ADVERTISEMENT

ಗಜೇಂದ್ರಗಡ: ಸಾಂಪ್ರದಾಯಿಕ ಬೆಳೆಗಳ ಜೊತೆ ರೇಷ್ಮೆ ಕೃಷಿಯಲ್ಲಿ ಯಶಸ್ಸು

ಶ್ರೀಶೈಲ ಎಂ.ಕುಂಬಾರ
Published 5 ಏಪ್ರಿಲ್ 2024, 6:00 IST
Last Updated 5 ಏಪ್ರಿಲ್ 2024, 6:00 IST
ಗಜೇಂದ್ರಗಡ ಸಮೀಪದ ಕುಂಟೋಜಿ ಗ್ರಾಮದಲ್ಲಿ ಹಿಪ್ಪು ನೇರಳೆ ಬೆಳೆಯೊಂದಿಗೆ (ರೇಷ್ಮೆ) ಬಸಪ್ಪ ಗುಂಡಪ್ಪ ಅಕ್ಕಿ ಹಾಗೂ ಮಗ ಅಮರೇಶ
ಗಜೇಂದ್ರಗಡ ಸಮೀಪದ ಕುಂಟೋಜಿ ಗ್ರಾಮದಲ್ಲಿ ಹಿಪ್ಪು ನೇರಳೆ ಬೆಳೆಯೊಂದಿಗೆ (ರೇಷ್ಮೆ) ಬಸಪ್ಪ ಗುಂಡಪ್ಪ ಅಕ್ಕಿ ಹಾಗೂ ಮಗ ಅಮರೇಶ   

ಗಜೇಂದ್ರಗಡ: ಸಮೀಪದ ಕುಂಟೋಜಿ ಗ್ರಾಮದ ಬಸಪ್ಪ ಗುಂಡಪ್ಪ ಅಕ್ಕಿ ಕುಟುಂಬ ಸಾಂಪ್ರದಾಯಿಕ ಕೃಷಿಯ ಜೊತೆ ರೇಷ್ಮೆ ಕೃಷಿಯಲ್ಲಿ ಉತ್ತಮ ಪ್ರಗತಿ ಸಾಧಿಸಿ ಕೈ ತುಂಬ ಆದಾಯ ಗಳಿಸುತ್ತಿದ್ದಾರೆ.

ವಿಜಯಪುರ ಜಿಲ್ಲೆಯ ಮುರಡಿ ಗ್ರಾಮದವರಾದ ಬಸಪ್ಪ ಅಕ್ಕಿ ಅವರನ್ನು ಚಿಕ್ಕ ವಯಸ್ಸಿನಿಂದ ಅವರ ತಾಯಿಯ ತವರು ಮನೆಯಾದ ಕುಂಟೋಜಿ ಗ್ರಾಮದಲ್ಲಿ ಮಾವಂದಿರಾದ ಬಸಪ್ಪ ಗಂಗಪ್ಪ ಕಡಬಲಕಟ್ಟಿ, ರುದ್ರಪ್ಪ ನಿಂಗಪ್ಪ ಕಡಬಲಕಟ್ಟಿ ಅವರು ಜೋಪಾನ ಮಾಡಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಮಾವನವರ ಜಮೀನುಗಳಲ್ಲಿ ಕೃಷಿ ಮಾಡುವ ಮೂಲಕ ಉತ್ತಮ ಇಳುವರಿ ತೆಗೆಯುವುದರ ಜೊತೆಗೆ 90ರ ದಶಕದಲ್ಲಿ ಬಹಳಷ್ಟು ಜಮೀನು, ಜಾಗ ಖರೀದಿಸಿದ್ದರು. ನಂತರ ಮಾವಂದಿರು ಬಸಪ್ಪ ಅವರ ತಾಯಿಗೆ ನೀಡಿದ 5 ಎಕರೆ 30 ಗುಂಟೆ ಜಮಿನಿನ ಜೊತೆಗೆ ಮಾವನವರ ಜಮೀನುಗಳಲ್ಲಿ ಕೃಷಿ ಮಾಡಿಕೊಂಡು ಬಂದಿದ್ದಾರೆ.

ಈಚಿನ ವರ್ಷಗಳಲ್ಲಿ ತಮ್ಮ 5 ಎಕರೆ 30 ಗುಂಟೆ ಜಮೀನಿನಲ್ಲಿ ರೇಷ್ಮೆ ಕೃಷಿಯ ಜೊತೆಗೆ ಶೇಂಗಾ, ಮೆಕ್ಕೆಜೋಳ, ತೊಗರಿ ಸೇರಿದಂತೆ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆದು ಉತ್ತಮ ಫಸಲು, ಆದಾಯ ಗಳಿಸಿದ್ದಾರೆ. ಕೃಷಿಯಿಂದ ಬಂದ ಲಾಭದಲ್ಲಿ 4 ಎಕರೆ ಜಮೀನು, ಜಾಗ ಖರೀದಿಸಿದ್ದು, ಊರಲ್ಲಿ ಮನೆ ಕಟ್ಟಿಸಿದ್ದಾರೆ. ಸದ್ಯ ಒಟ್ಟು 9.30 ಎಕರೆ ಜಮೀನಿನ ಪೈಕಿ 3 ಎಕರೆ ಜಮೀನಿನಲ್ಲಿ ರೇಷ್ಮೆ ಕೃಷಿ ಮಾಡುತ್ತಿದ್ದು, ವರ್ಷಕ್ಕೆ ಗರಿಷ್ಠ 9 ರೇಷ್ಮೆ ಫಸಲು ತೆಗೆಯುತ್ತಿದ್ದಾರೆ. ಲಕ್ಷಾಂತರ ರೂಪಾಯಿ ಲಾಭ ಗಳಿಸುತ್ತಿದ್ದಾರೆ.

ADVERTISEMENT

ಕಳೆದ ವರ್ಷ 200 ಮೊಟ್ಟೆಗಳಿಗೆ 1.66 ಕ್ವಿಂಟಲ್‌ ರೇಷ್ಮೆ ಗೂಡು ಇಳುವರಿ ತೆಗೆದಿದ್ದಾರೆ. ಬಸಪ್ಪ ಅವರ ಜಮೀನಿನಲ್ಲಿ ಒಟ್ಟು 3 ಕೊಳವೆ ಬಾವಿಗಳಿದ್ದು, ಅವುಗಳಿಂದ ಸಿಗುವ 5 ಇಂಚು ನೀರಿನಲ್ಲಿ ಕೃಷಿ ಮಾಡುತ್ತಿದ್ದಾರೆ. ಕೃಷಿಯ ಜೊತೆ ಕುರಿ ಸಾಕಣೆ, ಹೈನುಗಾರಿಕೆ ಸಹ ಮಾಡುತ್ತಿದ್ದಾರೆ.

‘ಈ ಮೊದಲು ನಮ್ಮ ಮಾವನವರ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದಾಗ ಎಕರೆಗೆ 22 ಕ್ವಿಂಟಲ್‌ ಮೆಕ್ಕೆಜೋಳ ಇಳುವರಿ ತೆಗೆದಿದ್ದೆವು. ಅದರಂತೆ ಇತರ ಬೆಳೆಗಳಿಂದಲೂ ಉತ್ತಮ ಫಸಲು, ಲಾಭ ಬಂದಿದೆ. ಕೃಷಿಯಲ್ಲಿ ಕಷ್ಟಪಟ್ಟು ದುಡಿದರೆ ಭೂಮಿತಾಯಿ ಪ್ರತಿಫಲ ನೀಡದೇ ಇರುವುದಿಲ್ಲʼ ಎನ್ನುತ್ತಾರೆ ರೈತ ಬಸಪ್ಪ. ಅವರ ಹಿರಿಯ ಮಗ ಹಾಗೂ ಅವರ ಪತ್ನಿ ಕೃಷಿಯಲ್ಲಿ ಸಹಾಯ ಮಾಡುತ್ತಿದ್ದಾರೆ. 

ಬಸಪ್ಪ ಅಕ್ಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.