ADVERTISEMENT

ಗದಗ | ಲಾಭದ ನಿರೀಕ್ಷೆಯಲ್ಲಿ ಈರುಳ್ಳಿ ಬೆಳೆಗಾರ

ಲಕ್ಷ್ಮಣ ಎಚ್.ದೊಡ್ಡಮನಿ
Published 10 ಸೆಪ್ಟೆಂಬರ್ 2024, 5:11 IST
Last Updated 10 ಸೆಪ್ಟೆಂಬರ್ 2024, 5:11 IST
ಡಂಬಳ ಗ್ರಾಮದ ರೈತ ಬಸವರಾಜ ಯಳಮಲಿ ಅವರ ಜಮೀನಿನಲ್ಲಿ ಕೊಯ್ಲು ಮಾಡಿದ ಈರುಳ್ಳಿಯನ್ನು  ಸ್ವಚ್ಛಗೊಳಿಸುತ್ತಿರುವ ಕೂಲಿ ಕಾರ್ಮಿಕರು
ಡಂಬಳ ಗ್ರಾಮದ ರೈತ ಬಸವರಾಜ ಯಳಮಲಿ ಅವರ ಜಮೀನಿನಲ್ಲಿ ಕೊಯ್ಲು ಮಾಡಿದ ಈರುಳ್ಳಿಯನ್ನು  ಸ್ವಚ್ಛಗೊಳಿಸುತ್ತಿರುವ ಕೂಲಿ ಕಾರ್ಮಿಕರು   

ಡಂಬಳ:ಈ ಬಾರಿ ಈರುಳ್ಳಿ ಬೆಳೆ ಉತ್ತಮವಾಗಿದ್ದು, ರೈತರು ಉತ್ತಮ ದರದ ನಿರೀಕ್ಷೆ ಮಾಡುತ್ತಿದ್ದಾರೆ.

ಕಡುಗೆಂಪು, ದುಂಡನೆಯ, ರುಚಿಕರ ಹಾಗೂ ಉತ್ಕೃಷ್ಟ ತಿಳಿಗೆಂಪಿನ ಈರುಳ್ಳಿ ಬೆಳೆಯಲು ಡಂಬಳ ಮತ್ತು ಡೋಣಿ ಗ್ರಾಮ ಈರುಳ್ಳಿ ಬೆಳೆಗೆ ಪ್ರಸಿದ್ಧಿ ಪಡೆದಿವೆ. ಹಲವು ವರ್ಷಗಳಿಂದ ಬೆಲೆ ಕುಸಿತದಿಂದ ಕಂಗಾಲಾಗಿದ್ದ ರೈತರಿಗೆ ಈ ಬಾರಿ ಈರುಳ್ಳಿ ಹರ್ಷ ತರುವ ನಿರೀಕ್ಷೆ ಮೂಡಿಸಿದೆ.

‘ನಮ್ಮ ಜಮೀನಿನಲ್ಲಿ ಎರಡು ಎಕರೆ ಈರುಳ್ಳಿ ಕಟಾವು ಮಾಡಿ ಒಣಗಿಸುತ್ತಿದ್ದೇವೆ. ಈರುಳ್ಳಿ ಬೀಜ ಬಿತ್ತನೆ ಮಾಡಿದ್ದರಿಂದ ಹಿಡಿದು ಕೂಲಿ ಕಾರ್ಮಿಕರಿಗೆ ಕಸ ತಗೆಯಲು₹ 300, ಗೊಬ್ಬರ ಹಾಕಲು ₹ 300,  ನೀರು ಹಾಯಿಸಲು ₹ 300, ಬೀಜ, ಗೊಬ್ಬರ, ಗಳೆವು ರಂಟಿ–ಕುಂಟಿ, ಈರುಳ್ಳಿ ಕೊಯ್ಲು ಮಾಡಿ ಮಾರುಕಟ್ಟೆಗೆ ಕಳಿಸುವುದು ಸೇರಿದಂತೆ ಪ್ರತಿ ಎಕರೆಗೆ ಕನಿಷ್ಠ ₹ 60 ಸಾವಿರ ಖರ್ಚು ಬರುತ್ತದೆ. ಪ್ರಸ್ತುತ ದಿನಗಳಲ್ಲಿ ಕನಿಷ್ಠ ಪ್ರತಿ ಕ್ವಿಂಟಲ್ ಈರುಳ್ಳಿಗೆ ₹ 6 ರಿಂದ ₹ 7 ಸಾವಿರದವರೆಗೆ ಮಾರಾಟವಾದರೆ ಮಾತ್ರ ರೈತರಿಗೆ ಲಾಭವಾಗುತ್ತದೆ’ ಎಂದು ಡಂಬಳ ಗ್ರಾಮದ ಈರುಳ್ಳಿ ಬೆಳೆದ ರೈತ ಬಸವರಾಜ ಯಳಮಲಿ ಮತ್ತು ಶಿವಪ್ಪ ಕರಿಗಾರ ಅಭಿಪ್ರಾಯಪಟ್ಟರು.

ADVERTISEMENT

ಈ ಮೊದಲು ಮಾರುಕಟ್ಟೆಯಲ್ಲಿ ಕೆ.ಜಿ ಈರುಳ್ಳಿ ₹ 20ರಿಂದ ₹ 30ಕ್ಕೆ ಸಿಗುತ್ತಿತ್ತು. ಆದರೆ ಹವಾಮಾನ ವೈಪರಿತ್ಯ ಹಾಗೂ ಮಳೆ ಹೆಚ್ಚಾದ ಪರಿಣಾಮವಾಗಿ ಕೆ.ಜಿ ಈರುಳ್ಳಿಗೆ ₹ 60 ರಿಂದ ₹ 70ರವರೆಗೆ  ದರವಿದೆ. ಹೋಟೆಲ್, ರೆಸ್ಟೋರೆಂಟ್, ದಾಬಾ ಮಾಲೀಕರು ಈರುಳ್ಳಿ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಮನೆಗಳಿಗೆ ಈರುಳ್ಳಿ ಖರೀದಿಯೂ ಕಡಿಮೆಯಾಗುತ್ತಿದೆ.

ಮಹಾರಾಷ್ಟ್ರ ಮತ್ತು ರಾಜ್ಯದ ಬೆಳಗಾವಿ ಬಾಗಲಕೋಟೆ, ಚಿತ್ರದುರ್ಗ, ದಾವಣಗೆರೆ ಮುಂತಾದ ಜಿಲ್ಲೆಗಳಲ್ಲಿ ನೆರೆ ಹಾವಳಿಯಿಂದ ಸಾಕಷ್ಟು ಬೆಳೆ ನಾಶವಾಗಿದ್ದರಿಂದ ಈರುಳ್ಳಿಗೆ ಭಾರಿ ಬೇಡಿಕೆ ಬಂದಿದೆ. ತಮಿಳುನಾಡು, ಗೋವಾ, ಮಹಾರಾಷ್ಟ್ರ, ರಾಜ್ಯದ ಬೆಂಗಳೂರ, ಡಾವಣಗೆರೆ, ಹುಬ್ಬಳ್ಳಿ, ಚಳ್ಳಿಕೇರಿ. ಮಾರುಕಟ್ಟೆಗೆ ಈ ಭಾಗದ ಈರುಳ್ಳಿ ಹೋಗುತ್ತದೆ.

‘ತೀವ್ರ ಬೆಲೆ ಏರಿಕೆಯ ನಿರೀಕ್ಷೆಯಲ್ಲಿರುವ ಕೇಂದ್ರ ಸರ್ಕಾರ ಗ್ರಾಹಕರಿಗೆ ಕೈಗೆಟುಕುವಂತೆ ರಾಷ್ಟ್ರೀಯ ಸಹಕಾರ ಗ್ರಾಹಕರ ಒಕ್ಕೂಟ ಮತ್ತು ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟದ ಮಳಿಗೆಗಳು ಹಾಗೂ ಸಂಚಾರಿ ವಾಹನಗಳ ಮೂಲಕ ಚಿಲ್ಲರೆ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಪ್ರತಿ ಕೆ.ಜಿ ಈರುಳ್ಳಿಗೆ ₹ 35ರಂತೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ಮುಂದಾಗಿರುವ ಕ್ರಮ ರೈತ ವಿರೋಧಿಯಾಗಿದೆ. ಕೇಂದ್ರ ಸರ್ಕಾರ ಗ್ರಾಹಕರು ಸೇರಿದಂತೆ ರೈತರ ಹಿತ ಕಾಪಾಡಬೇಕು. ಪ್ರತಿ ಕ್ವಿಂಟಲ್ ಈರುಳ್ಳಿಗೆ ಕನಿಷ್ಠ ₹ 7 ರಿಂದ ₹ 8 ಸಾವಿರ ಬೆಂಬಲ ಬೆಲೆ ಘೋಷಣೆ ಮಾಡಿ ಈರುಳ್ಳಿ ಖರೀದಿ ಮಾಡಬೇಕು’ ಎಂದು ರೈತ ಮುಖಂಡ ಗೋಣಿಬಸಪ್ಪ ಎಸ್. ಕೊರ್ಲಹಳ್ಳಿ ಒತ್ತಾಯಿಸಿದ್ದಾರೆ.

ಈಚೆಗೆ ಬ್ರಾಂಡೆಡ್ ಬೀಜಗಳಿಗೆ ಮೊರೆ ಹೋಗಿರುವ ರೈತರು ಪಂಚಗಂಗಾ, ಅರ್ಕಾ ಪ್ರಗತಿ, ಪ್ರೇಮ್, ಇಂಡೋ ಅಮೆರಿಕನ್ ಕಳಸ, ಸಿಡ್ಸ್ ಭೀಮಾ ಶಕ್ತಿ, ಅರ್ಕಾ ಕಲ್ಯಾಣ, ಪೂಸಾ ರೆಡ್, ಬಳ್ಳಾರಿ ರೆಡ್, ನಾಸಿಕ್ ರೆಡ್ ಸೇರಿದಂತೆ ಗುಣಮಟ್ಟದ ದುಬಾರಿ ಬೀಜ ಬಿತ್ತನೆ ಮಾಡಿದ್ದಾರೆ.


ಡಂಬಳ ಗ್ರಾಮದ ರೈತ ಬಸವರಾಜ ಯಳಮಲಿ ಅವರ ಜಮೀನಿನಲ್ಲಿ ಕೊಯ್ಲು ಮಾಡಿದ ಈರುಳ್ಳಿಯನ್ನು  ಸ್ವಚ್ಛಗೊಳಿಸುತ್ತಿರುವ ಕೂಲಿ ಕಾರ್ಮಿಕರು
ಡಂಬಳ ಗ್ರಾಮದಲ್ಲಿ ಕೊಯ್ಲು ಮಾಡಿದ ಈರುಳ್ಳಿ

3480 ಹೆಕ್ಟೇರ್‌ನಲ್ಲಿ ಈರುಳ್ಳಿ ಈ ವರ್ಷ ಜುಲೈನಿಂದ ಆಗಸ್ಟ್‌ ತಿಂಗಳವರೆಗೆ 2024-25ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಮುಂಡರಗಿ ತಾಲ್ಲೂಕಿನಲ್ಲಿ ನೀರಾವರಿ ಮತ್ತು ಮಳೆ ಆಶ್ರಿತ ಜಮೀನಿನಲ್ಲಿ ಒಟ್ಟು 3480 ಹೆಕ್ಟೇರ್‌ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಯಾಗಿದೆ. ಅತಿ ಹೆಚ್ಚು ಮಳೆಯಾದ ಪರಿಣಾಮವಾಗಿ ಕೆಲ ಜಿಲ್ಲೆಗಳಲ್ಲಿ ಬೆಳೆಹಾನಿಯಾಗಿದೆ. ಹೀಗಾಗಿ ರೈತರಿಗೆ ಈ ವರ್ಷ ಮಾರುಕಟ್ಟೆಯಲ್ಲೇ ಉತ್ತಮ ಬೆಲೆ ಬರುವ ನಿರೀಕ್ಷೆ ಇದೆ ಎನ್ನುತ್ತಾರೆ ಮುಂಡರಗಿ ತಾಲ್ಲೂಕ ಸಹಾಯಕ ತೋಟಗಾರಿಕ ಉಪನಿದೇರ್ಶಕ ಮಹಮ್ಮದ ರಫೀ ತಾಂಬೋಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.