ADVERTISEMENT

ಜಿಗೇರಿ: ಚರಂಡಿಯಾದ ಗ್ರಾಮದ ರಸ್ತೆಗಳು

ಶ್ರೀಶೈಲ ಎಂ.ಕುಂಬಾರ
Published 9 ಅಕ್ಟೋಬರ್ 2024, 7:50 IST
Last Updated 9 ಅಕ್ಟೋಬರ್ 2024, 7:50 IST
ಗಜೇಂದ್ರಗಡ ಸಮೀಪದ ಕುಂಟೋಜಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜಿಗೇರಿ ಗ್ರಾಮದ ಮುಖ್ಯ ರಸ್ತೆಯ ಡಾಂಬರ್‌ ಕಿತ್ತು ತಗ್ಗುಗಳು ನಿರ್ಮಾಣವಾಗಿವೆ. ಚರಂಡಿ ಕೊಳಚೆ ರಸ್ತೆ ಮೇಲೆ ಹರಿಯುತ್ತಿದೆ
ಗಜೇಂದ್ರಗಡ ಸಮೀಪದ ಕುಂಟೋಜಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜಿಗೇರಿ ಗ್ರಾಮದ ಮುಖ್ಯ ರಸ್ತೆಯ ಡಾಂಬರ್‌ ಕಿತ್ತು ತಗ್ಗುಗಳು ನಿರ್ಮಾಣವಾಗಿವೆ. ಚರಂಡಿ ಕೊಳಚೆ ರಸ್ತೆ ಮೇಲೆ ಹರಿಯುತ್ತಿದೆ   

ಗಜೇಂದ್ರಗಡ: ತಾಲ್ಲೂಕಿನ ಕುಂಟೋಜಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜಿಗೇರಿ ಗ್ರಾಮದಲ್ಲಿ ಚರಂಡಿಗಳು ಹಲವು ತಿಂಗಳುಗಳಿಂದ ಹೂಳು ತುಂಬಿಕೊಂಡಿದ್ದು, ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದೆ. ಗ್ರಾಮದ ಮುಖ್ಯ ರಸ್ತೆಯ ಮೇಲೆಯೇ ಚರಂಡಿ ನೀರು ಹರಿಯುತ್ತಿರುವುದರಿಂದ ಜನರ ಸಂಚಾರಕ್ಕೆ ತೊಂದರೆಯಾಗುತ್ತಿದೆ.

ಗ್ರಾಮದ ಬಹುತೇಕ ಚರಂಡಿಗಳು ಹೂಳು ತುಂಬಿಕೊಂಡು ಗಿಡ-ಗಂಟಿಗಳು ಬೆಳೆದು ನಿಂತಿವೆ. ಜೆಜೆಎಂ ಕಾಮಗಾರಿಯಿಂದ ಸಿಸಿ ರಸ್ತೆ ಹಾಳಾಗಿದ್ದು, ಗ್ರಾಮದ ಹಲವು ಓಣಿಗಳಲ್ಲಿ ಸಿಸಿ ರಸ್ತೆ ನಿರ್ಮಾಣವಾಗಿಲ್ಲ. ಗ್ರಾಮದ ಮುಖ್ಯ ರಸ್ತೆ ಪಕ್ಕದಲ್ಲಿರುವ ಚರಂಡಿಗೆ ಹಾಕಿರುವ ಸಿಸಿ ಬೆಡ್‌ ಹಾಳಾಗಿದ್ದು, ಸಿಮೆಂಟ್‌ ಕಳಚಿ ಬಿದ್ದು ಕಬ್ಬಿಣದ ಸರಳುಗಳು ಕಾಣುತ್ತಿವೆ. ಗ್ರಾಮಸ್ಥರಿಗೆ ಬಟ್ಟೆ ತೊಳೆಯಲು ಹಾಗೂ ದನ-ಕರುಗಳಿಗೆ ನೀರು ಕುಡಿಸಲು ನಿರ್ಮಿಸಿರುವ ನೀರಿನ ತೊಟ್ಟಿ ನಿರುಪಯುಕ್ತವಾಗಿದ್ದು, ಗಿಡ-ಗಂಟಿ ಬೆಳೆದು ಪಾಳು ಬಿದ್ದಿದೆ.

ವದೇಗೋಳ ಕ್ರಾಸ್‌ನಿಂದ ಕುಷ್ಟಗಿ ಸರಹದ್ದಿನ ವರೆಗಿನ ಡಾಂಬರ್ ರಸ್ತೆ ಸಂಪೂರ್ಣ ಕಿತ್ತು ಹೋಗಿದ್ದು, ಗುಂಡಿಗಳಿಂದ ಕೂಡಿದೆ. ಮಳೆ ನೀರು, ಚರಂಡಿ ನೀರು ರಸ್ತೆ ಮೇಲೆಯೇ ಹರಿಯುತ್ತಿದ್ದು, ಜನರಿಗೆ ತೊಂದರೆಯಾಗುತ್ತಿದೆ. ಮಳೆಗಾಲದಲ್ಲಿ ಸಮಸ್ಯೆಗಳು ಇನ್ನೂ ವಿಪರೀತಕ್ಕೆ ಹೋಗುತ್ತವೆ ಎನ್ನುವುದು ಗ್ರಾಮಸ್ಥರ ಅಳಲು.

ADVERTISEMENT

‘ಊರಿನಲ್ಲಿ ಚರಂಡಿಗಳು ಕಟ್ಟಿ ನಿಂತು, ಸೊಳ್ಳೆಗಳು ಹುಟ್ಟಿಕೊಂಡಿವೆ. ಮೊಹರಂ ಸಂದರ್ಭದಲ್ಲಿ ಚರಂಡಿ ಸ್ವಚ್ಛ ಮಾಡಿದ್ದು, ಬಿಟ್ಟರೆ ಮತ್ತೆ ಈ ಕಡೆಗೆ ಬಂದಿಲ್ಲ. ಗ್ರಾಮ ಪಂಚಾಯಿತಿಯವರನ್ನು ಏನಾದರೂ ಕೇಳಿದರೆ ಜಗಳಕ್ಕೆ ಬರುತ್ತಾರೆ ʼ ಎಂದು ಗ್ರಾಮದ ಮಹಿಳೆಯೊಬ್ಬರು ಸಮಸ್ಯೆ ಹೇಳಿಕೊಂಡರು.

ʼಗ್ರಾಮದಲ್ಲಿ ಸ್ವಚ್ಛತೆಯಿಲ್ಲ. ಮೂಲ ಸೌಲಭ್ಯಗಳು ಕಲ್ಪಿಸುತ್ತಿಲ್ಲ ಎಂದು ಜನರು ನಮ್ಮನ್ನು ದೂರುತ್ತಿದ್ದಾರೆ. ನರೇಗಾ ಯೋಜನೆ ಅಡಿಯಲ್ಲಿ ರೈತರು ದನದ ದೊಡ್ಡಿ ನಿರ್ಮಿಸಿಕೊಂಡಿದ್ದರೂ ಅವರಿಗೆ ಬಿಲ್‌ ಮಾಡಿಲ್ಲ. ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು ಅಧಿಕಾರಿಗಳು ಸಹಕಾರ ನೀಡುತ್ತಿಲ್ಲ. ಅಲ್ಲದೆ ಪಿಡಿಓ ಅವರು ಸರಿಯಾಗಿ ಪಂಚಾಯ್ತಿಗೆ ಬರುವುದಿಲ್ಲ. ಇದರಿಂದ ಎಲ್ಲರಿಗೂ ತೊಂದರೆಯಾಗುತ್ತಿದೆ. ಸಂಬಂಧಪಟ್ಟ ಮೇಲಾಧಿಕಾರಿಗಳು ಸಾರ್ವಜನಿಕರಿಗೆ ತೊಂದರೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕುʼ ಎಂದು ಜಿಗೇರಿ ಗ್ರಾಮದ ಗ್ರಾಮ ಪಂಚಾಯ್ತಿ ಸದಸ್ಯೆ ದ್ಯಾಮವ್ವ ಹನಮಂತಪ್ಪ ರಾಠೋಡ ದೂರಿದರು.

ವದೇಗೋಳ ಕ್ರಾಸ್‌ ನಿಂದ ಕುಷ್ಟಗಿ ಸರಹದ್ದಿನ ವರೆಗೆ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಗೆ ಬರುತ್ತದೆ. ರಸ್ತೆ ದುರಸ್ತಿ ಮಾಡಿಸುವಂತೆ ಇಲಾಖೆಗೆ ಮನವಿ ಮಾಡಲಾಗಿದೆ.
-ರೇಖಾ ದುರಗಪ್ಪ ಕಟ್ಟಿಮನಿ, ಗ್ರಾಮ ಪಂಚಾಯ್ತಿ ಸದಸ್ಯೆ
ಈಗ ತಾಲ್ಲೂಕು ಪಂಚಾಯ್ತಿ ಕಚೇರಿಗೆ ಅಕೌಂಟೆಂಟ್‌ ಆಗಿ ನೇಮಿಸಿದ್ದಾರೆ. ಮತ್ತೆ ಪಂಚಾಯ್ತಿಗೆ ಹೋದ ಮೇಲೆ ಜಿಗೇರಿ ಗ್ರಾಮದ ಸಮಸ್ಯೆಗಳಿಗೆ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತೇನೆ.
-ಎಂ.ಯು.ತಳವಾರ, ಪಿಡಿಓ ಕುಂಟೋಜಿ
ಹಗಲು ವಿದ್ಯುತ್‌ ದೀಪಗಳು
ಗ್ರಾಮಗಳಲ್ಲಿ ರಾತ್ರಿ ಸಮಯದಲ್ಲಿ ಬೀದಿ ದೀಪಗಳು ಉರಿಯುತ್ತಿಲ್ಲ ಎಂಬ ದೂರುಗಳು ಬರುವುದು ಸಾಮಾನ್ಯ. ಆದರೆ ಕುಂಟೋಜಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜಿಗೇರಿ ಗ್ರಾಮದಲ್ಲಿ ಬೀದಿ ದೀಪಗಳು ಹಗಲಲ್ಲೂ ಉರಿಯುತ್ತಿವೆ. ಈ ಸಮಸ್ಯೆ ಇದುವರೆಗೂ ಪರಿಹಾರವಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.