ADVERTISEMENT

ಅಕ್ರಮ ದಂದೆಗಳ ಕೇಂದ್ರವಾಗುತ್ತಿದೆಯೇ ಗಜೇಂದ್ರಗಡ? ಮಟ್ಕಾ, ಬೆಟ್ಟಿಂಗ್‌ ದಂದೆ ಜೋರು

ಶ್ರೀಶೈಲ ಎಂ.ಕುಂಬಾರ
Published 9 ನವೆಂಬರ್ 2023, 4:53 IST
Last Updated 9 ನವೆಂಬರ್ 2023, 4:53 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   
ವಾಣಿಜ್ಯ ವಹಿವಾಟು, ಭಾವೈಕ್ಯತೆಗೆ ಹೆಸರಾಗಿರುವ ಗಜೇಂದ್ರಗಡ ಪಟ್ಟಣ ಇಂದು ಹಲವು ಅಕ್ರಮ ದಂದೆಗಳ ಕೇಂದ್ರವಾಗಿರುವ ಕಳಂಕವನ್ನೂ ಹೊರುತ್ತಿದೆ. ಪೊಲೀಸ್‌ ಇಲಾಖೆಯು ಜೂಜುಕೋರರು, ಅಕ್ರಮ ಮದ್ಯ ಹಾಗೂ ಅಕ್ಕಿ ದಂದೆಯಲ್ಲಿ ತೊಡಗಿರುವ ಖದೀಮರ ಹೆಡೆಮುರಿಕಟ್ಟಿ, ತಾಲ್ಲೂಕಿನ ಸ್ವಾಸ್ಥ್ಯ ಕಾಪಾಡಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

ಗಜೇಂದ್ರಗಡ: ಪಟ್ಟಣವೂ ಸೇರಿದಂತೆ ತಾಲ್ಲೂಕಿನ ಹಲವು ಹಳ್ಳಿಗಳಲ್ಲಿ ಜೂಜಾಟ, ಕ್ರಿಕೆಟ್‌ ಬೆಟ್ಟಿಂಗ್‌, ಕೋಳಿ ಜಗಳದಂತಹ ಅಕ್ರಮ ಆಟಗಳು ಗರಿಗೆದರಿಕೊಂಡಿದ್ದು, ಬಹುತೇಕ ಯುವಜನರು ಇವುಗಳಿಗೆ ದಾಸರಾಗಿದ್ದಾರೆ. ಅಕ್ರಮ ಆಟಗಳ ಸೆಳೆತಕ್ಕೆ ಸಿಕ್ಕು ಆರ್ಥಿಕ ನಷ್ಟ ಅನುಭವಿಸುವುದರ ಜೊತೆಗೆ ಇಡೀ ಕುಟುಂಬವನ್ನು ಸಂಕಷ್ಟದ ಸುಳಿಗೆ ದೂಡುತ್ತಿದ್ದಾರೆ.

ಮಟ್ಕಾ, ಕ್ರಿಕೆಟ್‌ ಬೆಟ್ಟಿಂಗ್‌ ದಂದೆ ಜೋರು:

ಸಣ್ಣ ಚೀಟಿ ಹಾಗೂ ಬಾಯಿ ಮಾತಿನಲ್ಲಿ ಬೆಳಿಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ನಡೆಯುವ ₹1ಕ್ಕೆ ₹80 ನೀಡುವ ಎರಡು ಅಂಕಿಯ ಕಲ್ಯಾಣಿ ಮಟ್ಕಾ ಜೂಜು ಪಟ್ಟಣ ಸೇರಿದಂತೆ ಸಣ್ಣ ಸಣ್ಣ ಹಳ್ಳಿಗಳಲ್ಲಿಯೂ ಹೆಚ್ಚಾಗಿದೆ. ಮನೆ, ಪಾನ್‌ ಶಾಪ್‌, ಮುಖ್ಯ ಬಜಾರ್‌ಗಳಲ್ಲಿ ಒಸಿ (ಮಟ್ಕಾ) ಬರೆದುಕೊಳ್ಳವ ಬುಕ್ಕಿಗಳಿದ್ದು, ಗಜೇಂದ್ರಗಡ ಪಟ್ಟಣವೊದರಲ್ಲಿಯೇ 100ಕ್ಕೂ ಹೆಚ್ಚು ಬುಕ್ಕಿಗಳಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ADVERTISEMENT

ತಾಲ್ಲೂಕಿನ ರಾಜೂರ, ಮುಶಿಗೇರಿ, ಲಕ್ಕಲಕಟ್ಟಿ, ಕಲ್ಲಿಗನೂರ, ಕೊಡಗಾನೂರ ಸೇರಿದಂತೆ ಸಣ್ಣ ಪುಟ್ಟ ಹಳ್ಳಿಗಳಲ್ಲಿಯೂ ಒಸಿ ಬರೆದುಕೊಳ್ಳುವ, ಬೆಟ್ಟಿಂಗ್‌ ಆಡಿಸುವ ಬುಕ್ಕಿಗಳಿದ್ದಾರೆ. ಸಣ್ಣ ಹಳ್ಳಿಗಳಲ್ಲಿಯೂ ಸಹ ಪ್ರತಿದಿನ ₹30ರಿಂದ ₹40 ಸಾವಿರ ಮಟ್ಕಾ ಜೂಜು ಆಡುತ್ತಿದ್ದಾರೆ. ಅದರಂತೆ ಕ್ರಿಕೆಟ್‌ ಬೆಟ್ಟಿಂಗ್‌ ವ್ಯಾಪಕವಾಗಿದ್ದು, ಕ್ರಿಕೆಟ್‌ ಬೆಟ್ಟಿಂಗ್‌ಗೆ ಬಹುಪಾಲು ಯುವಕರು ದಾಸರಾಗುತ್ತಿದ್ದಾರೆ.

ಐಪಿಎಲ್‌, ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾಟಗಳಿಗೆ ಬೆಟ್ಟಿಂಗ್‌ ಆಡಿಸುವುದು, ಆಡುವುದು ಸಾಮಾನ್ಯವಾಗಿದೆ. ಅದರಲ್ಲೂ ಐಪಿಎಲ್‌ ಪ್ರಾರಂಭವಾದರೆ ಗಜೇಂದ್ರಗಡ ಬುಕ್ಕಿಗಳ ಕೇಂದ್ರ ಸ್ಥಾನವಾಗಿ ಮಾರ್ಪಡುತ್ತದೆ. ಕ್ರಿಕೆಟ್‌ ಬೆಟ್ಟಿಂಗ್‌ನಲ್ಲಿ ಹಲವು ಕುಟುಂಬಗಳು ದಿವಾಳಿಯಾದ ನಿದರ್ಶನಗಳಿವೆ. ಆದರೆ, ಅಂತಹ ಕುಟುಂಬಗಳು ಈ ಬಗ್ಗೆ ಬಹಿರಂಗವಾಗಿ ಹೇಳಿಕೊಳ್ಳಲು ಒಪ್ಪುವುದಿಲ್ಲ.

ಜೂಜಾಟ, ಇಸ್ಪೀಟ್‌, ಕ್ರಿಕೆಟ್‌ ಬೆಟ್ಟಿಂಗ್ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಅಧಿಕಾರಿಗಳು ಆಗಾಗ ದಾಳಿ ನಡೆಸಿ ಬಹುತೇಕ ಪ್ರಕರಣಗಳನ್ನು ಕರ್ನಾಟಕ ಪೊಲೀಸ್‌ ಆಕ್ಟ್‌, 1963 (ಯು/ಎಸ್‌ -78(3)), 87 ಅಡಿಯಲ್ಲಿ ದಾಖಲಿಸುತ್ತಿದ್ದಾರೆ. ಆದರೆ ಅಣಬೆಗಳಂತೆ ಹುಟ್ಟಿಕೊಳ್ಳುತ್ತಿರುವ ಬುಕ್ಕಿಗಳು ಪೊಲೀಸರ ಭಯವಿಲ್ಲದೆ ಜೂಜಿನಲ್ಲಿ ಸಕ್ರಿಯರಾಗಿದ್ದಾರೆ. ಜಿಲ್ಲೆಯಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪಟ್ಟಣ ಎಂಬ ಖ್ಯಾತಿ ಪಡೆದಿರುವ ಗಜೇಂದ್ರಗಡ ಬೆಟ್ಟಿಂಗ್, ಒಸಿ, ಇಸ್ಪೀಟ್‌ನಂತಹ ಜೂಜು ಕೇಂದ್ರವೆಂಬ ಕುಖ್ಯಾತಿ ಪಡೆಯುತ್ತಿರುವುದು ಬೇಸರದ ಸಂಗತಿ.

‘ದಶಕದ ಹಿಂದೆ ಬರಿಗೈಯಲ್ಲಿದ್ದವರು ಮಟ್ಕಾ, ಕ್ರಿಕೆಟ್‌ ಬೆಟ್ಟಿಂಗ್‌ ದಂದೆಯಲ್ಲಿ ಕೋಟಿ ಕೋಟಿ ಗಳಿಸಿದ್ದಾರೆ. ಅಲ್ಲದೆ ಕ್ರಿಕೆಟ್‌ ಬುಕ್ಕಿಗಳು ವಿದೇಶಗಳಲ್ಲಿ ಸ್ವಂತ ಮೊಬೈಲ್‌ ಆ್ಯಪ್‌ಗಳನ್ನು ಮಾಡಿಸಿ, ಅವುಗಳ ಮೂಲಕ ಬೆಟ್ಟಿಂಗ್‌ ದಂದೆ ನಡೆಸುತ್ತಿದ್ದಾರೆ. ಹೀಗಾಗಿ ಯುವಕರು ನಾವೂ ಸಹ ಬಹುಬೇಗ ಅವರಂತೆ ಶ್ರೀಮಂತರಾಗಬೇಕೆಂದು ಅಕ್ರಮ ದಂದೆಗಳ ಹಿಂದೆ ಬಿದ್ದಿದ್ದಾರೆ’ ಎಂದು ಹೆಸರು ಹೇಳಲು ಇಚ್ಛಿಸದ ವ್ಯಕ್ತಿಯೊಬ್ಬರು ಮಾಹಿತಿ ನೀಡಿದರು.

‘ಇಸ್ಪೀಟ್‌ ಮತ್ತು ಒಸಿ ಜೂಜಿನಲ್ಲಿ ದಿನ ನಿತ್ಯದ ದುಡಿಮೆ ಹಣದ ಜೊತೆಗೆ ವಾಹನಗಳನ್ನು ಮಾರಿ, ಆಸ್ತಿ ಅಡವಿಟ್ಟು ಬಹಳಷ್ಟು ನಷ್ಟ ಅನುಭವಿಸಿದ್ದೇವೆ. ಪ್ರತಿ ದಿನ ಸಾಲಗಾರರ ಕಾಟಕ್ಕೆ ನೆಮ್ಮದಿ ಇಲ್ಲದಂತಾಗಿತ್ತು. ಅಂತಹ ಸಮಯದಲ್ಲಿ ನಮ್ಮ ಸಂಬಂಧಿಕರು ನೆರವಿಗೆ ಬಂದಿದ್ದರಿಂದ ಈಗ ಜೂಜು ಬಿಟ್ಟು ದುಡಿದು ನೆಮ್ಮದಿಯಿಂದ ಇದ್ದೇವೆ’ ಎಂದು ಜೂಜಿಗೆ ದಾಸರಾಗಿದ್ದವರ ಸಂಬಂಧಿಯೊಬ್ಬರು ಅನುಭವ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.