ಲಕ್ಷ್ಮೇಶ್ವರ: ಹವಾಮಾನದ ವೈಪರೀತ್ಯದಿಂದಾಗಿ ಜನರಲ್ಲಿ ಜ್ವರ ಮತ್ತು ಮೈ ಕೈ ನೋವಿನಂಥ ಸಮಸ್ಯೆಗಳು ಕಂಡು ಬರುತ್ತಿದ್ದು ಚಿಕಿತ್ಸೆಗಾಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ಪಡೆಯುವುದಕ್ಕೆ ರೋಗಿಗಳು ಮುಗಿ ಬೀಳುತ್ತಿದ್ದಾರೆ.
ಮೂರು ವಾರಗಳಿಂದ ವಾತಾವರಣದಲ್ಲಿ ತಂಪಿನಾಂಶ ಹೆಚ್ಚಾಗಿದ್ದು ತಾಲ್ಲೂಕಿನಾದ್ಯಂತ ಥಂಡಿಯ ಲಕ್ಷಣ ಗೋಚರಿಸುತ್ತಿದೆ.
ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಪ್ರತಿದಿನ 250-300 ಜನರು ರೋಗ ಚಿಕಿತ್ಸೆ ಮತ್ತು ಆರೋಗ್ಯ ತಪಾಸಣೆಗಾಗಿ ಬರುತ್ತಿದ್ದಾರೆ. ಹೆಚ್ಚಾಗಿ ಮಕ್ಕಳು ಮತ್ತು ವಯಸ್ಸಾದವರಲ್ಲಿ ಜ್ವರ ಕಾಣಿಸಿಕೊಂಡಿದ್ದು ಆಸ್ಪತ್ರೆಯಲ್ಲಿನ ಎಲ್ಲ ಬೆಡ್‍ಗಳು ರೋಗಿಗಳಿಂದ ತುಂಬಿಕೊಂಡಿವೆ. ಕೇವಲ 30 ಹಾಸಿಗೆಗಳ ಸೌಲಭ್ಯದ ಆಸ್ಪತ್ರೆಯಲ್ಲಿ ಸದ್ಯ ಹಾಸಿಗೆಗಳ ಕೊರತೆ ಆಗುವ ಮುನ್ಸೂಚನೆಗಳು ಇವೆ.
ದಿನಾಲೂ ನೂರಾರು ರೋಗಿಗಳು ಆಸ್ಪತ್ರೆಗೆ ಬರುವುದರಿಂದ ಎಲ್ಲ ವಿಭಾಗಗಳಲ್ಲಿ ಜನಜಂಗುಳಿ ಉಂಟಾಗುತ್ತಿದೆ. ವೈದ್ಯರ ಪರೀಕ್ಷಾ ಕೊಠಡಿ, ಚುಚ್ಚುಮದ್ದಿನ ಕೊಠಡಿ, ಬಿಪಿ, ಶುಗರ್ ಚೆಕಪ್ ಕೊಠಡಿ ಮತ್ತು ಔಷಧ ವಿತರಣಾ ಕೊಠಡಿಗಳ ಎದುರು ಜನರು ಸಾಲುಗಟ್ಟಿ ನಿಂತಿರುವುದು ಪ್ರತಿದಿನ ಕಂಡು ಬರುವ ದೃಶ್ಯಗಳಾಗಿವೆ.
ಕಳೆದ ಒಂದು ವಾರದಿಂದ ಡೆಂಗಿ ಜ್ವರದ ಹಾವಳಿ ಬೇರೆ ಹೆಚ್ಚಾಗಿದೆ. ಹೀಗಾಗಿ ಸ್ವಲ್ಪ ಜ್ವರ ಬಂದರೆ ಸಾಕು ಜನರು ಭಯ ಬಿದ್ದು ಆಸ್ಪತ್ರೆಗೆ ಧಾವಿಸುತ್ತಿದ್ದಾರೆ. ಅಲ್ಲದೆ ಡೆಂಗಿ ಕುರಿತು ಮಾಧ್ಯಮಗಳಲ್ಲಿ ಭಯಾನಕ ವರದಿಗಳು ಬರುತ್ತಿರುವುದು ಜನರು ಆಸ್ಪತ್ರೆಗೆ ಬರಲು ಪ್ರಮುಖ ಕಾರಣವೂ ಆಗಿದೆ.
‘ಡೆಂಗಿ ರೋಗದ ಲಕ್ಷಣಗಳು, ಅದು ಬರುವ ಕಾರಣಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ’ ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಶ್ರೀಕಾಂತ ಕಾಟೇವಾಲೆ ಹೇಳಿದರು.
‘ಲಕ್ಷ್ಮೇಶ್ವರದ ಆಸ್ಪತ್ರೆಯಲ್ಲಿ ಹಾಸಿಗೆಗಳ ಕೊರತೆ ಇದೆ. ಆದಷ್ಟು ಬೇಗನೆ ಮತ್ತಷ್ಟು ಎಲ್ಲ ರೋಗಿಗಳಿಗೂ ಹಾಸಿಗೆಗಳ ವ್ಯವಸ್ಥೆ ಮಾಡಬೇಕು’ ಎಂದು ಸೂರಣಗಿ ಗ್ರಾಮದ ಮಲ್ಲಪ್ಪ ಪಾಟೀಲ ಆಗ್ರಹಿಸಿದರು.
ಲಕ್ಷ್ಮೇಶ್ವರದ ಸರ್ಕಾರಿ ಆಸ್ಪತ್ರೆಗೆ ಪ್ರತಿದಿನ ನೂರಾರು ಜನರು ಚಿಕಿತ್ಸೆ ಮತ್ತು ಪರೀಕ್ಷೆಗಾಗಿ ಬರುತ್ತಾರೆ. ಬರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುತ್ತಿದ್ದೇವೆ
-ಡಾ.ಶ್ರೀಕಾಂತ ಕಾಟೇವಾಲೆ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.