ಗದಗ: ಮುಂದಿನ ಆದೇಶದವರೆಗೆಗದಗ ಬೆಟಗೇರಿ ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಯನ್ನು ಗೆಜೆಟ್‌ನಲ್ಲಿ ಪ್ರಕಟಿಸದಂತೆ ಹೈಕೋರ್ಟ್ ಧಾರವಾಡ ಪೀಠ ಆದೇಶ ನೀಡಿರುವುದು ಕಾಂಗ್ರೆಸ್ ಪಾಳಯದಲ್ಲಿ ಖುಷಿ ತರಿಸಿದ್ದರೆ; ಚುನಾವಣೆಯನ್ನು ನಿಯಮಾನುಸಾರವೇ ನಡೆಸಲಾಗಿದ್ದು, ಇದಕ್ಕೆ ಸಂಬಂಧಪಟ್ಟ ಎಲ್ಲ ವಿಡಿಯೊ ದಾಖಲೆಗಳು ನಮ್ಮ ಬಳಿ ಇವೆ ಎಂಬ ಅಧಿಕಾರಿಗಳ ಹೇಳಿಕೆ ಬಿಜೆಪಿ ಪಾಳಯದಲ್ಲಿ ಆಶಾಭಾವ ಮೂಡಿಸಿದೆ.
ಗದಗ ಬೆಟಗೇರಿ ನಗರಸಭೆಗೆ ಡಿ.27ರಂದು ಚುನಾವಣೆ ನಡೆದು, ಡಿ.30ರಂದು ಫಲಿತಾಂಶ ಪ್ರಕಟವಾಗಿತ್ತು. 35 ವಾರ್ಡ್‌ಗಳ ಪೈಕಿ 18 ವಾರ್ಡ್‌ಗಳಲ್ಲಿ ಗೆಲುವು ಸಾಧಿಸುವ ಮೂಲಕ ಬಿಜೆಪಿ ಸರಳ ಬಹುಮತ ಪಡೆದಿತ್ತು. ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಜ.24ರಂದು ನಡೆದಿತ್ತು. ಚುನಾವಣಾಧಿಕಾರಿಯಾಗಿ ಗದಗ ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಕರ್ತವ್ಯ ನಿರ್ವಹಿಸಿದ್ದರು.
ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ವೇಳೆ ಸದಸ್ಯರು ಕೈ ಎತ್ತುವ ಮೂಲಕ ಯಾರಿಗೆ ತಮ್ಮ ಬೆಂಬಲ ಎಂಬುದನ್ನು ಸೂಚಿಸಿದ್ದರು. ಅದರಂತೆ, ಬಿಜೆಪಿಯ ಉಷಾ ದಾಸರ ಅವರಿಗೆ 19 ಮಂದಿ ಕೈ ಎತ್ತಿದ್ದರು.
ಆದರೆ, ಸಹಿ ಮಾಡುವಾಗ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ಚಂದಾವರಿ ಅವರಿಗೆ 19 ಮತಗಳು ಬಿದ್ದಿವೆ ಎಂದು ಕಾಂಗ್ರೆಸ್‌ವರು ಆರೋಪ ಮಾಡಿ ಶಾಸಕ ಎಚ್.ಕೆ.ಪಾಟೀಲ ನೇತೃತ್ವದಲ್ಲಿ ಕಾಂಗ್ರೆಸ್ ಬೆಂಬಲಿತ ಪಕ್ಷೇತರರು ಸೇರಿದಂತೆ 18 ಮಂದಿ ಫಲಿತಾಂಶ ಘೋಷಣೆಗೂ ಮುನ್ನವೇ ಹೊರ ನಡೆದಿದ್ದರು. ತದನಂತರ, ಬಿಜೆಪಿಯ ಉಷಾ ದಾಸರ ಅಧ್ಯಕ್ಷೆ, ಸುನಂದಾ ಬಾಕಳೆ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ ಎಂದುಚುನಾವಣಾಧಿಕಾರಿ ಘೋಷಿಸಿದ್ದರು.
ಬಳಿಕ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಪಾರದರ್ಶಕವಾಗಿ ನಡೆದಿಲ್ಲ. ಮರುಚುನಾವಣೆ ನಡೆಸಬೇಕು ಎಂದು ಆರೋಪ ಮಾಡಿ ಕಾಂಗ್ರೆಸ್‌ನ ಲಕ್ಷ್ಮಣ ಚಂದಾವರಿ ಸೇರಿದಂತೆ ಏಳು ಮಂದಿ ಹೈಕೋರ್ಟ್ ಮೆಟ್ಟಿಲೇರಿದ್ದರು.
‘ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆಯ ಗೆಜೆಟ್ ನೋಟಿಫಿಕೇಶನ್ ಹೊರಡಿಸಬಾರದು ಎಂದು ಧಾರವಾಡ ಹೈಕೋರ್ಟ್ ಪೀಠ ಮಂಗಳವಾರ ಆದೇಶಿಸಿರುವುದು ನಮಗೆ ನ್ಯಾಯ ಸಿಗುವ ಭರವಸೆ ಮೂಡಿಸಿದೆ. ಆಯ್ಕೆ ಪ್ರಕ್ರಿಯೆ ವೇಳೆ ಪ್ರಮಾದಗಳಾಗಿರುವ ಕಾಗದಪತ್ರಗಳನ್ನು ಸಲ್ಲಿಕೆ ಮಾಡುವಂತೆಯೂ ಕೋರ್ಟ್ ಸೂಚಿಸಿದೆ’ ಎಂದು ಶಾಸಕ ಎಚ್.ಕೆ.ಪಾಟೀಲ ಪ್ರತಿಕ್ರಿಯಿಸಿದ್ದಾರೆ.
‘ನ್ಯಾಯಾಲಯದ ಆದೇಶಪತ್ರ ಇನ್ನೂ ಸಿಗದ ಕಾರಣ ಈ ವಿಚಾರವಾಗಿ ಈಗಲೇ ಏನನ್ನೂ ಪ್ರತಿಕ್ರಿಯಿಸಲಾರೆ. ಆದರೆ, ಗದಗ ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯನ್ನು ನಿಯಮಾನುಸಾರವೇ ನಡೆಸಲಾಗಿದೆ. ಯಾವುದೇ ತಪ್ಪು, ಗೊಂದಲಗಳು ನಡೆದಿಲ್ಲ. ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಕೈ ಎತ್ತುವ ಮೂಲಕ ನಡೆಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ 360 ಡಿಗ್ರಿ ಆ್ಯಂಗಲ್‌ನಲ್ಲಿ ಚಿತ್ರೀಕರಿಸಿರುವ ವಿಡಿಯೊಗಳು ನಮ್ಮ ಬಳಿ ಇವೆ. ಸಹಿ ಎಣಿಕೆ ಮಾಡಬೇಕು ಎಂಬ ನಿಯಮ ಎಲ್ಲೂ ಇಲ್ಲ. ನ್ಯಾಯಾಲಯ ಕೇಳಿದರೆ ಎಲ್ಲ ದಾಖಲೆಗಳನ್ನು ಒದಗಿಸುತ್ತೇವೆ’ ಎಂದು ಉಪ ವಿಭಾಗಾಧಿಕಾರಿ ರಾಯಪ್ಪ ಹುಣಸಗಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.
*
ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶ ನಮಗೆ ನ್ಯಾಯ ಸಿಗುವ ಭರವಸೆ ಮೂಡಿಸಿದೆ. ಜತೆಗೆ, ಕಾಗದ ಪತ್ರಗಳನ್ನೂ ಸಲ್ಲಿಸುವಂತೆ ಸೂಚಿಸಿದೆ.
-ಎಚ್.ಕೆ. ಪಾಟೀಲ, ಶಾಸಕ
*
ಗದಗ ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ವೇಳೆ ಯಾವುದೇ ಗೊಂದಲಗಳು ನಡೆದಿಲ್ಲ. ನಿಯಮಾನುಸಾರ ಚುನಾವಣೆ ನಡೆದಿದ್ದು, ಸಂಬಂಧಿಸಿದ ಎಲ್ಲ ದಾಖಲೆಗಳು ನಮ್ಮ ಬಳಿ ಇವೆ.
-ರಾಯಪ್ಪ ಹುಣಸಗಿ, ಉಪವಿಭಾಗಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.