ಗದಗ: ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎಸ್.ಎನ್ ರುದ್ರೇಶ್, ಗದಗ–ಬೆಟಗೇರಿ ನಗರಸಭೆ ಪೌರಾಯುಕ್ತ ಮನ್ಸೂರ ಅಲಿ ಬುಧವಾರ ಬೆಳಿಗ್ಗೆ ನಗರದಲ್ಲಿ ಜೋಳಿಗೆ ಹಾಕಿಕೊಂಡು ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿದರು.
ಗಾಂಧಿ ಜಯಂತಿ ಮತ್ತು ಸ್ವಚ್ಛತಾ ಹೀ ಸೇವಾ ಅಭಿಯಾನದ ಅಂಗವಾಗಿ, ಬಟ್ಟೆಯ ಚೀಲ ಹೆಗಲಿಗೆ ಹಾಕಿಕೊಂಡು, ಪೌರಕಾರ್ಮಿಕರು ಮತ್ತು ವಿದ್ಯಾರ್ಥಿಗಳ ತಂಡದೊಂದಿಗೆ ನಗರ ಸುತ್ತಿದ ಈ ಅಧಿಕಾರಿಗಳು ಅಂಗಡಿಗಳು ಮತ್ತು ಮನೆಗಳ ಮುಂದೆ ನಿಂತು, ಜನರ ಮನವೊಲಿಸಿ ಪ್ಲಾಸ್ಟಿಕ್ ತ್ಯಾಜ್ಯವನ್ನು ತಮ್ಮ ಜೋಳಿಗೆಗೆ ಹಾಕಿಸಿಕೊಂಡರು. ಒಮ್ಮೆ ಬಳಸಿ ಬಿಸಾಕಬಹುದಾದ ಪ್ಲಾಸ್ಟಿಕ್ ಉತ್ಪನ್ನಗಳು ಅ.2ರಿಂದ ನಿಷೇಧಗೊಂಡಿದ್ದು, ಪ್ಲಾಸ್ಟಿಕ್ ಕವರ್‌ಗಳ ಬದಲು ಬಟ್ಟೆಯ ಚೀಲಗಳನ್ನು ಬಳಸುವಂತೆ ಜಾಗೃತಿ ಮೂಡಿಸಿದರು.
ಪ್ಲಾಸ್ಟಿಕ್ ವಿರುದ್ಧ ಸಮರ ಸಾರಲು ಖುದ್ದು ಜಿಲ್ಲಾಧಿಕಾರಿಯೇ ರಸ್ತೆಗಿಳಿದಿದ್ದರಿಂದ ವಿದ್ಯಾರ್ಥಿಗಳು, ಸ್ವಯಂ ಸೇವಾ ಸಂಸ್ಥೆಗಳ ಸದಸ್ಯರು, ಪೌರಕಾರ್ಮಿಕರು ಉತ್ಸಾಹದಿಂದ ಶ್ರಮದಾನದಲ್ಲಿ ಭಾಗವಹಿದರು. ನಗರದ ಪ್ರಮುಖ ಬಡಾವಣೆಗಳನ್ನು ಸುತ್ತಿದ ಈ ತಂಡಕ್ಕೆ ಸಾರ್ವಜನಿಕ ವಲಯದಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಅಂಗಡಿಕಾರರು ಸ್ವಯಂ ಪ್ರೇರಿತರಾಗಿ ಮುಂದೆ ಬಂದು ಪ್ಲಾಸ್ಟಿಕ್ ತ್ಯಾಜ್ಯವನ್ನು ಜೋಳಿಗೆಗೆ ಹಾಕಿದರು. ಹಸಿ ಮತ್ತು ಒಣ ಕಸವನ್ನು ಮೂಲದಲ್ಲೇ ಪ್ರತ್ಯೇಕಿಸಿ ಕಸದ ವಾಹನಕ್ಕೆ ಕೊಡಬೇಕು ಎಂದು ಪೌರಕಾರ್ಮಿಕರು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.
ಬುಧವಾರ ಬೆಳಿಗ್ಗೆ ನಗರಸಭೆ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ‘ಸ್ವಚ್ಛತಾ ಹೀ ಸೇವಾ’ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಚಾಲನೆ ನೀಡಿದರು. ನಗರಸಭೆ ಪರಿಸರ ಎಂಜಿನಿಯರ್ ಗಿರೀಶ ತಳವಾರ ಪ್ಲಾಸ್ಟಿಕ್ ಮುಕ್ತ ಅಭಿಯಾನದ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ, ಗದಗ ತಹಶೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ ಇದ್ದರು.
ಪ್ಲಾಸ್ಟಿಕ್ ಕವರ್‌ಗಳಿಗೆ ಪರ್ಯಾಯವಾಗಿ ಬಳಸಲು ಕೆಲವು ಸ್ವಯಂ ಸೇವಾ ಸಂಸ್ಥೆಗಳು ತಯಾರಿಸಿಕೊಂಡು ಬಂದಿದ್ದ ಬಟ್ಟೆಯ ಚೀಲಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.