ಗದಗ: ‘ಕ್ಷೌರ ಮಾಡಿಸಿಲ್ಲ’ ಎಂದು ಕೂದಲು ಕತ್ತರಿಸಲು ಮುಂದಾಗಿ, ವಿದ್ಯಾರ್ಥಿಯ ಹಣೆಗೆ ಗಾಯ ಮಾಡಿದ ಶಿಕ್ಷಕನಿಗೆ ಪೋಷಕರು ಹೊಡೆದ ಘಟನೆ ಬೆಟಗೇರಿ ಸೇಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದಿದೆ.
‘ಶಾಲೆಯ ಕಂಪ್ಯೂಟರ್ ಶಿಕ್ಷಕ ಬೆನೊಯ್ ಎಂಬುವರು ಶಾಲೆಯ ಆರು ಮಂದಿ ವಿದ್ಯಾರ್ಥಿಗಳಿಗೆ ಸೋಮವಾರ ಕ್ಷೌರ ಮಾಡಿದ್ದಾರೆ. ಆಗ ಏಳನೇ ತರಗತಿ ವಿದ್ಯಾರ್ಥಿ ಆದಿತ್ಯನ ಹಣೆಗೆ ಗಾಯವಾಗಿದೆ. ಇದರಿಂದ ಸಿಟ್ಟಿಗೆದ್ದು ಮಂಗಳವಾರ ಶಾಲೆಗೆ ಬಂದ ಪೋಷಕರು, ಬೆನೊಯ್ ವರ್ತನೆ ಖಂಡಿಸಿದರು. ನಂತರ ಹೊಡೆದರು’ ಎಂದು ಮೂಲಗಳು ತಿಳಿಸಿವೆ.
‘ವಿದ್ಯಾರ್ಥಿಗಳ ಕೂದಲು ಕತ್ತರಿಸಿದ ಶಿಕ್ಷಕನನ್ನು ಆಡಳಿತ ಮಂಡಳಿ ಅಮಾನತು ಮಾಡಿದೆ. ಘಟನೆಗೆ ಸಂಬಂಧಿಸಿದಂತೆ ಶಿಕ್ಷಣ ಸಂಸ್ಥೆಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್.ಬುರಡಿ ತಿಳಿಸಿದ್ದಾರೆ.
‘ಪ್ರಕರಣದ ಕುರಿತು ಯಾರೂ ದೂರು ಕೊಟ್ಟಿಲ್ಲ. ಸ್ವಯಂ ಪ್ರೇರಿತ ದೂರು ದಾಖಲಿಸಿ, ಮುಂದಿನ ಕ್ರಮವಹಿಸಲಾಗುವುದು’ ಎಂದು ಬೆಟಗೇರಿ ಪೊಲೀಸ್ ಠಾಣೆ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.