ಗದಗ: ನಗರದ ಹಲವು ಬಡಾವಣೆಗಳಲ್ಲಿ ಚರಂಡಿ, ರಸ್ತೆ, ನೀರಿನ ಕಾಮಗಾರಿ ನಡೆಯುತ್ತಿದ್ದು, ಇದರ ಬೆನ್ನಲ್ಲೆ ವಿಪರೀತ ದೂಳಿನಿಂದಾಗಿ ವಾಹನ ಸವಾರರು ಹಾಗೂ ಪಾದಚಾರಿಗಳು ಪ್ರತಿನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.
ಮಾಲಿನ್ಯ ನಿಯಂತ್ರಣ ಮಂಡಳಿ, ನಗರದ ಜೆ.ಟಿ. ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ‘ಗಾಳಿ ಗುಣಮಟ್ಟ ನಿರಂತರ ನಿಗಾ ಘಟಕ’ ಸ್ಥಾಪಿಸಿದೆ. ಆವರಣದಲ್ಲಿ ಅಳವಡಿಸಿರುವ ವಾಯು ಮಾಲಿನ್ಯ ನಿಗಾ ಯಂತ್ರದ ಮಾಹಿತಿ ಫಲಕದಲ್ಲಿ ನಗರದಲ್ಲಿ ಬೀಸುವ ಗಾಳಿಯಲ್ಲಿರುವ ಮಾಲಿನ್ಯದ ಪ್ರಮಾಣ ನಿಖರವಾಗಿ ತಿಳಿಯುತ್ತದೆ. ಸದ್ಯ ನಗರದ ವಾಯು ಅಪಾಯಕಾರಿ ಮಟ್ಟ ತಲುಪಿದ್ದು, ಜನರಲ್ಲಿ ಆತಂಕ ಮೂಡಿದೆ.
ನಗರದ ರಸ್ತೆಯಲ್ಲಿ ಸಾಗಿದರೆ ದೂಳಿನ ಮಜ್ಜನವಾಗುತ್ತಿದ್ದು, ವಾಹನ ಸವಾರರು ಕಣ್ಣಿಗೆ ಕನ್ನಡಕ, ಹೆಲ್ಮೆಟ್ ಹಾಕಿಕೊಂಡು ಓಡಾಡಬೇಕಾದ ಪರಿಸ್ಥಿತಿ ಇದೆ. ಹಳೆಯ ಮತ್ತು ಹೊಸ ಬಸ್ ನಿಲ್ದಾಣ, ಜನತಾ ಬಜಾರ್, ಹುಯಿಲಗೋಳ ನಾರಾಯಣರಾವ್ ವೃತ್ತ, ರೋಟರಿ ವೃತ್ತ, ಗಾಂಧಿ ವೃತ್ತ, ಭೂಮರಡ್ಡಿ ವೃತ್ತ, ಹಳೆ ಡಿ.ಸಿ. ಕಚೇರಿ, ಮುಳಗುಂದ ನಾಕಾ ಸೇರಿ ನಗರದಲ್ಲಿ ಎಲ್ಲೇ ಸುತ್ತಾಡಿದರೂ ಮುಖಕ್ಕೆ ದೂಳು ಅಡರುತ್ತದೆ. ಆಟೊ ಸವಾರರು, ಸೈಕಲ್ ಮೇಲೆ ಶಾಲೆಗಳಿಗೆ ಹೋಗುವ ಪುಟ್ಟ ಮಕ್ಕಳು, ರಸ್ತೆಯ ಬದಿಯ ವ್ಯಾಪಾರಿಗಳಿಗೂ ದೂಳು ಸಾಕಾಗಿದೆ.
ದೂಳಿನಿಂದಾಗಿ ಆರೋಗ್ಯದಲ್ಲೂ ಏರುಪೇರು ಆಗುತ್ತಿದ್ದು, ಆಸ್ಪತ್ರೆಗೆ ದಾಖಲಾಗುವ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ದೂಳಿನಿಂದಾಗಿ ಬಹುತೇಕರು ಕಣ್ಣು, ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಗೆ ತುತ್ತಾಗಿದ್ದಾರೆ. ಮೂಗಿನಿಂದ ನೀರು ಸೋರುವುದು, ಮುಖದಲ್ಲಿ ಗುಳ್ಳೆ ಏಳುವುದು ಕಂಡುಬರುತ್ತಿದೆ.
ರಾಜ್ಯದಲ್ಲೇ ವೇಗದಲ್ಲಿ ಗಾಳಿ ಬೀಸುವ ಜಿಲ್ಲೆ ಗದಗ. ಗಾಳಿ ವೇಗ ಹೆಚ್ಚಿರುವುದರಿಂದ ವಾತಾವರಣದಲ್ಲಿ ದೂಳಿನ ಕಣಗಳು ಹೆಚ್ಚಿರುತ್ತದೆ. ಕಣ್ಣು ತೆರೆದರೆ ಮರಳು ಮಿಶ್ರಿತ ಮಣ್ಣು ಕಣ್ಣಿಗೆ ನುಗ್ಗುತ್ತದೆ. ಹೀಗಾಗಿ, ವಾಹನ ಸವಾರರು ಕಣ್ಣಿಗೆ ಕನ್ನಡಕ ಹಾಕಿಕೊಂಡು, ಮೂಗು–ಬಾಯಿಗೆ ಕರವಸ್ತ್ರ ಕಟ್ಟಿಕೊಂಡು ಸಾಗಬೇಕಾದ ಅನಿವಾರ್ಯತೆಯಿದೆ.
‘ನಗರದಲ್ಲಿ ದೂಳು ವಿಪರೀತವಾಗಿರುವುದರಿಂದ ಜನರಿಗೆ ಕೆಮ್ಮು, ನೆಗಡಿ, ಅಸ್ತಮಾ, ಶ್ವಾಸಕೋಶ ಮತ್ತು ಚರ್ಮ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಜತೆಗೆ ಕಣ್ಣು ಕೆಂಪಾಗುವುದು, ಉರಿಯವುದು ಹಾಗೂ ಕಣ್ಣಿನಿಂದ ಹೆಚ್ಚು ನೀರು ಸೋರುವುದು ಸೇರಿ ವಿವಿಧ ಆರೋಗ್ಯದ ಸಮಸ್ಯೆಗಳು ಎದುರಾಗಬಹುದು’ ಎಂದು ಡಾ.ಕೆ.ಲೋಕೇಶ ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.