ಗದಗ: ‘ಹುಬ್ಬಳ್ಳಿಯ ಉದ್ಯೋಗ ಮಾಹಿತಿ ಹಾಗೂ ತರಬೇತಿ ಕೇಂದ್ರ, ಎಸ್.ಆರ್.ಬೊಮ್ಮಾಯಿ ಟ್ರಸ್ಟ್, ಜೆಟಿ ಮಹಾವಿದ್ಯಾಲಯ, ಎಸ್.ವಿ.ಸಂಕನೂರ ಅಭಿಮಾನಿ ಬಳಗ ಹಾಗೂ ಇನ್‌ಸ್ಪೈರ್ ಟೆಕ್ನಾಲಜೀಸ್ ಸಂಯುಕ್ತಾಶ್ರಯದಲ್ಲಿ ಸೆಪ್ಟೆಂಬರ್ 30ರಂದು ಬೆಳಿಗ್ಗೆ 10ಕ್ಕೆ ನಗರದ ಜೆಟಿ ಕಾಲೇಜಿನಲ್ಲಿ ಗದಗ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಆಯೋಜಿಸಲಾಗಿದೆ’ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ತಿಳಿಸಿದರು.
‘ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ ಆಯ್ಕೆಯಾಗಿರುವ ನಾನು ನಿರುದ್ಯೋಗ ಸಮಸ್ಯೆಗೆ ಸ್ವಲ್ಪ ಮಟ್ಟಿಗಾದರೂ ಪರಿಹಾರ ಕಂಡುಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಮುಂದಡಿ ಇಟ್ಟಿರುವೆ. ಇನ್ನು, ಪದವೀಧರರು ಸರ್ಕಾರಿ ಉದ್ಯೋಗಗಳ ಬಗ್ಗೆ ಮಾತ್ರ ಗಮನ ಹರಿಸುತ್ತಾರೆ. ಆದರೆ, ಖಾಸಗಿ ಕ್ಷೇತ್ರದಲ್ಲೂ ವಿಪುಲ ಉದ್ಯೋಗ ಅವಕಾಶಗಳು ಇರುತ್ತವೆ. ಅವುಗಳ ಬಗ್ಗೆ ಮಾಹಿತಿ ಕೊಡುವುದು ಹಾಗೂ ಸ್ವಯಂ ಉದ್ಯೋಗ ಸ್ಥಾಪನೆಗೆ ಪ್ರೇರಣೆ ನೀಡುವ ಉದ್ದೇಶದಿಂದ ಉದ್ಯೋಗ ಮೇಳ ಆಯೋಜಿಸಲಾಗಿದೆ’ ಎಂದು ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಉದ್ಯೋಗ ಮೇಳದಲ್ಲಿ ರಾಜ್ಯದ ವಿವಿಧೆಡೆಯಿಂದ 50ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿವೆ. ಬಾಷ್, ಟೊಯೊಟಾ, ಆಕ್ಸೆಂಚರ್, ಮುತ್ತೂಟ್ ಫೈನಾನ್ಸ್, ಆಕ್ಸಿಸ್, ಇಂಕ್ ಇಂಪ್ಯಾಕ್ಟ್, ಫೋರ್ಟಿಯಾ ಮೆಡಿಕೊ, ಮೆಡ್‌ಪ್ಲಸ್, ಐಸಿಐಸಿಐ ಸೇರಿದಂತೆ ವಿವಿಧ ಕಂಪನಿಗಳಿಂದ ಒಟ್ಟು 2500 ಉದ್ಯೋಗವಕಾಶ ಲಭ್ಯವಿದ್ದು, ಅಭ್ಯರ್ಥಿಗಳನ್ನು ಸಂದರ್ಶನ ನಡೆಸಿ, ಆಯ್ಕೆ ಮಾಡಿಕೊಳ್ಳಲಿದ್ದಾರೆ’ ಎಂದು ತಿಳಿಸಿದರು.
ಗದಗ ಸೇರಿದಂತೆ ಬೆಳಗಾವಿ, ಧಾರವಾಡ, ಕೊಪ್ಪಳ, ಹಾವೇರಿ ಜಿಲ್ಲೆಯ ಒಟ್ಟು 630 ಮಂದಿ ಅಭ್ಯರ್ಥಿಗಳು ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ. ಸೆ.30ರಂದು ಸ್ಥಳದಲ್ಲೇ ನೋಂದಣಿಗೂ ಅವಕಾಶ ಕಲ್ಪಿಸಲಾಗಿದೆ. ಸೆ.30ರ ಬೆಳಿಗ್ಗೆ 9ರಿಂದ ಮಧ್ಯಾಹ್ನ 2 ಗಂಟೆವರೆಗೆ ನೋಂದಣಿಗೆ ಅವಕಾಶ ಇರಲಿದೆ’ ಎಂದು ತಿಳಿಸಿದರು.
‘ಉದ್ಯೋಗ ಮೇಳದಲ್ಲಿ ನೋಂದಣಿಗಾಗಿ ಒಟ್ಟು 8 ಕೌಂಟರ್‌ಗಳನ್ನು ತೆರೆಯಲಾಗುವುದು. ಎರಡು ಕೌಂಟರ್‌ಗಳು ಪದವೀಧರರು ಹಾಗೂ ಸ್ನಾತಕೋತ್ತರ ಪದವೀಧರ ಅಭ್ಯರ್ಥಿಗಳಿಗಾಗಿ, ಮೂರು ಕೌಂಟರ್‌ಗಳು ಪಿಯುಸಿ, ಐಟಿಐ ಅಭ್ಯರ್ಥಿಗಳಿಗಾಗಿ, ಎರಡು ಕೌಂಟರ್‌ಗಳು ಡಿಪ್ಲೊಮಾ ಹಾಗೂ ಬಿಇ, ಬಿಟೆಕ್ ಅಭ್ಯರ್ಥಿಗಳಿಗಾಗಿ, ಒಂದು ಕೌಂಟರ್ ನರ್ಸಿಂಗ್ ಹಾಗೂ ಪ್ಯಾರಾ ಮೆಡಿಕಲ್ ಅಭ್ಯರ್ಥಿಗಳಿಗಾಗಿ ವ್ಯವಸ್ಥೆ ಮಾಡಲಾಗಿದೆ. ಸಂದರ್ಶನ ನಡೆಸಲು ಯಾವುದೇ ತೊಂದರೆ ಆಗದಂತೆ ಕಂಪನಿಗಳಿಗೆ ಕೊಠಡಿಗಳ ಸೌಲಭ್ಯವನ್ನು ಒದಗಿಸಲಾಗುವುದು’ ಎಂದು ತಿಳಿಸಿದರು.
‘ಉದ್ಯೋಗ ಅರಸಿ ಬರುವ ಅಭ್ಯರ್ಥಿಗಳಿಗೆ ಬೆಳಗಿನ ಉಪಾಹಾರ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಕೆಎಲ್‌ಇ ಸಂಸ್ಥೆಯವರು ಮಾಡಿದ್ದಾರೆ’ ಎಂದು ತಿಳಿಸಿದರು.
‘ಸ್ವಯಂ ಉದ್ಯೋಗ ಪ್ರಾರಂಭಿಸುವಲ್ಲಿ ಅವಶ್ಯ ಇರುವ ಮಾಹಿತಿ ಒದಗಿಸಲು ಸಿಡಾಕ್ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದಿಂದ ವಿಶೇಷ ಉಪನ್ಯಾಸ ಏರ್ಪಡಿಸಲಾಗಿದೆ. ಉದ್ಯೋಗ ಮೇಳವನ್ನು ಸಂಸದ ಬಸವರಾಜ ಬೊಮ್ಮಾಯಿ ಉದ್ಘಾಟಿಸುವರು. ಶಾಸಕರಾದ ಸಿ.ಸಿ.ಪಾಟೀಲ, ಡಾ.ಚಂದ್ರು ಲಮಾಣಿ, ಮಾಜಿ ಸಚಿವ ಕಳಕಪ್ಪ ಬಂಡಿ, ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಕುರಡಗಿ, ಕರ್ನಾಟಕ ರಾಜ್ಯ ವಾಣಿಜ್ಯ ಹಾಗೂ ಕೈಗಾರಿಕೆ ಸಂಸ್ಥೆಯ ಅಧ್ಯಕ್ಷ ಎಸ್.ಪಿ.ಸಂಶಿಮಠ, ಬಾಷ್ ಇಂಡಿಯಾ ಫೌಂಡೇಶನ್‍ನ ಪ್ಲೇಸ್‌ಮೆಂಟ್ ಅಧಿಕಾರಿ ಕಲೀಮ್ ಎಸ್., ಸ್ಟೇಟ್ ಲೀಡ್ ಸುಧೀರ್ ಪಿಡ್ಡಿ ಅತಿಥಿಗಳಾಗಿ ಭಾಗವಹಿಸುವರು. ಕೆಎಲ್ಇ ಸಂಸ್ಥೆಯ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ ಅಧ್ಯಕ್ಷತೆ ವಹಿಸುವರು’ ಎಂದು ತಿಳಿಸಿದರು.
ಇನ್‌ಸ್ಪೈರ್ ಟೆಕ್ನಾಲಜೀಸ್ ಸಂಸ್ಥಾಪಕ ಚಂದ್ರಶೇಖರ ಅಣ್ಣಿಗೇರಿ, ಜೆಟಿ ಕಾಲೇಜಿನ ಪ್ರಾಂಶುಪಾಲ ಪಿ.ಜಿ.ಪಾಟೀಲ ಇದ್ದರು.
ಚುನಾವಣೆ ಸಂದರ್ಭದಲ್ಲಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ಧಾರವಾಡ ಹಾವೇರಿ ಗದಗ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಉದ್ಯೋಗ ಮೇಳ ಆಯೋಜಿಸಲಾಗುತ್ತಿದೆಎಸ್.ವಿ.ಸಂಕನೂರ ವಿಧಾನ ಪರಿಷತ್ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.