ಲಕ್ಷ್ಮೇಶ್ವರ: ಅನಾಥ, ನಿರ್ಗತಿಕ, ಬಡ ಹಾಗೂ ಗ್ರಾಮೀಣ ಮಕ್ಕಳಿಗೆ ಊಟ, ವಸತಿಯೊಂದಿಗೆ ಉಚಿತ ಶಿಕ್ಷಣ ನೀಡುತ್ತಿರುವ ತಾಲ್ಲೂಕಿನ ಹೂವಿನಶಿಗ್ಲಿಯ ಗುರುಕುಲ ಶಿಕ್ಷಣ ಸಂಸ್ಥೆ, ಇತರೆ ಶೈಕ್ಷಣಿಕ ಸಂಸ್ಥೆಗಳಿಗೂ ಮಾದರಿಯಾಗಿದೆ.
ಲಿಂಗೈಕ್ಯ ನಿರಂಜನ ಸ್ವಾಮೀಜಿ ಅವರ ಆಶಯದಂತೆ 1996ರಲ್ಲಿ ಗುರುಕುಲ ಶಿಕ್ಷಣ ಸಂಸ್ಥೆ ಅಸ್ತಿತ್ವಕ್ಕೆ ಬಂದಿತು. ಅಂದಿನಿಂದ ಸಾವಿರಾರು ಮಕ್ಕಳಿಗೆ ವಿದ್ಯೆ ನೀಡಿ, ಅವರಿಗೆ ಉತ್ತಮ ಬದುಕು ಕಲ್ಪಿಸಿದ ಹೆಗ್ಗಳಿಕೆ ಈ ಸಂಸ್ಥೆಯದ್ದು. ಗುರು ನಿರಂಜನ ಪೂರ್ವ ಪ್ರಾಥಮಿಕ ಕನ್ನಡ ಕಾನ್ವೆಂಟ್ ಶಾಲೆ, ಗುರುಕುಲ ವಸತಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ, ಗುರು ನಿರಂಜನ ಹಿರಿಯ ಪ್ರಾಥಮಿಕ ಶಾಲೆ ಸೋನಾಳ ಬೀದರ, ಚಿಕ್ಕವೀರೇಶ್ವರ ಕನ್ನಡ ಕಾನ್ವೆಂಟ್ ಶಾಲೆ ಹಂದಿಗನೂರ, ಗುರು ನಿರಂಜನ ವೈದಿಕ ಜ್ಯೋತಿಷ್ಯ ಪಾಠ ಶಾಲೆ, ಗುರು ನಿರಂಜನ ಅನಾಥ, ನಿರ್ಗತಿಕ ಮಕ್ಕಳ ಕುಟೀರ, ಗುರು ನಿರಂಜನ ಬಿಸಿಎಂ ಹಾಸ್ಟೆಲ್ ಮತ್ತು ವಿರಕ್ತಮಠ ಬೋರ್ಡಿಂಗ್ ಈ ಸಂಸ್ಥೆಯಡಿ ಕಾರ್ಯನಿರ್ವಹಿಸುತ್ತಿವೆ.
ದೂರದ ಬೀದರ್, ಬಾಗಲಕೋಟೆ, ವಿಜಯಪುರ, ಹಾವೇರಿ, ಗದಗ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ಮಕ್ಕಳು ಇಲ್ಲಿ ವಸತಿಯೊಂದಿಗೆ ಶಿಕ್ಷಣ ಪಡೆಯುತ್ತಿದ್ದಾರೆ. ಸದ್ಯ ಸಂಸ್ಥೆಯಲ್ಲಿ 300 ಮಕ್ಕಳಿಗೆ ವಸತಿಯೊಂದಿಗೆ ಶಿಕ್ಷಣ ದೊರೆಯುತ್ತಿದೆ. ಸಂಸ್ಥೆಯ ಒಟ್ಟು 650 ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಪ್ರಶಾಂತ ವಾತಾವರಣ, ಅನುಭವಿ ಶಿಕ್ಷಕ ಬಳಗ, ಸುಸಜ್ಜಿತ ಕೊಠಡಿಗಳು, ಗ್ರಂಥಾಲಯ, ವಿಶಾಲವಾದ ಆಟದ ಮೈದಾನ, ವಿದ್ಯಾರ್ಥಿಗಳಿಗೆ ಮಲ್ಲಕಂಬ, ವಿದ್ಯಾರ್ಥಿನಿಯರಿಗೆ ರೋಪ್ ತರಬೇತಿ ಇಲ್ಲಿನ ವಿಶೇಷತೆಗಳು.
ಸರ್ಕಾರದಿಂದ ಯಾವುದೇ ಅನುದಾನ ಸಂಸ್ಥೆಗೆ ಇನ್ನೂ ದೊರೆತಿಲ್ಲ. ಗ್ರಾಮಸ್ಥರು ಊರಿನ ಸಂಸ್ಥೆಯನ್ನು ಬೆಳೆಸುವಲ್ಲಿ ಸ್ವಾಮೀಜಿ ಅವರೊಂದಿಗೆ ಕೈ ಜೋಡಿಸಿದ್ದಾರೆ. ಶಿಕ್ಷಣದಿಂದ ಮಾತ್ರ ಗ್ರಾಮಗಳ ಉದ್ಧಾರ ಎಂಬ ಧ್ಯೇಯ ಹೊಂದಿರುವ ಮಠದ ಈಗಿನ ಪಟ್ಟಾಧ್ಯಕ್ಷರಾಗಿರುವ ಚೆನ್ನವೀರ ಸ್ವಾಮೀಜಿ ಪ್ರತಿನಿತ್ಯ ಮಠದೊಂದಿಗೆ ಶಾಲೆಗಳ ಆಡಳಿತಕ್ಕೆ ಹೆಚ್ಚಿನ ಗಮನ ಕೊಡುತ್ತಿದ್ದಾರೆ. ಸಮಯ ಸಿಕ್ಕಾಗ ಶಾಲೆಗೆ ಹೋಗಿ ಮಕ್ಕಳಿಗೆ ನೈತಿಕ ಶಿಕ್ಷಣದ ಬೋಧನೆಯನ್ನೂ ಮಾಡುತ್ತಾರೆ.
‘ಹೂವಿನಶಿಗ್ಲಿ ಮಠವು ಗುಣಮಟ್ಟದ ಶಿಕ್ಷಣ ನೀಡುವ ಸಂಸ್ಥೆ ಕಟ್ಟಿ ಸಾವಿರಾರು ಮಕ್ಕಳಿಗೆ ಶಿಕ್ಷಣ ನೀಡುತ್ತಿದೆ’ ಎಂದು ವೀರಣ್ಣ ಪವಾಡದ ಹೇಳಿದರು.
‘ನಾಲ್ಕು ವರ್ಷಗಳಿಂದ ಇಲ್ಲಿ ವಿದ್ಯೆ ಕಲಿಯುತ್ತಿದ್ದೇವೆ’ ಎಂದು 9ನೇ ತರಗತಿಯಲ್ಲಿ ಓದುತ್ತಿರುವ ಈರಯ್ಯ ಹಿರೇಮಠ ಮತ್ತು ಜೋಗಯ್ಯ ಗಡ್ಡದೇವರಮಠ ಖುಷಿಯಿಂದ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.