ADVERTISEMENT

ಮೂಲ ಸೌಕರ್ಯ ಕೊರತೆ: ರಾಜೂರ ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆ

ಕಳ‍ಪೆ ಸಿಸಿ ರಸ್ತೆ, ಚರಂಡಿ ನೀರು ಹರಿಯುತ್ತಿರುವ ಗಲ್ಲಿಗಳು

ಶ್ರೀಶೈಲ ಎಂ.ಕುಂಬಾರ
Published 25 ಸೆಪ್ಟೆಂಬರ್ 2024, 6:34 IST
Last Updated 25 ಸೆಪ್ಟೆಂಬರ್ 2024, 6:34 IST
ಗಜೇಂದ್ರಗಡ ಸಮೀಪದ ರಾಜೂರ ಗ್ರಾಮದ ಶಿವನಗೌಡ ಪಾಟೀಲ ಅವರ ಪ್ಲಾಟ್‌ನಲ್ಲಿ ಸರಿಯಾಗಿ ರಸ್ತೆ ನಿರ್ಮಿಸದ ಕಾರಣ ರಸ್ತೆ ನಡುವೆ ಆಪು ಬೆಳೆದಿದೆ
ಗಜೇಂದ್ರಗಡ ಸಮೀಪದ ರಾಜೂರ ಗ್ರಾಮದ ಶಿವನಗೌಡ ಪಾಟೀಲ ಅವರ ಪ್ಲಾಟ್‌ನಲ್ಲಿ ಸರಿಯಾಗಿ ರಸ್ತೆ ನಿರ್ಮಿಸದ ಕಾರಣ ರಸ್ತೆ ನಡುವೆ ಆಪು ಬೆಳೆದಿದೆ   

ಗಜೇಂದ್ರಗಡ: ಸಮೀಪದ ರಾಜೂರ ಗ್ರಾಮದ ಹಲವು ಬಡಾವಣೆಗಳಲ್ಲಿ ಸುಸಜ್ಜಿತ ರಸ್ತೆ ಇಲ್ಲದ ಕಾರಣ ಕೊಳಚೆ ನೀರು ರಸ್ತೆಯಲ್ಲಿಯೇ ನಿಲ್ಲುತ್ತಿದ್ದು, ಮಳೆಗಾಲದಲ್ಲಿ ಮಳೆ ನೀರು ಹರಿದು ಹೋಗದೆ ಅಲ್ಲಿನ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲದೆ ಗ್ರಾಮದ ಖಾಲಿ ಜಾಗಗಳಲ್ಲಿ ಕಸದ ರಾಶಿ ಬಿದ್ದಿರುವುದರಿಂದ ಸ್ವಚ್ಛತೆ ಎಂಬುದು ಮರಿಚಿಕೆಯಾಗಿದೆ.

ಗ್ರಾಮಗಳಲ್ಲಿ ಅವೈಜ್ಞಾನಿಕವಾಗಿ ಸಿಸಿ ರಸ್ತೆ ನಿರ್ಮಾಣ ಮಾಡಿರುವುದರಿಂದ ಕೊಳಚೆ ನೀರು ಸರಾಗವಾಗಿ ಹರಿದು ಹೋಗದೆ, ಅಲ್ಲಲ್ಲಿ ನಿಂತು ಗಬ್ಬೆದ್ದು ನಾರುತ್ತಿದೆ. ಗ್ರಾಮದ ಭೀಮಾಂಬಿಕಾ ಬಡಾವಣೆಯಲ್ಲಿ ಭೀಮಾಂಬಿಕಾ ದೇವಸ್ಥಾನದಿಂದ ಬಡಿಗೇರರ ಮನೆವರೆಗಿನ ಸಿಸಿ ರಸ್ತೆ ಸಂಪೂರ್ಣ ಹಾಳಾಗಿದ್ದು, ರಸ್ತೆ ತುಂಬ ಕೊಳಚೆ ನೀರು ತುಂಬಿಕೊಂಡು ಓಡಾಡಲು ತೊಂದರೆಯಾಗುತ್ತಿದೆ.

ಅಲ್ಲದೆ ಅದೇ ಬಡಾವಣೆಯಲ್ಲಿ ರಾಮಲಿಂಗೇಶ್ವರ ದೇವಸ್ಥಾನದಿಂದ ಬಾಲಕರ ವಸತಿ ನಿಲಯದ ಮುಖ್ಯ ರಸ್ತೆವರೆಗೆ ನಿರ್ಮಿಸಿರುವ ಸಿಸಿ ಚರಂಡಿ ಅರ್ಧಕ್ಕೆ ನಿಂತಿದ್ದು, ವಸತಿ ನಿಲಯದ ಪಕ್ಕದಲ್ಲಿನ ಚರಂಡಿ ಹೂಳು ತುಂಬಿಕೊಂಡಿದೆ. ಗ್ರಾಮದ ಶಿವನಗೌಡ ಪಾಟೀಲ ಅವರ ಪ್ಲಾಟ್‌ನಲ್ಲಿ 20ಕ್ಕೂ ಹಚ್ಚು ಮನೆಗಳಿದ್ದು, ಈ ಓಣಿಯಲ್ಲಿ ಸರಿಯಾದ ರಸ್ತೆ ನಿರ್ಮಿಸದ ಕಾರಣ ರಸ್ತೆ ನಡುವೆ ಆಪು ಬೆಳೆದಿದೆ. ಅಲ್ಲದೆ ಮಳೆ ಬಂದರೆ ಸಾಕು ಮಳೆ ನೀರು ಹಾಗೂ ಕೊಳಚೆ ನೀರು ಮನೆಗಳಿಗೆ ನುಗ್ಗುತ್ತದೆ.

ADVERTISEMENT

ಗ್ರಾಮ ಪಂಚಾಯ್ತಿ ಹಳೆಯ ಕಟ್ಟಡ ಇತ್ತಿಚೇಗೆ ದುರಸ್ತಿಗೊಳಿಸಿ ಬಣ್ಣ ಹಚ್ಚಲಾಗಿದೆ. ಅಲ್ಲದೆ ಗ್ರಾಮ ಪಂಚಾಯ್ತಿ ಪಕ್ಕದಲ್ಲಿ ನರೇಗಾ ಯೋಜನೆ ಅಡಿಯಲ್ಲಿ ನಿರ್ಮಿಸಲಾದ ಹೊಸ ಕಟ್ಟಡ ಉದ್ಘಾಟನೆಗೂ ಮುನ್ನವೇ ಬಿರುಕು ಬಿಟ್ಟಿದೆ. ಈ ಕಟ್ಟಡದಲ್ಲಿ ಬೇಸಿಗೆಯಲ್ಲಿ ಸರ್ಕಾರದಿಂದ ರಿಯಾಯ್ತಿ ದರದಲ್ಲಿ ವಿತರಿಸಲು ತಂದಿದ್ದ ಮೇವು ಸಂಗ್ರಹಿಸಲಾಗಿದೆ.

ಗ್ರಾಮದಲ್ಲಿರುವ ಸುಣ್ಣದ ಬಟ್ಟಿಗಳಿಂದ ಬಸವಣ್ಣನ ದೇವಸ್ಥಾನದವರೆಗೆ ಹೊಸದಾಗಿ ಕುಡಿಯುವ ನೀರಿನ ಪ್ಲಾಸ್ಟಿಕ್‌ ಪೈಪ್‌ ಅಳವಡಿಸಲಾಗಿದೆ. ಆದರೆ ಸ್ವಲ್ಪ ನೆಲದ ಅಡಿ ಇದ್ದು, ಬಹುತೇಕ ಪೈಪ್‌ ರಸ್ತೆ ಮೇಲೆಯೇ ಇದ್ದು, ಅದರ ಮೇಲೆ ಮಣ್ಣು ಹಾಕಿ ಮುಚ್ಚಲಾಗಿದೆ. ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಹಲವು ವರ್ಷಗಳಿಂದ ಕೆಟ್ಟು ನಿಂತಿದ್ದು, ಗ್ರಾಮಸ್ಥರು ಖಾಸಗಿ ಘಟಕದಿಂದ ಶುದ್ಧ ಕುಡಿಯುವ ನೀರು ಅವಲಂಬಿಸಿದ್ದಾರೆ. ಕೆಲವರು ನಲ್ಲಿಯ ನೀರನ್ನೇ ಕುಡಿಯಲು ಬಳಸುತ್ತಿದ್ದಾರೆ.

ʼಗ್ರಾಮದ ಶಿವನಗೌಡ ಪಾಟೀಲ ಅವರ ಪ್ಲಾಟ್ ನಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಿಸದ ಕಾರಣ ಕೊಳಚೆ ನೀರು ರಸ್ತೆಯಲ್ಲಿಯೇ ನಿಲ್ಲುತ್ತಿದೆ. ಅಲ್ಲದೆ ಮಳೆಗಾಲದಲ್ಲಿ ಮಳೆ ನೀರು ಮನೆಗೆ ನುಗ್ಗುವುದರ ಜೊತೆಗೆ ರಸ್ತೆ ನಡುವೆ ಕೆರೆಯಂತೆ ನೀರು ನಿಲ್ಲುತ್ತದೆ. ಈ ಕುರಿತು ಹಲವು ಬಾರಿ ಪಂಚಾಯ್ತಿಯವರಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಇನ್ನಾದರೂ ಸಮಸ್ಯೆಗೆ ಪರಿಹಾರ ನೀಡಬೇಕುʼ ಎಂದು ಗ್ರಾಮಸ್ಥರಾದ ಅಂದಪ್ಪ ವ್ಯಾಪಾರಿ, ಶರಣಪ್ಪ ಚಳಗೇರಿ, ದುಂಡಯ್ಯಜ್ಜ ಹಿರೇಮಠ ಅಲವತ್ತುಕೊಂಡರು.

‘ಗ್ರಾಮದ ಕುಂಬಳಾವತಿ ದೇವಸ್ಥಾನದ ಓಣಿ, ಮುಖ್ಯ ಬಜಾರಕ್ಕೆ ಸರಿಯಾಗಿ ನೀರು ಸರಬರಾಜು ಆಗುತ್ತಿರಲಿಲ್ಲ. ಹೀಗಾಗಿ ಮುಖ್ಯ ಪೈಪ್‌ಲೈನ್‌ನಿಂದ ಹೊಸ ಪೈಪ್‌ ಅಳವಡಿಸಲಾಗಿದೆ. ಸದಸ್ಯದಲ್ಲಿಯೇ ಸಿಸಿ ರಸ್ತೆ ಕಾಮಗಾರಿ ಆರಂಭ ಆಗುತ್ತಿರುವುದರಿಂದ ರಸ್ತೆ ಮೇಲೆ ಪೈಪ್‌ ಅಳವಡಿಸಲಾಗಿದೆʼ ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶರಣಪ್ಪ ಸಜ್ಜನರ ಹೇಳಿದರು.

ಗಜೇಂದ್ರಗಡ ಸಮೀಪದ ರಾಜೂರ ಗ್ರಾಮದ ಸುಣ್ಣದ ಬಟ್ಟಿಯಿಂದ ಬಸವಣ್ಣನ ದೇವಸ್ಥಾನದವರೆಗೆ ಕುಡಿಯುವ ನೀರಿನ ಪೈಪ್‌ ರಸ್ತೆ ಮೇಲೆಯೇ ಅಳವಡಿಸಿರುವುದು
ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಲು ಕ್ರಮ ಕೈಗೊಳ್ಳಲಾಗುವುದು. ಸೊಳ್ಳೆಗಳ ನಿಯಂತ್ರಣಕ್ಕೆ ಗ್ರಾಮದಲ್ಲಿ ಮೆಲಾಥಿನ್‌ ಪೌಡರ್‌ ಸಿಂಪಡಿಸುವುದರ ಜೊತೆಗೆ ಫಾಗಿಂಗ್‌ ಮಾಡಿಸಲು ಕ್ರಮ ಕೈಗೊಳ್ಳಲಾಗುವುದು.
–ಎಸ್.ಎಸ್.ತೊಂಡಿಹಾಳ, ಪಿಡಿಓ ಗ್ರಾಮ ಪಂಚಾಯ್ತಿ ರಾಜೂರ
ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನದಿಂದ ₹4.70 ಲಕ್ಷ ವೆಚ್ಚದಲ್ಲಿ ಸಿಸಿ ಚರಂಡಿ ನಿರ್ಮಿಸಲಾಗಿದೆ. ಇನ್ನೂ ಉಳಿದ ಚರಂಡಿ ನಿರ್ಮಾಣಕ್ಕೆ ಕ್ರಿಯಾ ಯೋಜನೆ ರೂಪಿಸಲಾಗುವುದು.
–ನಿಂಗವ್ವ ಶಂಕ್ರಿ, ಅಧ್ಯಕ್ಷೆ ಗ್ರಾಮ ಪಂಚಾಯ್ತಿ ರಾಜೂರ

ಹೆಸರಿಗಷ್ಟೇ ಬಯಲು ಮುಕ್ತ ಶೌಚ ಗ್ರಾಮ

ಗ್ರಾಮವನ್ನು 2017ರಲ್ಲಿ ಬಯಲು ಬಹಿರ್ದೆಸೆ ಮುಕ್ತ ಶೌಚ ಗ್ರಾಮ ಎಂದು ಘೋಷಿಸಲಾಗಿದೆ. ಆದರೆ ಗ್ರಾಮದ ಹೊರ ವಲಯದಲ್ಲಿರುವ ಮುಖ್ಯ ರಸ್ತೆಗಳು ಜಮೀನುಗಳಿಗೆ ಸಂಪರ್ಕಿಸುವ ರಸ್ತೆಗಳು ಹಾಗೂ ಬಯಲು ಜಾಗೆಗಳಲ್ಲಿ ತಿಪ್ಪೆ ಗುಂಡಿ ಹಾಕಲಾಗಿದ್ದು ಅವು ಮುಳ್ಳು ಕಂಟಿ ಕಸ ಬೆಳೆದು ಬಯಲು ಶೌಚಾಲಯಗಳಾಗಿ ಮಾರ್ಪಟ್ಟಿವೆ. ಇದರಿಂದ ಅಲ್ಲಿನ ನಿವಾಸಿಗಳು ತಿಪ್ಪೆಗಳಿಂದ ಹಾಗೂ ಮಲದಿಂದ ಬರುವ ದುರ್ವಾಸನೆಗೆ ಬೇಸತ್ತಿದ್ದು ರೋಗಗಳ ಭೀತಿ ಎದುರಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.