ಗದಗ: ಗದಗ–ಬೆಟಗೇರಿ ಅವಳಿ ನಗರದಲ್ಲಿ ಮತ್ತೆ ಗುಲ್‌ಮೊಹರ್ ಅರಳಿದೆ. ಉರಿ ಬಿಸಿಲಿನಲ್ಲಿ ನಿಗಿ ಕೆಂಡದಂತೆ ಅರಳಿರುವ ಗುಲ್‌ಮೊಹರ್ ಹೂವುಗಳು ಮನಸ್ಸಿಗೆ ಖುಷಿ ನೀಡುತ್ತಿವೆ. ಇಡೀ ನಗರಕ್ಕೆ ಕಮಾನು ಕಟ್ಟಿದಂತೆ ಅಲ್ಲಲ್ಲಿ ಗುಲ್‌ಮೊಹರ್ ಗಿಡಗಳು ಚೆಲುವಿನ ಚಿತ್ತಾರ ಬರೆದಿವೆ.
ಇಲ್ಲಿನ ರೈಲ್ವೆ ನಿಲ್ದಾಣ ರಸ್ತೆ, ಹಾತಲಗೇರಿ ನಾಕಾ, ಜೆಟಿ ಕಾಲೇಜಿನ ಕ್ಯಾಂಪಸ್, ಎಪಿಎಂಸಿ ಆವರಣ,ಪ್ರವಾಸಿ ಮಂದಿರ ಆವರಣ, ಹಳೆಯ ಪಾಲಾ ಬಾದಾಮಿ ರಸ್ತೆ, ರಿಂಗ್ ರೋಡ್, ಕಳಸಾಪೂರ ರಸ್ತೆ, ರಾಘವೇಂದ್ರ ಮಠ, ಬೆಟಗೇರಿಯ ಹೆಲ್ತ್‌ಕ್ಯಾಂಪ್,ಹುಯಿಲಗೋಳ ರಸ್ತೆ ಹೀಗೆ ಎತ್ತ ಕಣ್ಣಾಡಿಸಿದರೂ ರಸ್ತೆಗಳ ಇಕ್ಕೆಲಗಳಲ್ಲಿ ಗುಲ್‌ಮೊಹರ್‌ನ ವರ್ಣವೈಭವ ಕಣ್ಣಿಗೆ ರಾಚುತ್ತಿದೆ.
ಕಳೆದ ಎರಡು ವಾರಗಳ ಹಿಂದೆ ನಗರದಲ್ಲಿ ಸಂಜೆಯ ವೇಳೆಗೆ ಗಾಳಿ ಸಹಿತ ಮಳೆಯಾಗಿತ್ತು. ಮರುದಿನ ಬೆಳಗಿನ ಜಾವ ರಸ್ತೆಯ ಇಕ್ಕೆಲಗಳಲ್ಲಿ ಗುಲ್‌ಮೊಹರ್‌ನ ಪಕಳೆಗಳು ಉದುರಿಬಿದ್ದು, ರಂಗೋಲಿ ಹಾಕಿದಂತೆ, ವಾಕಿಂಗ್‌ಗೆ ಹೊರಟವರಿಗೆ ಕೆಂಪು ಹಾಸಿಗೆಯ ಸ್ವಾಗತ ಕೋರುತ್ತಿರುವಂತೆ ಕಾಣಿಸುತ್ತಿದ್ದವು.
ಗುಲ್‌ಮೊಹರ್ ಅರಳುವುದು ವರ್ಷಕ್ಕೊಮ್ಮೆ ಮಾತ್ರ. ಏಪ್ರಿಲ್–ಮೇ ತಿಂಗಳಲ್ಲಿ ಅರಳುವ ಈ ಹೂವುಗಳು, ‘ಬೆಂಕಿ ಹೂವು’ ಎಂದೇ ಹೆಸರುವಾಸಿ. ಏಪ್ರಿಲ್–ಮೇ ತಿಂಗಳಲ್ಲಿ ಶಾಲಾ ಮಕ್ಕಳಿಗೆ ರಜೆ ಇರುತ್ತದೆ. ಹೀಗಾಗಿ ವಿಯಟ್ನಾಂನಲ್ಲಿ ಗುಲ್‌ಮೊಹರನ್ನು ಮಕ್ಕಳ ಹೂವು ಎಂದೇ ಕರೆಯುತ್ತಾರೆ. ಮೇ ತಿಂಗಲ್ಲಿ ಅರಳುವುದರಿಂದ ಇದನ್ನು ‘ಮೇ’ ಪ್ಲವರ್ ಎಂದೂ, ಕರೆಯುತ್ತಾರೆ.
ಸೆಪ್ಟೆಂಬರ್ ಅಕ್ಟೋಬರ್ ತಿಂಗಳಿನಲ್ಲಿ ಗುಲ್‌ಮೊಹರ್‌ನ ಬೀಜೋತ್ಪತ್ತಿ ಆರಂಭವಾಗುತ್ತದೆ. ಮಾರ್ಚ್ ವೇಳೆಗೆ ಸಂಪೂರ್ಣ ಎಲೆಗಳನ್ನು ಉದುರಿಸಿಕೊಂಡು ಬೋಳಾಗಿ ಕಾಣುವ ವೃಕ್ಷಗಳು ಏಪ್ರಿಲ್ ಅಂತ್ಯದ ವೇಳೆಗೆ, ರಂಬೆಕೊಂಬೆಗಳಲ್ಲಿ ವಸಂತದ ಚೆಲುವು ಉಕ್ಕಿಸಿಕೊಂಡು ಹೂವು ಬಿಡಲು ಪ್ರಾರಂಭಿಸುತ್ತದೆ. ಮೇ ತಿಂಗಳು ಕಾಲಿಡುತ್ತಿದ್ದಂತೆ, ಕೆಂಪು ಓಕುಳಿ ಚೆಲ್ಲಿದಂತೆ, ಕಲಾವಿದನೊಬ್ಬ ಕ್ಯಾನ್ವಾಸ್ ಮೇಲೆ ಚೆಲ್ಲಿದ ಬಣ್ಣದಂತೆ ಹೂವುಗಳು ಅರಳುತ್ತವೆ.
ಗುಲ್‌ಮೊಹರ್ ವೃಕ್ಷದಿಂದ ಬೇರೆ ಯಾವುದೇ ಉಪಯೋಗವಿಲ್ಲ. ಆದರೆ, ನಗರ ಸೌಂದರ್ಯದ ದೃಷ್ಟಿಯಿಂದಲೂ ಈ ವೃಕ್ಷಗಳನ್ನು ಬೆಳೆಸಲಾಗುತ್ತದೆ. ಸಾಮಾನ್ಯ ಉಷ್ಣಾಂಶ, ಕಡಿಮೆ ನೀರು ಇರುವ ಪ್ರದೇಶದಲ್ಲೂ ಇವು ಬೆಳೆಯುತ್ತವೆ. ಮುಖ್ಯವಾಗಿ ನಗರದೊಳಗಿನ ರಸ್ತೆಗಳ ಪಕ್ಕದಲ್ಲಿ, ಉದ್ಯಾನಗಳಲ್ಲಿ, ಕಾಲೇಜು ಕ್ಯಾಂಪಸ್‌ಗಳಲ್ಲಿ ಅಲಂಕಾರಿಕ ಸಸ್ಯವಾಗಿ ಬೆಳೆಯಲಾಗುತ್ತದೆ. ನಗರದ ಹಲವೆಡೆ ರಸ್ತೆಗಳಲ್ಲಿ ಗುಲ್‌ಮೊಹರ್ ನೆಟ್ಟು ಬೆಳೆಸಲಾಗಿದೆ. ಬಿಂಕದಕಟ್ಟಿ ಕಿರು ಮೃಗಾಲಯದ ಆವರಣದಲ್ಲೂ ಗುಲ್‌ಮೊಹರ್‌ನ ಕೆಂಬಣ್ಣ ತುಂಬಿಕೊಂಡಿದೆ.
ಗುಲ್‌ಮೊಹರ್‌ನ ಸಸ್ಯಶಾಸ್ತ್ರೀಯ ಹೆಸರು ಡೆಲೊನಿಕ್ಸ್ ರೆಜಿಯಾ. ಈ ಹೂವು ನವಿಲು ಗರಿಯ ಆಕಾರದಲ್ಲಿದೆ. ಗುಲ್‌ಮೊಹರ್ ಹೂವನ್ನು ದೇವರಿಗೆ ಅರ್ಪಿಸಲು, ತಲೆಗೆ ಮುಡಿಯಲು ಬಳಸುವುದಿಲ್ಲ. ಆದರೂ, ಈ ಮರಗಳ ಸಾಲಿನ ಕೆಳಗೆ ಹೆಜ್ಜೆ ಹಾಕುತ್ತಾ, ಇದರ ಚೆಲುವನ್ನು ಕಣ್ತುಂಬಿಕೊಳ್ಳುವುದು ಮನಸ್ಸಿಗೆ ಚೇತೋಹಾರಿ ಎನಿಸುತ್ತದೆ. ಕನ್ನಡದ ಎಷ್ಟೋ ಕವಿಗಳು ಗುಲ್‌ಮೊಹರ್ ಚೆಲುವಿನ ಕುರಿತು ಕವಿತೆ ಕಟ್ಟಿದ್ದಾರೆ. ನಗರದ ಬಿರು ಬಿಸಿಲಿನ ನಡುವೆಯೂ ಗುಲ್‌ಮೊಹರ್ ವೃಕ್ಷಗಳು ಮನಸ್ಸಿಗೆ ಮುದ ನೀಡುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.