ಶಿರಹಟ್ಟಿ: ನನೆಗುದಿಗೆ ಬಿದ್ದಿರುವ ಜನೋಪಯೋಗಿ ಕಾಮಗಾರಿಗಳು, ಹಕ್ಕುಪತ್ರಕ್ಕಾಗಿ ಕಾದುಕುಳಿತಿರುವ ಫಲಾನುಭವಿಗಳು, ಕ್ರಷರ್‌ಗಳ ಬಿರುಸಿನ ಚಟುವಟಿಕೆಯಿಂದ ಕಂಗೆಟ್ಟಿರುವ ಜನರು ಇಂತಹ ದೊಡ್ಡ ಸಮಸ್ಯೆಗಳ ಜತೆಗೆ ಹಾಳಾದ ರಸ್ತೆಗಳು, ಕುಡಿಯುವ ನೀರಿನ ಸಮಸ್ಯೆ, ವಿದ್ಯುತ್ ಸಮಸ್ಯೆ ಸೇರಿದಂತೆ ಮೂಲಸೌಲಭ್ಯಗಳ ಕೊರತೆಯಿಂದ ದೇವಿಹಾಳ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ರಣತೂರು ಗ್ರಾಮ ಪಂಚಾಯಿತಿಗೆ ಒಳಪಡುವ ದೇವಿಹಾಳ ಗ್ರಾಮದಲ್ಲಿ ಊರು ಮತ್ತು ತಾಂಡಾ ಸೇರಿ 6 ಜನ ಪಂಚಾಯಿತಿ ಸದಸ್ಯರು ಹಾಗೂ ಸುಮಾರು 2500 ಜನಸಂಖ್ಯೆ ಇದೆ. ಇತಿಹಾಸ ಪ್ರಸಿದ್ಧ ಹೊಳಲಮ್ಮದೇವಿಯು ಛತ್ರಪತಿ ಶಿವಾಜಿಗೆ ಖಡ್ಗ ಧಾರಣೆ ಮಾಡಿದ ದೇವಿಹಾಳ ಗ್ರಾಮದ ಜನರಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮೂಲಸೌಲಭ್ಯ ಒದಗಿಸುವಲ್ಲಿ ವಿಫಲರಾಗಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕ್ರಷರ್‌ಗಳ ಹಾವಳಿ: ದೇವಿಹಾಳ ಗ್ರಾಮದ ಸುತ್ತಲೂ ಕಲ್ಲಿನ ಹೊದಿಕೆ ಇದೆ. ಹಾಗಾಗಿ, ಈ ಭಾಗದಲ್ಲಿ ಕ್ರಷರ್‌ಗಳ ಸಂಖ್ಯೆ ಅಧಿಕವಾಗಿದೆ. ಕ್ರಷರ್‌ಗಳಲ್ಲಿನ ಸ್ಫೋಟದ ಕಾರಣ ಗ್ರಾಮದ ಬಹುತೇಕ ಮನೆಗಳು ಬಿರುಕು ಬಿಟ್ಟಿವೆ. ಹಗಲಿರುಳು ನಿತ್ಯ ನೂರಾರು ಟಿಪ್ಪರ್‌ಗಳು ಓವರ್ ಲೋಡ್ ಮಾಡಿಕೊಂಡು ಗ್ರಾಮದ ಒಳಗೇ ಸಂಚರಿಸುತ್ತವೆ. ಇದರಿಂದಾಗಿ ಮನೆಯಲ್ಲಿ ಮಾಡಿಟ್ಟ ಅಡುಗೆ ಮೇಲೆ ಕೂಡ ದೂಳು ಬೀಳುತ್ತಿದೆ. ಅಲ್ಲದೇ ಹೊಲಗಳಲ್ಲಿನ ಬೆಳೆ ಮೇಲೆ ದೂಳು ಸಂಗ್ರಹಗೊಂಡು ರೈತರಿಗೆ ನಷ್ಟು ಉಂಟು ಮಾಡುತ್ತಿದೆ.
ಸದ್ಯ ಮಳೆಗಾಲ ಇರುವುದರಿಂದ ಗ್ರಾಮದ ಸಿಸಿ ರಸ್ತೆಗಳೆಲ್ಲವೂ ಹಾಳಾಗಿ ಕೆಸರು ಗುಂಡಿಗಳಾಗಿವೆ. ಬೈಕ್ ಸವಾರರು ಈ ರಸ್ತೆಯಲ್ಲಿ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಸುವ ಪರಿಸ್ಥಿತಿ ಎದುರಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಾಕಷ್ಟು ಭಾರಿ ಮನವಿ ಸಲ್ಲಿಸಿದರೂ ಸ್ಪಂದನೆ ದೊರೆತಿಲ್ಲ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.
ಗಿಡಗಂಟಿಗಳಿಂದ ಅವೃತವಾದ ಕೆರೆ: ತಾಲ್ಲೂಕಿನ ಕೆರೆಗಳನ್ನು ತುಂಬಿಸಲು ಇಟಗಿ ಏತ ನೀರಾವರಿ ಯೋಜನೆಗೆ 2016-17ರಲ್ಲಿ ಹಣಕಾಸು ಇಲಾಖೆಯಿಂದ ಅನುಮೋದನೆ ದೊರೆತು ₹110 ಕೋಟಿ ಬಿಡುಗಡೆಯಾಗಿ, ಟೆಂಡರ್ ಸಹ ಆಗಿತ್ತು. ಈ ಯೋಜನೆಯಲ್ಲಿ ಗ್ರಾಮದ ಸಾಬನ ಕೆರೆ ತುಂಬಿಸುವ ನೀಲನಕ್ಷೆ ತಯಾರಾಗಿತ್ತು. ಆದರೆ, ಒಂದು ಹೆಜ್ಜೆ ಕೂಡ ಮುಂದೆ ಸಾಗಿಲ್ಲ. ಜನೋಪಯೋಗಿ ಕಾಮಗಾರಿಯನ್ನು ಆದ್ಯತೆ ಮೇಲೆ ಕೈಗೆತ್ತಿಕೊಂಡು ಪೂರ್ಣಗೊಳಿಸುವಂತೆ ಸ್ಥಳೀಯ ಜನಪ್ರತಿನಿಧಿ ಹಾಗೂ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಸದ್ಯ ನಿರ್ವಹಣೆ ಇಲ್ಲದೆ ಕೆರೆ ತುಂಬ ಗಿಡಗಂಟಿಗಳು ಬೆಳೆದಿದ್ದು, ಇದರ ದುರಸ್ತಿಗೆ ಗ್ರಾಮ ಪಂಚಾಯಿತಿ ಕಾಳಜಿ ವಹಿಸಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಈ ಯೋಜನೆ ಪ್ರಾರಂಭವಾದರೆ ಗ್ರಾಮದ ಹೊಳಲಮ್ಮದೇವಿ ದೇವಸ್ಥಾನಕ್ಕೆ ನೀರು ಸರಬರಾಜು ಮಾಡಬಹುದು. ಇದರಿಂದ ಬರುವ ಭಕ್ತರಿಗೆ ಅನುಕೂಲವಾಗುತ್ತದೆ. ಅಲ್ಲದೇ ಸುತ್ತಮುತ್ತಲಿನ ಗ್ರಾಮದ ರೈತರು ನೀರಾವರಿ ಮೂಲಕ ಉತ್ತಮ ಬೆಳೆ ಬೆಳೆಯಬಹುದು. ಅಲ್ಲದೇ ಗ್ರಾಮದಲ್ಲಿ ನೀರಿನ ಬವಣೆ ನೀಗಲಿದ್ದು, ಈ ಕುರಿತು ಶಾಸಕರು ಹಾಗೂ ಸರ್ಕಾರ ಕಾಳಜಿ ವಹಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಹಕ್ಕಪತ್ರ ನೀಡುತ್ತಿಲ್ಲ: ಗ್ರಾಮದಲ್ಲಿ ಉಳುವವನೇ ಭೂಮಿ ಒಡೆಯ ಯೋಜನೆಯಡಿಯಲ್ಲಿ ಅರಣ್ಯ ಭೂಮಿಯ ಪಟ್ಟಾ ವಿತರಣೆ ಮಾಡುವಂತೆ ಹಲವಾರು ಬಾರಿ ಮನವಿ ಸಲ್ಲಸಲಾಗಿದೆ. ಈ ಕುರಿತು ದೊಡ್ಡ ಹೋರಾಟಗಳು ಸಹ ನಡೆದಿವೆ. ಮೂಗಿಗೆ ತುಪ್ಪ ಸವರಿ ಬಿಟ್ಟ ಸರ್ಕಾರ, ಆ ಪಟ್ಟಾದಲ್ಲಿ ಸಹಿ ಸರಿಯಿಲ್ಲ ಎಂದು ಅಧಿಕಾರಿಗಳು ತಿರಸ್ಕರಿಸುತ್ತಿದ್ದಾರೆ. ಅಲ್ಲದೇ ಪಟ್ಟಾ ವಿತರಣೆ ಮಾಡುವಂತೆ ಕೋರಿ ಸಲ್ಲಿಸಿದ ಅರ್ಜಿಗಳನ್ನು ಸಹ ವಜಾ ಮಾಡಿದ್ದಾರೆ. ಇದು ಹೀಗೆ ಮುಂದುವರಿದರೆ ಮತ್ತೆ ಹೋರಾಟದ ಹಾದಿ ಅನಿವಾರ್ಯ ಎನ್ನುತ್ತಿದ್ದಾರೆ ಗ್ರಾಮಸ್ಥರು.
ನಿರ್ಲ್ಯಕ್ಷ್ಯಕ್ಕೆ ಒಳಗಾದ ಪ್ರೇಕ್ಷಣೀಯ ಸ್ಥಳ: ಇತಿಹಾಸ ಪ್ರಸಿದ್ಧ ಹೊಳಲಮ್ಮದೇವಿ ದೇವಸ್ಥಾನ ಇರುವುದು ಇದೇ ಗ್ರಾಮದಲ್ಲಿ. ಇತಿಹಾಸದ ಪುಟಗಳಲ್ಲಿ ರಾರಾಜಿಸುವ ಶಿವಾಜಿಯ ಖಡ್ಗ ಧಾರಣೆ ನಡೆದಿದ್ದು ಈ ಗುಡ್ಡದಲ್ಲಿ. ಇಂತಹ ಮಹತ್ವದ ಸ್ಥಳವಾದ ದೇವಿಹಾಳ ಗ್ರಾಮದಲ್ಲಿ ಶಿವಾಜಿ ಮಹಾರಾಜರು ನಿರ್ಮಿಸಿದ ಕಲ್ಲಿನ ಕೋಟೆ ಇದೆ. ಇದರ ಬಗ್ಗೆ ನಿಷ್ಕಾಳಜಿ ವಹಿಸುತ್ತಿರುವ ಜನಪ್ರತಿನಿಧಿ ಹಾಗೂ ಅಧಿಕಾರಿಗಳಿಂದ ಪ್ರವಾಸಿಗರಿಗೆ ತೊಂದರೆಯಾಗುತ್ತದೆ. ಪ್ರವಾಸಿ ಮಂದಿರ ಇದ್ದರೂ ಇಲ್ಲದಂತಾಗಿದೆ. ಈ ಕುರಿತು ಹೆಚ್ಚಿನ ಮತುವರ್ಜಿ ವಹಿಸಿ ಅದರ ಅಭಿವೃದ್ಧಿಗೆ ಕ್ರಮ ತೆಗೆದುಕೊಳ್ಳಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.
ದೇವಿಹಾಳ ಗ್ರಾಮದ ಸಾಬನ ಕೆರೆ ದುರಸ್ತಿಗೆ ಕ್ರಮ ವಹಿಸಲಾಗುದು. ಟಿಪ್ಪರ್ ಸಂಚಾರ ಕಡಿವಾಣಕ್ಕೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು–ಅನಿತಾ ಮಾಡಳ್ಳಿ ಪಿಡಿಒ ರಣತೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.