ಲಕ್ಕುಂಡಿ (ಗದಗ): ಗ್ರಾಮ ಪಂಚಾಯ್ತಿ ಎರಡನೇ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದಾರೆ.
ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಗ್ರಾಮದ 5ನೇ ವಾರ್ಡ್‌ನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೆಂಚಪ್ಪ ಪೂಜಾರ 19 ಮತ ಪಡೆದರೆ, ಇವರು ಪ್ರತಿಸ್ಪರ್ಧಿ 8ನೇ ವಾರ್ಡ್‌ನ ಬಿಜೆಪಿ ಬೆಂಬಲಿತ ಸದಸ್ಯೆ ಲಕ್ಷ್ಮವ್ವ ಭಜಂತ್ರಿ 11 ಮತಗಳನ್ನು ಪಡೆದುಕೊಂಡರು. ಕೆಂಚಪ್ಪ 8 ಮತಗಳ ಅಂತರದಿಂದ ಗೆಲುವು ಸಾಧಿಸಿದರು.
ಹಿಂದುಳಿದ ‘ಅ’ ವರ್ಗದ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ 1ನೇ ವಾರ್ಡ್‌ನ ಪುಷ್ಪಾ ಪಾಟೀಲ 18 ಮತಗಳನ್ನು ಪಡೆದರೆ, ಇವರ ಪ್ರತಿಸ್ಪರ್ಧಿ 3ನೇ ವಾರ್ಡ್‌ನ ರೋಷನಬಿ ನದಾಫ 12 ಮತಗಳನ್ನು ಪಡೆದುಕೊಂಡರು. ಪುಷ್ಪಾ ಅವರು 7 ಮತಗಳ ಅಂತರದಿಂದ ಜಯ ಗಳಿಸಿದರು.
16 ಜನ ಮಹಿಳೆಯರು ಸೇರಿದಂತೆ 30 ಸದಸ್ಯರನ್ನು ಒಳಗೊಂಡ ಲಕ್ಕುಂಡಿಯೂ ಜಿಲ್ಲೆಯಲ್ಲಿಯೇ ದೊಡ್ಡ ಗ್ರಾಮ ಪಂಚಾಯಿತಿ ಆಗಿದೆ. ಒಂದು ತಿಂಗಳಿಂದ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನ ಯಾರಿಗೆ ಒಲಿಯಲಿದೆ ಎಂಬ ಕುತೂಹಲಕ್ಕೆ ಈಗ ತೆರೆಬಿದ್ದಿದೆ.
ಡಿಡಿಪಿಐ ಕಚೇರಿಯ ಸಹಾಯಕ ಯೋಜನಾ ಸಮನ್ವಯ ಅಧಿಕಾರಿ ಶರಣಬಸವ ಹವಾಲ್ದಾರ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಸಹಾಯಕರಾಗಿ ಪಿಡಿಒ ರಾಮನಗೌಡ ನಿಟ್ಟೂರ, ಕಾರ್ಯದರ್ಶಿ ಎಂ.ಎ.ಗಾಜಿ ಕಾರ್ಯನಿರ್ವಹಿಸಿದರು.
ವಿಜಯೋತ್ಸವ
ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ, ವಿಜಯೋತ್ಸವ ಆಚರಿಸಿದರು.
ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಎಂ.ಎನ್.ಉಮಚಗಿ, ಯುವ ಮುಖಂಡರಾದ ವೀರಯ್ಯ ಗಂಧದ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.