ADVERTISEMENT

ಗಂಗಾ ಕಲ್ಯಾಣ: ಸಹಾಯಧನ ಬಾಕಿ

ಕೊಳವೆಬಾವಿಯಲ್ಲಿ ನೀರು ದೊರೆತರೂ ರೈತರು ಕಾಯಬೇಕಾದ ಸ್ಥಿತಿ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 13:46 IST
Last Updated 26 ಅಕ್ಟೋಬರ್ 2024, 13:46 IST
ಡಂಬಳ ಗ್ರಾಮದ ರೈತ ವಿಶ್ವನಾಥ ಬಡಿಗೇರ ಅವರ ಜಮೀನಿನಲ್ಲಿ ಕೊರೆಯಿಸಿದ ಕೊಳವೆಬಾವಿ
ಡಂಬಳ ಗ್ರಾಮದ ರೈತ ವಿಶ್ವನಾಥ ಬಡಿಗೇರ ಅವರ ಜಮೀನಿನಲ್ಲಿ ಕೊರೆಯಿಸಿದ ಕೊಳವೆಬಾವಿ   

ಡಂಬಳ: ಇಲ್ಲಿನ ರೈತ ವಿಶ್ವನಾಥ ಬಡಿಗೇರ ಅವರು ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಗಂಗಾಕಲ್ಯಾಣ ಯೋಜನೆಯಡಿ 2022-23ನೇ ಸಾಲಿನಲ್ಲಿ ಕೊಳವೆಬಾವಿ ಕೊರೆಸಿದ್ದರು. 3 ಇಂಚು ನೀರು ದೊರೆತರೂ, ಸಹಾಯಧನ ಬಾರದ ಕಾರಣಕ್ಕೆ ಯೋಜನೆಯ ಲಾಭ ಗಗನಕುಸುಮವಾಗಿದೆ.

ಇದು ವಿಶ್ವನಾಥ ಬಡಿಗೇರ ಅವರೊಬ್ಬರ ಕಥೆಯಲ್ಲ. ಜಿಲ್ಲೆಯ ಬಹುತೇಕ ರೈತರ ಪರಿಸ್ಥಿತಿ ಹೀಗೇ ಇದೆ ಎಂದು ಅಧಿಕಾರಿಗಳೇ ಹೇಳುತ್ತಾರೆ. ಕೊಳವೆಬಾವಿಯಲ್ಲಿ ನೀರು ಉಕ್ಕಿದರೂ, ಸರ್ಕಾರದಿಂದ ಸಕಾಲಕ್ಕೆ ಸಹಾಯಧನ ಸಿಗುತ್ತಿಲ್ಲ ಎಂಬುದು ರೈತರ ಆರೋಪ.

ಸಹಾಯಧನ ಸಿಗದ ಕಾರಣಕ್ಕೆ ಕೊಳವೆ ಬಾವಿಗೆ ವಿದ್ಯುತ್‌ಸಂಪರ್ಕ ಕಲ್ಪಸಿಲ್ಲ. ಪೈಪ್‌, ಪಂಪ್ ಮತ್ತು ಮೋಟಾರ್ ಅಳವಡಿಸಲಾಗುತ್ತಿಲ್ಲ. ಸಹಾಯಧನದ ನಿರೀಕ್ಷೆಯಲ್ಲೇ ರೈತರು ಕಾಲ ಕಳೆಯುವಂತಾಗಿದೆ. ಸರ್ಕಾರಿ ಕಚೇರಿಗಳಿಗೆ ಅಲೆಯುವುದು ಮುಂದುವರಿದಿದೆ.

ADVERTISEMENT

ಫಲಾನುಭವಿಗಳಿಗೆ ಹೊರೆ: ‘ಉಳಿಕೆ ಸಹಾಯಧನ ಬರುವ ತನಕ ರೈತರು ತಮ್ಮ ಖರ್ಚಿನಲ್ಲೇ ವಿದ್ಯುತ್ ಸಂಪರ್ಕ, ಪೈಪ್‌ಲೈನ್‌, ಮೋಟರ್ ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ಇದು ರೈತರಿಗೆ ಹೊರೆಯಾಗಿದೆ’ ಎನ್ನುತ್ತಾರೆ ರೈತ ವಿಶ್ವನಾಥ ಬಡಿಗೇರ.

‘ಪ್ರಸ್ತಾವ ಸಲ್ಲಿಕೆ’

‘ಜಿಲ್ಲೆಯಲ್ಲಿ ಒಟ್ಟು 300 ಕೊಳವೆಬಾವಿ ಕೊರೆಯಿಸಲಾಗಿದೆ. ಸಹಾಯಧನಕ್ಕಾಗಿ ರೈತರು ನಿತ್ಯ ನಮ್ಮ ಕಚೇರಿಗೆ ಬಂದು ಹೋಗುತ್ತಿದ್ದಾರೆ. ಉಳಿಕೆ ಸಹಾಯಧನ ಬಿಡುಗಡೆ ಮಾಡುವ ಕುರಿತು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪ್ರಸ್ತಾವ ಕಳುಹಿಸಿದ್ದೇವೆ. ಸಹಾಯಧನವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುವುದು’ ಎಂದು ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಗುರುರಾಜ ಕುಲಕರ್ಣಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.