ADVERTISEMENT

ಸತತ ಮಳೆಗೆ ಹೆಸರು ಬೆಳೆ ಹಾಳು

ಕೊಯ್ಲಿಗೆ ಬಂದಿದ್ದ ಫಸಲು ಬಿಡಿಸಲಾಗದೆ ಹೊಲದಲ್ಲಿಯೇ ಕೊಳೆಯುವ ಸ್ಥಿತಿ

ಪ್ರಜಾವಾಣಿ ವಿಶೇಷ
Published 31 ಜುಲೈ 2024, 7:02 IST
Last Updated 31 ಜುಲೈ 2024, 7:02 IST
ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ ನಿರಂತರವಾಗಿ ಸುರಿದ ಮಳೆಗೆ ಹಾಳಾಗಿರುವ ಹೆಸರು ಬೆಳೆಯನ್ನು ರೈತ ಈರಣ್ಣ ಬಮ್ಮನಹಳ್ಳಿ ತೋರಿಸಿದರು
ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ ನಿರಂತರವಾಗಿ ಸುರಿದ ಮಳೆಗೆ ಹಾಳಾಗಿರುವ ಹೆಸರು ಬೆಳೆಯನ್ನು ರೈತ ಈರಣ್ಣ ಬಮ್ಮನಹಳ್ಳಿ ತೋರಿಸಿದರು   

ಲಕ್ಷ್ಮೇಶ್ವರ: ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳಲ್ಲಿ ಒಂದಾಗಿರುವ ಹೆಸರು ಬೆಳೆ ರೈತಾಪಿ ವಲಯದಲ್ಲಿ ಹಸಿರು ಬಂಗಾರ ಎನ್ನಿಸಿಕೊಂಡಿದೆ. ಆದರೆ ಎರಡು ಮೂರು ವಾರಗಳಿಂದ ತಾಲ್ಲೂಕಿನಾದ್ಯಂತ ಸುರಿಯುತ್ತಿರುವ ಜಿಟಿಜಿಟಿ ಮಳೆ ಹೆಸರು ಬೆಳೆಗೆ ಮಾರಕವಾಗಿ ಪರಿಣಮಿಸಿದ್ದು, ಕೊಯ್ಲಿಗೆ ಬಂದಿದ್ದ ಫಸಲು ಬಿಡಿಸಲಾಗದೆ ಬೆಳೆ ಹೊಲದಲ್ಲಿಯೇ ಕೊಳೆಯುವ ಸ್ಥಿತಿಗೆ ಬಂದಿದೆ.

ಮುಂಗಾರು ಮಳೆ ಬೀಳುತ್ತಲೇ ಮೊಟ್ಟಮೊದಲಿಗೆ ರೈತರು ಹೆಸರು ಬಿತ್ತನೆ ಮಾಡುವುದು ವಾಡಿಕೆ. ಇದು ಕೇವಲ 70 ದಿನಗಳ ಬೆಳೆಯಾಗಿದ್ದು ಬಹಳಷ್ಟು ರೈತರು ಬಿತ್ತನೆ ಮಾಡುತ್ತಾರೆ. ಅದರಂತೆ ಈ ವರ್ಷವೂ ಸಾವಿರಾರು ಹೆಕ್ಟೇರ್‌ನಲ್ಲಿ ಹೆಸರು ಬಿತ್ತನೆಯಾಗಿದೆ.

ಕಳೆದ ವರ್ಷ ಮಳೆ ಕೊರತೆಯಿಂದಾಗಿ ಹೆಸರು ಸರಿಯಾಗಿ ಬೆಳೆದಿರಲಿಲ್ಲ. ಈ ವರ್ಷವಾದರೂ ಸಕಾಲಕ್ಕೆ ಮಳೆ ಬಂದು ಇಳುವರಿ ಪಡೆಯಬಹುದು ಎಂದು ರೈತರು ಕನಸು ಕಂಡಿದ್ದರು. ಆರಂಭದಲ್ಲಿ ಉತ್ತಮ ತೇವಾಂಶದಿಂದಾಗಿ ಬೆಳೆ ಚೆನ್ನಾಗಿ ಬೆಳೆದಿತ್ತು. ಆದರೆ ಬಿಟ್ಟೂ ಬಿಡದೆ ಸುರಿದ ಮಳೆ ಹೆಸರು ಬೆಳೆಯನ್ನು ಆಪೋಷನ ಪಡೆದಿದೆ.

ADVERTISEMENT

ಕೆಲ ರೈತರು ಮುಂಗಡ ಬಿತ್ತಿದ್ದು ಅವರ ಫಸಲು ಸದ್ಯ ಕೊಯ್ಲಿಗೆ ಬಂದಿತ್ತು. ಆದರೆ ನಿರಂತರ ಸುರಿದ ಮಳೆಯಿಂದಾಗಿ ಕಾಯಿ ಬಿಡಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಹೊಲದಲ್ಲಿಯೇ ಹೆಸರುಕಾಯಿ ಕೊಳೆತು ಮೊಳಕೆಯೊಡೆಯುತ್ತಿದೆ. ಅಳಿದುಳಿದ ಬೆಳೆಗೆ ಹಲವು ರೋಗಗಳು ಕಾಣಿಸಿಕೊಂಡಿವೆ. ಇದರಿಂದಾಗಿ ರೈತರಿಗೆ ಚಿಂತೆ ಶುರುವಾಗಿದೆ.

ನಿರಂತರ ಮಳೆಯಿಂದಾಗಿ ಕಾಯಿಗಳ ತುಂಬು ಕೊಳೆತು ಹೊಲಗಳಲ್ಲಿಯೇ ಉದುರಿ ಬೀಳುತ್ತಿವೆ. ಅಲ್ಲದೆ ಹಳದಿ ರೋಗಬಾಧೆ ಬೆಳೆಯನ್ನು ಹಾಳು ಮಾಡಿದೆ. ಅದರೊಂದಿಗೆ ಇನ್ನಿತರ ರೋಗಗಳು ಬೆಳೆಯನ್ನು ನಾಶ ಮಾಡುತ್ತಿದ್ದು ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಸ್ಥಿತಿ ರೈತನದ್ದಾಗಿದೆ.

ಲಕ್ಷ್ಮೇಶ್ವರದ ಈರಣ್ಣ ಶಂಕ್ರಪ್ಪ ಬಮ್ಮನಹಳ್ಳಿ ₹20ಸಾವಿರ ಖರ್ಚು ಮಾಡಿ ಎರಡು ಎಕರೆಯಲ್ಲಿ ಹೆಸರು ಬೆಳೆದಿದ್ದರು. ಆದರೆ ಜಿಟಿಜಿಟಿ ಮಳೆಯಿಂದಾಗಿ ಇಡೀ ಬೆಳೆ ಕೊಳೆತು ಕಾಯಿಗಳು ಉದುರಿ ಬಿದ್ದಿವೆ. ಅದರೊಂದಿಗೆ ಬೆಳೆದ ಹೆಸರುಕಾಯಿ ಬಳ್ಳಿಯಲ್ಲಿಯೇ ಮೊಳಕೆಯೊಡೆಯುತ್ತಿದೆ.

₹20 ಸಾವಿರ ಖರ್ಚು ಮಾಡಿ ಎರಡು ಎಕರೆಯಲ್ಲಿ ಹೆಸರು ಬೆಳೆದಿದ್ದೆ. ಜಿಟಿಜಿಟಿ ಮಳೆಯಿಂದಾಗಿ ಇಡೀ ಬೆಳೆ ಕೊಳೆತು ಕಾಯಿಗಳು ಉದುರಿ ಬಿದ್ದಿವೆ, ಬಳ್ಳಿಯಲ್ಲಿಯೇ ಮೊಳಕೆಯೊಡೆಯುತ್ತಿವೆ
–ಈರಣ್ಣ ಶಂಕ್ರಪ್ಪ ಬಮ್ಮನಹಳ್ಳಿ, ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.