ADVERTISEMENT

ನೀಲಗುಂದ: ಮೂಲಸೌಲಭ್ಯ ಕೊರತೆ

ಸ್ವಚ್ಛತೆ ಮರೀಚಿಕೆ:

​ಪ್ರಜಾವಾಣಿ ವಾರ್ತೆ
Published 22 ಮೇ 2024, 5:50 IST
Last Updated 22 ಮೇ 2024, 5:50 IST
ನೀಲಗುಂದ ಚಳ್ಳಮ್ಮನ ಓಣಿಯ ಸಿಸಿ ರಸ್ತೆ ಮೇಲೆ ಹರಿಯುವ ಕೊಳಚೆ ನೀರು.
ನೀಲಗುಂದ ಚಳ್ಳಮ್ಮನ ಓಣಿಯ ಸಿಸಿ ರಸ್ತೆ ಮೇಲೆ ಹರಿಯುವ ಕೊಳಚೆ ನೀರು.   

ಮುಳಗುಂದ: ಇಲ್ಲಿಗೆ ಸಮೀಪದ ನೀಲಗುಂದ ಗ್ರಾಮದ ಚಳ್ಳಮ್ಮನ ಓಣಿಗೆ ಮೂಲ ಸೌಲಭ್ಯ ಒದಗಿಸವಲ್ಲಿ ಚಿಂಚಲಿ ಗ್ರಾಮ ಪಂಚಾಯ್ತಿ ನಿರ್ಲಕ್ಷ್ಯ ವಹಿಸಿದೆ.

ನೀಲಗುಂದ ಗ್ರಾಮವು ಚಿಂಚಲಿ ಗ್ರಾಮ ಪಂಚಾಯ್ತಿಗೆ ಒಳಪಟ್ಟಿದೆ, ಗ್ರಾಮದ ಚಳ್ಳಮ್ಮನ ಓಣಿಯಲ್ಲಿ 300ಕ್ಕೂ ಹೆಚ್ಚು ಮನೆಗಳಿದ್ದು, ಕಳೆದೊಂದು ವರ್ಷದಿಂದ ಸಮರ್ಪಕ ಕುಡಿಯುವ ನೀರಿನ ಸೌಲಭ್ಯ ಒದಗಿಸಿಲ್ಲ. 2019 ರಲ್ಲಿ ಮುಖ್ಯಮಂತ್ರಿಗಳ ಗ್ರಾಮ ವಿಕಾಸ ಯೋಜನೆ ಅಡಿ ಕೈಗೆತ್ತಿಕೊಂಡಿದ್ದ ಗ್ರಾಮ ಪಂಚಾಯ್ತಿಯವರು ಸಿಸಿ ರಸ್ತೆ ಕಾಮಗಾರಿಯನ್ನು ಕಳೆದ ವರ್ಷವಷ್ಟೆ ಪೂರ್ಣಗೊಳಿಸಲಾಗಿದೆ.

ಬೀದಿ ದೀಪ ನಿರ್ವಹಣೆ ಇಲ್ಲದೆ ರಾತ್ರಿ ಹೊತ್ತು ಓಣಿಯ ಬೀದಿಗಳಲ್ಲಿ ಕತ್ತಲೆ ಆವರಿಸುತ್ತಿದೆ. ಅವೈಜ್ಞಾನಿಕವಾಗಿ ಸಿಸಿ ರಸ್ತೆ ನಿರ್ಮಿಸಿ, ಚರಂಡಿ ಮಾಡದೇ ಬಿಟ್ಟಿರುವುದರಿಂದ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ಸುಗಮ ಸಂಚಾರ ಸಾಧ್ಯವಾಗುತ್ತಿಲ್ಲ.

ADVERTISEMENT

ಸಾರ್ವಜನಿಕ ಶೌಚಾಲಯದ ಸುತ್ತ ಗಿಡಗಂಟಿಗಳು ಬೆಳೆದು ದಾರಿ ಇಲ್ಲದೆ ಮಹಿಳೆಯರು ಪರದಾಡುವ ಸ್ಥಿತಿ ಇದೆ. ಕಳೆದ ವರ್ಷ ಮಳೆ ಕೈಕೊಟ್ಟು ಬರ ಎದುರಿಸುತ್ತಿದ್ದರೂ ಗ್ರಾಮ ಪಂಚಾಯ್ತಿಯವರು ದುಡಿಯುವ ಕೈಗಳೀಗೆ ಕೆಲಸ ಕೊಡಲೆ ಇಲ್ಲ. ಉದ್ಯೋಗ ಖಾತ್ರಿ ಆರಂಭಿಸುವದು, ಸಿಸಿ ರಸ್ತೆ ನಿರ್ಮಾಣ, ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ನಾವು ಮನವಿ ಮಾಡಿದ್ದರೂ ಸಹ ಗ್ರಾಮ ಪಂಚಾಯ್ತಿ ಪಿಡಿಒ ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

‘ಚಳ್ಳಮ್ಮನ ಓಣಿಯಲ್ಲಿ ಬಹುತೇಕ ಕಡೆ ಸಿಸಿ ರಸ್ತೆ ಆಗಿದೆ, ಕೆಲವು ಭಾಗದಲ್ಲಿ ಸಿಸಿ ರಸ್ತೆ ತೆಗ್ಗು ಬಿದ್ದಿದ್ದು, ಸರಿಪಡಿಸಬೇಕಿದೆ. ಉದ್ಯೋಗ ಖಾತ್ರಿ ಯೋಜನೆ ಕೆಲಸ ಆರಂಭಿಸುವುದು, ಕುಡಿಯುವ ನೀರು ಪೂರೈಕೆ ಆಗದಿರುವುದಕ್ಕೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಾರಣವಾಗಿದೆ. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಸರಿಪಡಿಸುವ ಭರವಸೆ ನೀಡಿದ್ದಾರೆ’ ಎಂದು ನೀಲಗುಂದ ಗ್ರಾಮ ಪಂಚಾಯಿತಿ ಸದಸ್ಯ ವಿನಯ್ ಬಂಗಾರಿ ಹೇಳಿದರು.

ಕೊಳಚೆ ನೀರಿನ ದುರ್ನಾತದ ಪರಿಣಾಮ ಸೊಳ್ಳೆ ಉಪಟಳ ಹೆಚ್ಚಾಗಿದೆ. ಸಾಂಕ್ರಾಮಿಕ ರೋಗ ಭೀತಿ ಎದುರಿಸುತ್ತಿದ್ದೇವೆ. ಸೊಳ್ಳೆ ನಾಶಕ ಸಿಂಪರಣೆ ಮಾಡಿಲ್ಲ.
–ಫಿರಾನಬಿ ನದಾಫ್, ಗ್ರಾಮದ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.