ಮ ಸಮಾಜದಲ್ಲಿ ಮಾದಕ ವ್ಯಸನದಂತಹ ಗಂಭೀರ ಸಮಸ್ಯೆಗಳು ಹೆಚ್ಚಾಗಿದ್ದು ಜಗತ್ತಿನಲ್ಲಿ ಹಲವಾರು ಜನರು ಮಾದಕ ವ್ಯಸನಕ್ಕೆ ಬಲಿಪಶುವಾಗಿದ್ದಾರೆ. ಇಂತಹ ಸಮಸ್ಯೆಯಿಂದ ವೈಯಕ್ತಿಕ ಹಾನಿಯಷ್ಟೇ ಅಲ್ಲದೇ; ದೇಶದ ಆರ್ಥಿಕತೆ ಸೇರಿದಂತೆ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ’ ಎಂದು ತಿಳಿಸಿದರು.

ADVERTISEMENT

‘ಮಾದಕ ವ್ಯಸನಮುಕ್ತ ಸಮಾಜ ನಿರ್ಮಿಸುವ ಕೆಲಸ ಪೊಲೀಸರಿಗೆ ಮಾತ್ರ ಸೀಮಿತವಾಗಿದ್ದಲ್ಲ. ಮಾದಕ ವಸ್ತುಗಳ ಕಳ್ಳಸಾಗಣೆ ಮಾಡುತ್ತಿದ್ದು ತಿಳಿದು ಬಂದರೆ ಸಾರ್ವಜನಿಕರು ತಕ್ಷಣ ಪೊಲೀಸ್ ಇಲಾಖೆಯ ಗಮನಕ್ಕೆ ತರಬೇಕು’ ಎಂದು ಹೇಳಿದರು.

ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ.ಅರವಿಂದ ಕೆ. ಮಾತನಾಡಿ, ‘ಚಿಕಿತ್ಸೆಗಿಂತ ತಡೆಗಟ್ಟುವಿಕೆ ಉತ್ತಮವಾಗಿದ್ದು, ಒಂದು ಸಿಗರೇಟ್ ಸೇರುವುದರಿಂದ ಜೀವನದ ಅತ್ಯಮೂಲ್ಯ 11 ನಿಮಿಷಗಳನ್ನು ಕಳೆದುಕೊಳ್ಳುತ್ತೇವೆ. ಸಿಗರೇಟ್‌ನಲ್ಲಿ 6000ಕ್ಕೂ ಹೆಚ್ಚು ಹಾನಿಕಾರಕ ರಾಸಾಯನಿಕಗಳಿರುತ್ತವೆ ಮತ್ತು ಅದರಲ್ಲಿ 60ಕ್ಕೂ ಹೆಚ್ಚು ರಾಸಾಯನಿಕಗಳು ಕ್ಯಾನ್ಸರ್ ರೋಗಕ್ಕೆ ದಾರಿಮಾಡಿಕೊಡುತ್ತವೆ. ವಿದ್ಯಾರ್ಥಿಗಳು ಕುತೂಹಲದಿಂದ ಮಾದಕ ವ್ಯಸನ ಪ್ರಾರಂಭಿಸಿ ಅದರಿಂದ ಹೊರಬರಲಾಗದೇ ಅದಕ್ಕೆ ದಾಸರಾಗುತ್ತಾರೆ. ಹಾಗಾಗಿ ಒಳ್ಳೆಯ ಅಭ್ಯಾಸಗಳನ್ನು ರೂಢಿ ಮಾಡಿಕೊಂಡು ಜೀವನದಲ್ಲಿ ಸಫಲವಾಗಬೇಕು ಎಂದು ತಿಳಿಸಿದರು.

ಮಾದಕ ವ್ಯಸನದ ಕಾರಣಗಳು, ಅದರಿಂದಾಗುವ ಪರಿಣಾಮ ಸೇರಿದಂತೆ ವ್ಯಸನದಿಂದ ಹೇಗೆ ಮುಕ್ತರಾಗಬೇಕೆಂದು ವಿದ್ಯಾರ್ಥಿಗಳಿಗೆ ಪಿಪಿಟಿ ಮೂಲಕ ವಿವರಿಸಿದರು.

ಪೊಲೀಸ್ ಇಲಾಖೆಯ ಎಸ್.ಎಂ.ಶಿರಗುಪ್ಪಿ, ಆರೋಗ್ಯ ಶಿಕ್ಷಣಾಧಿಕಾರಿ ರೂಪಸೇನ ಚವ್ಹಾಣ, ಉಪ ಪ್ರಾಚಾರ್ಯ ಡಾ.ವಿ.ಟಿ.ನಾಯ್ಕರ, ಪ್ರಾಧ್ಯಾಪಕ ಆರ್.ಆರ್.ಕುಲಕರ್ಣಿ, ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ಪ್ರೊ. ಬಾಹುಬಲಿ ಜೈನರ್ ಕಾರ್ಯಕ್ರಮ ನಿರ್ವಹಿಸಿದರು.

‘ಸಾಕ್ಷಿಗಳು ಸ್ಪಷ್ಟವಾಗಿವೆ: ತಡೆಗಟ್ಟುವಲ್ಲಿ ಹೂಡಿಕೆ ಮಾಡಿ’ ಎಂಬುದು ಈ ವರ್ಷದ ಘೋಷವಾಕ್ಯ. ಮಾದಕ ವ್ಯಸನದಿಂದ ದೇಹದ ಅಂಗಾಂಗಗಳು ವಿಫಲಗೊಳ್ಳುತ್ತವೆ. ಹಾಗಾಗಿ ಮಾದಕ ವಸ್ತುಗಳಿಂದ ಯುವಜನರು ದೂರ ಇರಬೇಕು

-ಡಾ.ಎಸ್.ಎಸ್.ನೀಲಗುಂದ ಡಿಎಚ್‌ಒ

ಸಾಮಾಜಿಕ ಜಾಲತಾಣ ಮತ್ತು ಚಲನಚಿತ್ರಗಳ ಪ್ರಭಾವಕ್ಕೆ ಒಳಗಾಗಿ ಇಂದಿನ ವಿದ್ಯಾರ್ಥಿಗಳು ಮಾದಕ ವ್ಯಸನಕ್ಕೆ ತುತ್ತಾಗುತ್ತಾರೆ. ಅಂತಹ ವಿದ್ಯಾರ್ಥಿಗಳು ಜಿಲ್ಲಾ ಮಾನಸಿಕ ಆರೋಗ್ಯ ಕೇಂದ್ರದಿಂದ ನೀಡುವ ಉಚಿತ ಚಿಕಿತ್ಸೆ ಪಡೆದುಕೊಳ್ಳಬಹುದು

- ಡಾ.ರಾಜೇಂದ್ರ ಬಸರಿಗಿಡದ ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.