ADVERTISEMENT

ರೈತರ ನೆರವಿಗೆ ಕೃಷಿ ಇಲಾಖೆ ಸದಾ ಸಿದ್ಧ: ತಾರಾಮಣಿ

ಹುಲಕೋಟಿಯ ಕೆವಿಕೆಯಲ್ಲಿ ದ್ವೈಮಾಸಿಕ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 12:34 IST
Last Updated 11 ಜುಲೈ 2024, 12:34 IST
ಗದಗ ತಾಲ್ಲೂಕಿನ ಹುಲಕೋಟಿಯ ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ದ್ವೈಮಾಸಿಕ ಕಾರ್ಯಾಗಾರವನ್ನು ಜಂಟಿ ಕೃಷಿ ನಿರ್ದೇಶಕಿ ಜಿ.ಎಚ್‌.ತಾರಾಮಣಿ ಉದ್ಘಾಟಿಸಿದರು
ಗದಗ ತಾಲ್ಲೂಕಿನ ಹುಲಕೋಟಿಯ ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ದ್ವೈಮಾಸಿಕ ಕಾರ್ಯಾಗಾರವನ್ನು ಜಂಟಿ ಕೃಷಿ ನಿರ್ದೇಶಕಿ ಜಿ.ಎಚ್‌.ತಾರಾಮಣಿ ಉದ್ಘಾಟಿಸಿದರು   

ಗದಗ: ‘ರೈತರ ನೆರವಿಗೆ ಕೃಷಿ ಇಲಾಖೆ ಸದಾ ಸನ್ನದ್ಧವಾಗಿರಲಿದೆ’ ಎಂದು ಜಂಟಿ ಕೃಷಿ ನಿರ್ದೇಶಕಿ ಜಿ.ಎಚ್‌.ತಾರಾಮಣಿ ಹೇಳಿದರು.

ತಾಲ್ಲೂಕಿನ ಹುಲಕೋಟಿಯ ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಇಲಾಖೆ, ಕೃಷಿ ವಿಶ್ವವಿದ್ಯಾಲಯ, ಧಾರವಾಡ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ನಡೆದ ದ್ವೈಮಾಸಿಕ ಕಾರ್ಯಾಗಾರದಲ್ಲಿ ಮಾತನಾಡಿದರು.

‘ಕಾರ್ಯಾಗಾರದಲ್ಲಿ ಜಿಲ್ಲೆಯ ಮಳೆಬೆಳೆ ಪರಿಸ್ಥಿತಿ, ಬೆಳೆಗಳಿಗೆ ತಗಲುವ ಕೀಟ, ರೋಗಬಾಧೆ ಇತ್ಯಾದಿಗಳ ಕುರಿತು ರೈತರಿಗೆ ಮಾಹಿತಿ ನೀಡಲಾಗುವುದು. ಕೃಷಿ ಇಲಾಖೆಯಿಂದ ವಿವಿಧ ಯೋಜನೆಗಳನ್ನು ಅನುಷ್ಟಾನಗೊಳಿಸುವುದು, ಸಕಾಲದಲ್ಲಿ ರೈತರಿಗೆ ಪರಿಕರಗಳನ್ನು ಪೂರೈಸುವುದು ಸೇರಿದಂತೆ ಎಲ್ಲ ಬಗೆಯ ಸೌಲಭ್ಯಗಳನ್ನು ರೈತರಿಗೆ ಒದಗಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

ಕೃಷಿ ವಿಜ್ಞಾನಿ ಡಾ. ಮೊಟಗಿ ಅವರು, ಹೆಸರು, ತೊಗರಿ, ಸೂರ್ಯಕಾಂತಿ, ಬೆಳೆಗಳ ಸುಧಾರಿತ, ರೋಗ/ಕೀಟನಿರೋಧಕ ಶಕ್ತಿಯನ್ನು ಹೊಂದಿದ ಹಾಗೂ ನವೀನ ತಳಿಗಳ ಕುರಿತು ಮಾಹಿತಿ ನೀಡಿದರು.

ಒಣ ಪ್ರದೇಶದಲ್ಲಿ ಕೈಗೊಳ್ಳಬೇಕಾದ ಕೃಷಿ ತಾಂತ್ರಿಕತೆಗಳ ಕುರಿತು ಡಾ. ಎಂ.ಪಿ.ಪೋತ್ದಾರ ಹಾಗೂ ಈ ಭಾಗದಲ್ಲಿ ಬೆಳೆದಿರುವ ಬೆಳೆಗೆ ಬರುವ ರೋಗಗಳ ನಿರ್ವಹಣಾ ಕ್ರಮಗಳ ಕುರಿತು ಡಾ. ಶಿವಲಿಂಗಪ್ಪ ಚರ್ಚಿಸಿದರು.

ಜಿಲ್ಲೆಯ ಬೆಳೆಗಳಲ್ಲಿ ಕಂಡುಬರುವ ಕೀಟಗಳ ನಿರ್ವಹಣೆ ಕುರಿತು ಡಾ. ಸಿ.ಎಂ.ರಫಿ ತಿಳಿಸಿದರು. ವಿವಿಧ ಬೆಳೆಗಳಲ್ಲಿ ಕ್ಷೇತ್ರ ಪ್ರಯೋಗಗಳನ್ನು ಕೈಗೊಂಡಿರುವ ಕುರಿತು ಚರ್ಚಿಸಲಾಯಿತು.

ಕೃಷಿ ವಿಜ್ಞಾನಿಗಳಾದ ಡಾ. ಎಸ್.ಎಲ್.ಪಾಟೀಲ, ಡಾ. ಹೇಮಾವತಿ ಹಿರೇಗೌಡರ, ಡಾ. ಎನ್.ಎಚ್.ಬಂಡಿ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಸುಧಾ ಮಂಕಣಿ ಹಾಗೂ ಜಿಲ್ಲೆಯ ಉಪ ಕೃಷಿ ನಿರ್ದೇಶಕರು, ಜಂಟಿ ಕೃಷಿ ನಿರ್ದೇಶಕರ ಕಚೇರಿಯ ತಾಂತ್ರಿಕ ಅಧಿಕಾರಿಗಳು ಮತ್ತು ಎಲ್ಲ ತಾಲ್ಲೂಕುಗಳ ಸಹಾಯಕ ಕೃಷಿ ನಿರ್ದೇಶಕರು, ರೈತ ಸಂಪರ್ಕ ಕೇಂದ್ರಗಳ ಕೃಷಿ ಅಧಿಕಾರಿಗಳು, ಸಹಾಯಕ ಕೃಷಿ ಅಧಿಕಾರಿಗಳು, ಆತ್ಮಾ ಸಿಬ್ಬಂದಿ ಹಾಗೂ ಕೃಷಿ ಸಂಜೀವಿನಿಯ ತಾಂತ್ರಿಕ ಸಹಾಯಕರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.