ADVERTISEMENT

ನರಗುಂದ | ಚೀಲಗಳ ಕೊರತೆ, ಹೆಸರು ಖರೀದಿ ಸ್ಥಗಿತ: ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳು

ಬಸವರಾಜ ಹಲಕುರ್ಕಿ
Published 7 ಅಕ್ಟೋಬರ್ 2024, 6:26 IST
Last Updated 7 ಅಕ್ಟೋಬರ್ 2024, 6:26 IST
ನರಗುಂದದ ಎಪಿಎಂಸಿ ಆವರಣದಲ್ಲಿರುವ ಸರ್ಕಾರದ ಬೆಂಬಲ ಯೋಜನೆಯಡಿ ಖರೀದಿ ಮಾಡುವ ಟಿಎಪಿಸಿಎಂಎಸ್ ಹೆಸರು ಖರೀದಿ ಕೇಂದ್ರ ಸ್ಥಗಿತವಾಗಿದೆ
ನರಗುಂದದ ಎಪಿಎಂಸಿ ಆವರಣದಲ್ಲಿರುವ ಸರ್ಕಾರದ ಬೆಂಬಲ ಯೋಜನೆಯಡಿ ಖರೀದಿ ಮಾಡುವ ಟಿಎಪಿಸಿಎಂಎಸ್ ಹೆಸರು ಖರೀದಿ ಕೇಂದ್ರ ಸ್ಥಗಿತವಾಗಿದೆ   

ನರಗುಂದ: ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಸರ್ಕಾರದ ಬೆಂಬಲ ಯೋಜನೆಯಡಿ ಖರೀದಿ ಮಾಡುವ ಟಿಎಪಿಸಿಎಂಎಸ್ ಹೆಸರು ಖರೀದಿ ಕೇಂದ್ರ ಖಾಲಿ ಚೀಲಗಳ ಪೂರೈಕೆಯಾಗದಿರುವ ಪರಿಣಾಮ ಶನಿವಾರ ಖರೀದಿ ಕಾರ್ಯ ಸ್ಥಗಿತಗೊಂಡಿದೆ.

ಹೆಸರು ಮಾರಾಟಕ್ಕೆ ಬಂದಿರುವ ರೈತರು ಪರದಾಡುವಂತಾಗಿದೆ. 1500 ರೈತರು ಈಗಾಗಲೇ ನೋಂದಣಿಯಾಗಿದ್ದು, ಇಲ್ಲಿಯವರೆಗೆ ಕೇವಲ 500 ರೈತರಿಂದ ಮಾತ್ರ ಹೆಸರು ಖರೀದಿಯಾಗಿದೆ. ಉಳಿದ ರೈತರಿಂದ ಬೇಗನೇ ಹೆಸರು ಈ ಕೇಂದ್ರದಲ್ಲಿ ಖರೀದಿಯಾಗಬೇಕಿದೆ. ಆದರೆ ಹೆಸರು ತುಂಬುವ ಚೀಲಗಳು ಸಹಕಾರ ಮಾರಾಟ ಮಹಾಮಂಡಳದಿಂದ ಪೂರೈಕೆಯಾಗಬೇಕು. ಅವು ಸಮರ್ಪಕವಾಗಿ ಪೂರೈಕೆಯಾಗಿಲ್ಲ.ಇದರಿಂದ ರೈತರು ಮಾರಾಟ ಮಹಾಮಂಡಳದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರೈತರು ದಿನವಿಡೀ ಖರೀದಿ ಕೇಂದ್ರಕ್ಕೆ ಅಲೆದಾಡುವಂತಾಯಿತು.ಕೊನೆಗೂ ಚೀಲ ಪೂರೈಕೆಯಾಗಲೇ ಇಲ್ಲ. ಭಾನುವಾರವೂ ಪೂರೈಕೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ರೈತರು ಸಹಕಾರ ಮಾರಾಟ ಮಹಾಮಂಡಳದ ಅಧಿಕಾರಿಗಳನ್ನು ಕೇಳಿದರೆ ‘ನಾವು ಈಗಾಗಲೇ ಪೂರೈಕೆ ಮಾಡಿದ್ದೇವೆ ಎಂದು ಸಬೂಬು ಹೇಳುತ್ತಲೇ ಜಾರಿಕೊಳ್ಳುವುದು ಕಾಣುತ್ತಿದೆ. ಜೊತೆಗೆ ಹೆಸರು ಖರೀದಿ ವಿಳಂಬವಾಗುವುದಕ್ಕೆ ಮಾರಾಟ ಮಂಡಳದ ನಿರ್ಲಕ್ಷ್ಯ ವೇ ಆಗಿದೆ‘ ಎಂದು ರೈತರು ದೂರಿದರು.

ADVERTISEMENT

ಉಳಿದ ಕೇಂದ್ರಗಳಲ್ಲೂ ಕೊರತೆ: ತಾಲ್ಲೂಕಿನ ಗ್ರಾಮೀಣ ಪ್ರದೇಶದ 7 ಪಿಕೆಪಿಎಸ್ ಖರೀದಿ ಕೇಂದ್ರಗಳಿವೆ. ಅಲ್ಲಿಯೂ ಚೀಲಗಳ ಕೊರತೆ ಇದೆ. ಅವು ಭಾನುವಾರ, ಸೋಮವಾರ ಖರೀದಿ ಪ್ರಕ್ರಿಯೆ ಸ್ಥಗಿತಗೊಳಿಸುವುದು ಬಹುತೇಕ ನಿಶ್ಚಿತವಾಗಿದೆ.

ಹೆಸರು ಖರೀದಿ ಕೇಂದ್ರ ಸ್ಥಗಿತಗೊಂಡ ಬಗ್ಗೆ ಮಾತನಾಡಿದ ಟಿಎಪಿಸಿಎಂಎಸ್ ಅಧಿಕಾರಿ ಯಲ್ಲಪ್ಪಗೌಡ ಪಾಟೀಲ, 'ನಮಗೆ ಬೇಕಾದಷ್ಟು ಚೀಲಗಳನ್ನು ಸಹಕಾರ ಮಾರಾಟ ಮಂಡಳ ಒದಗಿಸಿಲ್ಲ. ಇದರಿಂದ ಖರೀದಿ ಪ್ರಕ್ರಿಯೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ₹10ಸಾವಿರದಷ್ಟು 50 ಕೆಜಿ ಪ್ಯಾಕೆಟ್‌ಗಳನ್ನು ಒದಗಿಸಿದ್ದರು. ಇಲ್ಲಿಯವರೆಗೆ ₹5 ಸಾವಿರ ಕ್ವಿಂಟಲ್ ಹೆಸರು. ಚೀಲಗಳು ಬರುವವರೆಗೂ ಖರೀದಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮಾರಾಟ ಮಹಾಮಂಡಳದವರು ಬೇಗನೇ ಚೀಲ ಪೂರೈಸಬೇಕು' ಎಂದರು.

'ಈಗಾಗಲೇ ಅಗತ್ಯವಿರುವ ಚೀಲಗಳನ್ನು ಖರೀದಿ ಕೇಂದ್ರಗಳಿಗೆ ಆದರೆ ಹೇಗೆ ಕೊರತೆ ಬಿದ್ದಿದೆ ತಿಳಿದು ಬಂದಿಲ್ಲ. ರೋಣ, ನರಗುಂದ, ಗಜೇಂದ್ರಗಡ ತಾಲ್ಲೂಕುಗಳಿಗೆ 93 ಸಾವಿರದಷ್ಟು 50ಕೆಜಿ ಪ್ಯಾಕೆಟ್ (ಚೀಲ)ಗಳನ್ನು ಒದಗಿಸಲಾಗಿದೆ. ಆದರೆ ಅಷ್ಟು ಪ್ರಮಾಣದ ಹೆಸರು ಖರೀದಿಯಾಗಿಲ್ಲ’ ಎಂದರು.

ಖರೀದಿ ಕೇಂದ್ರ ಹಾಗೂ ಮಾರಾಟ ಮಂಡಳದ ಅಧಿಕಾರಿಗಳ ಮಾತು ಕೇಳಿದರೆ ರೈತರು ಪರದಾಡುವಂತಾಗಿದೆ. ಇಬ್ಬರ ಹೇಳಿಕೆಗಳಿಗೂ ತಾಳೆ ಇಲ್ಲದಂತಾಗಿದೆ. ಹೀಗಾದರೆ ರೈತರು ಹೆಸರು ಮಾರಾಟ ಮಾಡುವುದು ಯಾವಾಗ ಎಂಬ ಪ್ರಶ್ನೆ ಸಹಜವಾಗಿದೆ.

‘ಸಹಕಾರ ಮಾರಾಟ ಮಹಾಮಂಡಳದ ಅಧಿಕಾರಿಗಳ ನಿರ್ಲಕ್ಷದ ಪರಿಣಾಮ ರೈತರು ತೊಂದರೆ ಅನುಭವಿಸುವಂತಾಗಿದೆ. ಚೀಲಗಳನ್ನು ಸಕಾಲಕ್ಕೆ ಪೂರೈಸಿದ್ದರೆ ಖರೀದಿ ಸ್ಥಗಿತಗೊಳ್ಳುತ್ತಿದ್ದಿಲ್ಲ’ ಎಂದು ರೈತ ಮುಖಂಡ ಎಸ್.ಬಿ.ಜೋಗಣ್ಣವರ ಹೇಳಿದರು.

ನರಗುಂದದ ಎಪಿಎಂಸಿ ಆವರಣದಲ್ಲಿರುವ ಸರ್ಕಾರದ ಬೆಂಬಲ ಯೋಜನೆಯಡಿ ಖರೀದಿ ಮಾಡುವ ಟಿಎಪಿಸಿಎಂಎಸ್ ಹೆಸರು ಖರೀದಿ ಕೇಂದ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.