ಗದಗ: ಕೇಂದ್ರ ಸರ್ಕಾರದ ಮೂರು ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಸೋಮವಾರ ಕರೆ ನೀಡಿದ್ದ ಭಾರತ ಬಂದ್‌ಗೆ ಗದುಗಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.
ಭಾರತ್ ಬಂದ್ ಬೆಂಬಲಿಸಿ ಗದಗ ಜಿಲ್ಲಾ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ನಗರದ ವಿವಿಧ ವೃತ್ತಗಳಲ್ಲಿ ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರೈತ ವಿರೋಧಿ ಕಾಯ್ದೆಗಳನ್ನು ತಕ್ಷಣವೇ ರದ್ದುಗೊಳಿಸಲು ಕ್ರಮವಹಿಸುವಂತೆ ಹಕ್ಕೊತ್ತಾಯ ಮಾಡಿದರು.
‘ಕೃಷಿಯನ್ನು ಉಳಿಸಿ; ಪ್ರಜಾಪ್ರಭುತ್ವವನ್ನು ರಕ್ಷಿಸಿ’ ಘೋಷಣೆ ಅಡಿಯಲ್ಲಿ ನಗರದಲ್ಲಿ ಪ್ರತಿಭಟನೆ ನಡೆಸಿದ ರೈತ ಸಂಘಟನೆಗಳು ಟಾಂಗಾ ಕೂಟ, ಮಾರ್ಕೆಟ್ ಸರ್ಕಲ್, ಮುಳಗುಂದ ನಾಕ ಹಾಗೂ ಟಿಪ್ಪು ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ಟಿಪ್ಪು ಸುಲ್ತಾನ್ ಸರ್ಕಲ್‌ನಲ್ಲಿ ರಸ್ತೆ ತಡೆಗೆ ಮುಂದಾದ ಪ್ರತಿಭಟನಕಾರರನ್ನು ಪೊಲೀಸರು ತಡೆದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ಮಾತಿನ ಚಕಮಕಿ ನಡೆಯಿತು.
ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ವಿಜಯಕುಮಾರ ಆರ್. ಮಾತನಾಡಿ, ‘ರೈತನನ್ನು ಅನ್ನದಾತ ಎಂದು ಕರೆಯುವ ಕೇಂದ್ರ ಸರ್ಕಾರ ಈಗ ಉಳುಮೆ ಮಾಡುವ ಭೂಮಿಯನ್ನು ಕಾರ್ಪೋರೆಟ್ ಕಂಪನಿಗಳಿಗೆ ಒಪ್ಪಿಸುವ ಹುನ್ನಾರ ನಡೆಸಿದೆ. ಕೇಂದ್ರ ಸರ್ಕಾರ ಕಾನೂನು ಮಾಡಲು ನಿರ್ಧರಿಸಿರುವ ಮೂರು ಕೃಷಿ ಕಾಯ್ದೆಗಳೂ ಅಸಂವಿಧಾನಿಕವಾಗಿವೆ. ಇಂತಹ ಕಾನೂನು ರೂಪಿಸುವ ಮುನ್ನ ಸರ್ಕಾರ ಯಾವುದೇ ರೈತ ಸಂಘಟನೆಗಳ ಜತೆಗೆ ಸಮಾಲೋಚನೆ, ಸಂವಾದ ನಡೆಸಿಲ್ಲ’ ಎಂದು ಕಿಡಿಕಾರಿದ ಅವರು, ‘ತಕ್ಷಣವೇ ಅವುಗಳನ್ನು ರದ್ದುಗೊಳಿಸಲು ಮೋದಿ ಸರ್ಕಾರ ಕ್ರಮವಹಿಸಬೇಕು’ ಎಂದು ಆಗ್ರಹಿಸಿದರು.
‘ಹಲವು ತಿಂಗಳುಗಳಿಂದ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಇನ್ನಿಲ್ಲದ ಪ್ರಯತ್ನ ನಡೆಸಿದೆ. ಆದರೂ, ರೈತರು ಚಲ ಬಿಡದೇ ಹೋರಾಟವನ್ನು ಮುಂದುವರಿಸಿದ್ದಾರೆ. ಇದು ತಾರ್ಕಿಕ ಅಂತ್ಯ ಕಾಣುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ’ ಎಂದು ಹೇಳಿದರು.
ಟಾಂಗಾ ಕೂಟ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಜಾಥಾದಲ್ಲಿ ಬಂದ ಪ್ರತಿಭಟನಕಾರರು ಭಾರತ್ ಬಂದ್‌ನಲ್ಲಿ ರೈತರ ಜತೆಗೆ ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿ, ದಲಿತ ಸಂಘರ್ಷ ಸಮಿತಿ, ಜೈ ಭೀಮ್ ಆರ್ಮಿ ಹಾಗೂ ಕನ್ನಡ ಪರ ಸಂಘಟನೆಗಳ ಸದಸ್ಯರು ಕೈಜೋಡಿಸಿದ್ದರು.
ಸಹಜ ಜನಜೀವನ; ಎಂದಿನಂತೆ ವಹಿವಾಟು
ಭಾರತ್ ಬಂದ್‌ಗೆ ವಿವಿಧ ಸಂಘಟನೆಗಳು ನೈತಿಕ ಬೆಂಬಲ ಮಾತ್ರ ಘೋಷಿಸಿದ್ದರಿಂದ ಬಂದ್‌ನ ತೀವ್ರತೆ ಅಷ್ಟು ಕಂಡುಬರಲಿಲ್ಲ.
ಸಾರಿಗೆ ಸಂಚಾರ, ಹೋಟೆಲ್, ಆಸ್ಪತ್ರೆ, ಅಂಗಡಿಗಳು ಎಂದಿನಂತೆ ತೆರೆದಿದ್ದವು. ವ್ಯಾಪಾರ ವಹಿವಾಟು ಕೂಡ ಸಹಜವಾಗಿಯೇ ನಡೆಯಿತು. ತರಕಾರಿ, ಹಣ್ಣು, ಕೋಳಿ, ಮೀನು, ಮಾಂಸ ಮಾರುಕಟ್ಟೆಗಳಲ್ಲೂ ವಹಿವಾಟು ಜೋರಾಗಿತ್ತು.
ನಗರದ ಪ್ರಮುಖ ವೃತ್ತಗಳಲ್ಲಿ ಕೆಲವೆಡೆ ರೈತ ಸಂಘ ಹಾಗೂ ಕನ್ನಡ ಪರ ಸಂಘಟನೆಗಳು ಅಂಗಡಿಗಳನ್ನು ಒತ್ತಾಯಪೂರ್ವಕವಾಗಿ ಬಂದ್ ಮಾಡಿಸುವ ಪ್ರಯತ್ನ ಮಾಡಿದರು. ಟಿಪ್ಪು ಸುಲ್ತಾನ್ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡಲು ಮುಂದಾದರು. ಆದರೆ, ಪೊಲೀಸರು ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ.
*
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳಿಂದ ರೈತ ಸಮುದಾಯಕ್ಕೆ ತೊಂದರೆ ಆಗಲಿದೆ. ರೈತ ವಿರೋಧಿ ಕಾಯ್ದೆಗಳನ್ನು ರದ್ದು ಪಡಿಸಲು ಕ್ರಮವಹಿಸಬೇಕು.
-ಡಿ.ಆರ್.ಪಾಟೀಲ, ಮಾಜಿ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.