ADVERTISEMENT

ಗಜೇಂದ್ರಗಡ | ದಾಳಿಂಬೆ ಕೃಷಿ; ಲಕ್ಷಾಂತರ ಆದಾಯ

ರೈತರಿಗೆ ಮಾದರಿಯಾದ ನಾಗರಸಕೊಪ್ಪ ಗ್ರಾಮದ ಬಡಿಗೇರ ಸಹೋದರರು

ಶ್ರೀಶೈಲ ಎಂ.ಕುಂಬಾರ
Published 19 ಜುಲೈ 2024, 4:40 IST
Last Updated 19 ಜುಲೈ 2024, 4:40 IST
ಗಜೇಂದ್ರಗಡ ಸಮೀಪದ ನಾಗರಸಕೊಪ್ಪ ಗ್ರಾಮದ ಬಡಿಗೇರ ಸಹೋದರರು ದಾಳಿಂಬೆ ಬೆಳೆದಿರುವುದು
ಗಜೇಂದ್ರಗಡ ಸಮೀಪದ ನಾಗರಸಕೊಪ್ಪ ಗ್ರಾಮದ ಬಡಿಗೇರ ಸಹೋದರರು ದಾಳಿಂಬೆ ಬೆಳೆದಿರುವುದು   

ಗಜೇಂದ್ರಗಡ: ಎಂಟು ಎಕರೆ ತೋಟದಲ್ಲಿ ದಾಳಿಂಬೆ ಬೆಳೆದು ಪ್ರತಿವರ್ಷ ಲಕ್ಷಾಂತರ ಆದಾಯ ಗಳಿಸುತ್ತಾ ತಾಲ್ಲೂಕಿನ ಬೇರೆ ರೈತರಿಗೆ ಮಾದರಿಯಾಗಿದ್ದಾರೆ ಸಮೀಪದ ನಾಗರಸಕೊಪ್ಪ ಗ್ರಾಮದ ಬಡಿಗೇರ ಸಹೋದರರು.

ಮೌನೇಶಪ್ಪ ಮಳಿಯಪ್ಪ ಬಡಿಗೇರ, ಕುಬೇರಪ್ಪ ಮಳಿಯಪ್ಪ ಬಡಿಗೇರ ಅವರು ಕಳೆದ ಎಂಟು ವರ್ಷಗಳಿಂದ ದಾಳಿಂಬೆ ಬೆಳೆ ನೆಚ್ಚಿಕೊಂಡು ಉತ್ತಮ ಲಾಭ ಪಡೆಯುತ್ತಿದ್ದಾರೆ ಈ ವರ್ಷ ಅಂದಾಜು 80ರಿಂದ 90 ಟನ್‌ ದಾಳಿಂಬೆ ಇಳುವರಿಯ ನಿರೀಕ್ಷೆ ಹೊಂದಿದ್ದಾರೆ.

‘ತೋಟದಲ್ಲಿ ಜೈನ್‌ ಕಂಪನಿಯ ಕೇಸರಿ ತಳಿಯ 3,500 ಸಸಿ ನಾಟಿ ಮಾಡಿದ್ದು, ಪ್ರತಿವರ್ಷವೂ ಉತ್ತಮ ಇಳುವರಿ ಬರುತ್ತಿದೆ. ಒಂದೊಂದು ಹಣ್ಣು ಅರ್ಧ ಕೆ.ಜಿಯಿಂದ ಒಂದು ಕೆ.ಜಿವರೆಗೆ ತೂಕ ಹೊಂದಿವೆ. ಬೇಸಿಗೆಯಲ್ಲಿ ನೀರಿನ ಕೊರತೆ ಉಂಟಾದಾಗ ಟ್ಯಾಂಕರ್‌ ಮೂಲಕ ನೀರು ಹಾಯಿಸಿ ಬೆಳೆ ಉಳಿಸಿಕೊಂಡಿದ್ದೇವೆ. ಈ ವರ್ಷ ಬೆಳೆ ನಿರ್ವಹಣೆಗೆ ₹30ರಿಂದ ₹40 ಲಕ್ಷ ಖರ್ಚು ಆಗಿದೆ. ಈ ಬಾರಿ ₹60 ಲಕ್ಷ ಆದಾಯ ಬರುವ ನಿರೀಕ್ಷೆ ಇದೆ’ ಎನ್ನುತ್ತಾರೆ ಬಡಿಗೇರ ಸಹೋದರರು.

ADVERTISEMENT

ತೋಟಕ್ಕೆ ಬಾಗಲಕೋಟೆ, ವಿಜಯಪುರ, ರಾಯಚೂರು, ಲಿಂಗಸಗೂರು ಸೇರಿದಂತೆ ಬೇರೆ ಬೇರೆ ಕಡೆಯ ರೈತರು ಬಂದು ದಾಳಿಂಬೆ ಕೃಷಿ ವೀಕ್ಷಣೆ ಮಾಡುತ್ತಾರೆ, ಅಲ್ಲದೆ, ತಾವೂ ಕೂಡ ಈ ಬೆಳೆಯಲು ಮಾಹಿತಿ ಪಡೆಯುತ್ತಾರೆ.

ಇವರು ಬೆಳೆಯುವ ದಾಳಿಂಬೆ ಬೆಳೆಗೆ ಸ್ಥಳೀಯವಾಗಿ ಅಲ್ಲದೆ, ರಾಜ್ಯದ ಪ್ರಮುಖ ನಗರ ಹಾಗೂ ಹೊರ ರಾಜ್ಯಗಳಿಂದಲೂ ಬೇಡಿಕೆ ಇದೆ. ಚೆನ್ನೈ, ಬೆಂಗಳೂರು ಮೂಲದ ವ್ಯಾಪಾರಿಗಳು ಪ್ರತಿ ಕೆ.ಜಿಗೆ ₹150ರಂತೆ ಖರೀದಿಸುತ್ತಾರೆ.

ಇವರು ದಾಳಿಂಬೆ ಬೆಳೆ ಜೊತೆಗೆ ಜೇನು ಸಾಕಣೆಯನ್ನೂ ಮಾಡುತ್ತಿದ್ದಾರೆ. ರಾಷ್ಟ್ರೀಯ ತೋಟಗಾರಿಕೆ ಮಿಷನ್ ಹಾಗೂ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಸಹಾಯಧನ, ಮಧುವನ ಮತ್ತು ಜೇನು ಸಾಕಣೆ ಯೋಜನೆಯಡಿ ಪ್ರತಿ ಪೆಟ್ಟಿಗೆಗೆ ₹3,375ರಂತೆ 12 ಜೇನು ಸಾಕಣೆ ಪೆಟ್ಟಿಗೆಗಳನ್ನು ನೀಡಲಾಗಿದೆ. ಅಲ್ಲದೆ, ಪಕ್ಷಿ ನಿರೋಧಕ ಬಲೆ ನೀಡಲಾಗಿದೆ’ ಎನ್ನುತ್ತಾರೆ’ ತೋಟಗಾರಿಕೆ ಇಲಾಖೆಯ ಸಹಾಯಕ ಅಧಿಕಾರಿ ಮಹಾಂತೇಶ ಅಂಟಿನ.

‘ದಾಳಿಂಬೆ ಬೆಳೆಯುವ ರೈತರು ಬಡಿಗೇರ ಅವರ ತೋಟಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿ, ಅನುಭವ ಪಡೆದುಕೊಳ್ಳಬಹುದು. ಮೊ: 8762233819 ಸಂಪರ್ಕಿಸಬಹುದು ಎನ್ನುತ್ತಾರೆ ಅವರು.

ಎಂಟು ವರ್ಷಗಳಿಂದ ದಾಳಿಂಬೆ ಕೃಷಿ ಇವರು ಬೆಳೆದ ದಾಳಿಂಬೆಗೆ ಹೊರ ರಾಜ್ಯದಿಂದಲೂ ಬೇಡಿಕೆ ಈ ಬಾರಿ ₹60 ಲಕ್ಷ ಆದಾಯದ ನಿರೀಕ್ಷೆ

ತೋಟಗಾರಿಕೆ ಇಲಾಖೆ ನೆರವು ಹಲವು ಪ್ರಗತಿಪರ ರೈತರ ಸಲಹೆ ಪಡೆದು ದಾಳಿಂಬೆ ಬೆಳೆಯುತ್ತಿದ್ದು ಪ್ರತಿ ವರ್ಷವೂ ನಿರೀಕ್ಷೆಗೂ ಮೀರಿ ಉತ್ತಮ ಆದಾಯ ಸಿಗುತ್ತಿದೆ
ಮೌನೇಶಪ್ಪ ಬಡಿಗೇರ ದಾಳಿಂಬೆ ಬೆಳೆ ರೈತ
ಬಡಿಗೇರ ಸಹೋದರರು ಶ್ರದ್ಧೆ ಪರಿಶ್ರಮದಿಂದ ದಾಳಿಂಬೆ ಬೆಳೆದು ಯಶಸ್ಸು ಕಂಡಿದ್ದಾರೆ. ಈ ಮೂಲಕ ತಾಲ್ಲೂಕಿನ ಇತರ ರೈತರಿಗೆ ಇವರು ಮಾದರಿಯಾಗಿದ್ದಾರೆ.
ಮಹಾಂತೇಶ ಅಂಟಿನ ತೋಟಗಾರಿಕೆ ಇಲಾಖೆಯ ಸಹಾಯಕ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.