ADVERTISEMENT

ಗದಗ: ಅದ್ದೂರಿ ‘ತೋಂಟದೋತ್ಸವ-2024’

​ಪ್ರಜಾವಾಣಿ ವಾರ್ತೆ
Published 31 ಮೇ 2024, 13:07 IST
Last Updated 31 ಮೇ 2024, 13:07 IST
ಗದಗ ನಗರದ ತೋಂಟದಾರ್ಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ‘ತೋಂಟದೋತ್ಸವ-2024’ ಕಾರ್ಯಕ್ರಮವನ್ನು ಫಸ್ಟ್‌ ಜನರೇಷನ್‌ ಎಂಟರ್‌ಪ್ರೈಸಸ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಮೇಶ ಪಾಟೀಲ ಉದ್ಘಾಟಿಸಿದರು
ಗದಗ ನಗರದ ತೋಂಟದಾರ್ಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ‘ತೋಂಟದೋತ್ಸವ-2024’ ಕಾರ್ಯಕ್ರಮವನ್ನು ಫಸ್ಟ್‌ ಜನರೇಷನ್‌ ಎಂಟರ್‌ಪ್ರೈಸಸ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಮೇಶ ಪಾಟೀಲ ಉದ್ಘಾಟಿಸಿದರು   

ಗದಗ: ನಗರದ ತೋಂಟದಾರ್ಯ ತಾಂತ್ರಿಕ ಮಹಾವಿದ್ಯಾಲಯದ ವಾರ್ಷಿಕ ಸ್ನೇಹಸಮ್ಮೇಳನ ‘ತೋಂಟದೋತ್ಸವ-2024’ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಫಸ್ಟ್‌ ಜನರೇಷನ್‌ ಎಂಟರ್‌ಪ್ರೈಸಸ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಮೇಶ ಪಾಟೀಲ, ವಿದ್ಯಾರ್ಥಿಗಳು ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಹೇಗೆ ವಿದ್ಯಾರ್ಜನೆ ಮಾಡಬೇಕು. ಶಿಕ್ಷಣದ ನಂತರ ಉದ್ಯೋಗವಕಾಶಗಳನ್ನು ಹೇಗೆ ಸ್ವೀಕರಿಸಬೇಕು. ಮನೋಬಲವನ್ನು ಹೇಗೆ ಎತ್ತರಿಸಿಕೊಳ್ಳಬೇಕು ಮತ್ತು ತಮ್ಮ ವ್ಯಕ್ತಿತ್ವದ ರಚನೆಯಲ್ಲಿ ಯಾವ ವಿಷಯಗಳ ಕುರಿತು ಹೆಚ್ಚು ಆಸಕ್ತಿ ವಹಿಸಬೇಕು ಎಂಬುದನ್ನು ತಿಳಿಸಿಕೊಟ್ಟರು.

ಎಸ್.ಟಿ.ಎಸ್.ಕೆ.ಕೆ ಚೇರ್‌ಮನ್‌ ಎಸ್.ಎಸ್.ಪಟ್ಟಣಶೆಟ್ಟಿ ಮಾತನಾಡಿ, ಮಹಾವಿದ್ಯಾಲಯವು ತೋಂಟದ ಸಿದ್ಧಲಿಂಗ ಶ್ರೀಗಳ ಕನಸಾಗಿದ್ದು, ಇಂದು ಹಂತ ಹಂತವಾಗಿ ಬೆಳೆಯುತ್ತಿದೆ. ಅವರ ಆಶಯದಂತೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ತಾಂತ್ರಿಕ ಶಿಕ್ಷಣವನ್ನು ನೀಡುವಲ್ಲಿ ನಿರಂತರ ಪ್ರಯತ್ನ ಮಾಡುತ್ತಿದೆ. ನಮ್ಮ ಮಹಾವಿದ್ಯಾಲಯದಲ್ಲಿ ಓದಿದ ವಿದ್ಯಾರ್ಥಿಗಳು ಜಗತ್ತಿನ ವಿವಿಧ ಕಡೆಗಳಲ್ಲಿ ಕೆಲಸ ಮಾಡುತ್ತಿದ್ದು, ಸಂಸ್ಥೆಯ ಕೀರ್ತಿ ಬೆಳಗುತ್ತಿದ್ದಾರೆ. ವಿದ್ಯಾರ್ಥಿಗಳ ಬೆಳವಣಿಗೆಗೆ ಬೇಕಾದ ಎಲ್ಲ ಅನುಕೂಲತೆಗಳನ್ನು ಮಹಾವಿದ್ಯಾಲಯ ನೀಡುತ್ತಿದ್ದು, ಅದರ ಲಾಭ ಪಡೆದುಕೊಳ್ಳಬೇಕು ಎಂದು ಹೇಳಿದರು.

ADVERTISEMENT

ಪ್ರಾಂಶುಪಾಲ ಎಂ.ಎಂ.ಅವಟಿ ಮಹಾವಿದ್ಯಾಲಯದ ಪ್ರಸ್ತುತ ವರ್ಷದ ವರದಿ ಓದಿದರು. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಈ ವರ್ಷ ಉತ್ಸಾಹದಿಂದ ಭಾಗವಹಿಸಿದ್ದಾಗಿ ತಿಳಿಸಿದರು.

ವಿ.ಟಿ.ಯು ಮಟ್ಟದಲ್ಲೂ ಕೂಡ ವಿದ್ಯಾರ್ಥಿಗಳು ಒಳ್ಳೆಯ ಸಾಧನೆ ತೋರುತ್ತಿರುವುದು ಖುಷಿಯ ಸಂಗತಿ ಎಂದರು.

ತೋಂಟದೋತ್ಸವ-2024 ಕಾರ್ಯಕ್ರಮದ ಚೇರ್‌ಮನ್‌ ರಮೇಶ ಬಡಿಗೇರ, ಉಪ ಪ್ರಾಂಶುಪಾಲ ಈರಣ್ಣ ಕೊರಚಗಾಂವ್‌, ವಿದ್ಯಾರ್ಥಿ ಪ್ರತಿನಿಧಿಗಳಾದ ಶಿವಮೂರ್ತಿ ರೇಷ್ಮೆ, ಭೂಮಿಕಾ, ನಂದೀಶ, ಪ್ರಾಂಜಲ ಉಪಸ್ಥಿತರಿದ್ದರು.

ಮಾನ್ಯ ಶೆಟ್ಟಿ, ಸೌಮ್ಯ ಬಾಕಳೆ, ದೀಪ್ತಿ ಗಾಣಿಗೇರ, ಶ್ರುತಿ ಹವಳದ ಬಹುಮಾನ ವಿತರಣೆಯ ನಿರ್ವಹಣೆ ವಹಿಸಿದ್ದರು. ಸೀಮಾ ಕುಲಕರ್ಣಿ, ಪ್ರಜ್ಞಾ ಪಾಟೀಲ ನಿರೂಪಿಸಿದರು. ಅದಿತಿ ವಂದಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು. ತರನ್ನುಮ್‌ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.