ADVERTISEMENT

ಸರ್ಕಾರ ಕನ್ನಡ ಶಾಲೆ ಬೆಂಬಲಕ್ಕೆ ನಿಲ್ಲಲಿ

ಗುರುವಂದನಾ ಸಮಾರಂಭ: ಶಾಂತಲಿಂಗ ಶ್ರೀ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 15:53 IST
Last Updated 19 ಜೂನ್ 2024, 15:53 IST
ನರಗುಂದ ತಾಲ್ಲೂಕಿನ ಭೈರನಹಟ್ಟಿಯ ದೊರೆಸ್ವಾಮಿ ವಿರಕ್ತಮಠದಲ್ಲಿ ಭೈರನಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 2002-03ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನಾ ಸಮಾರಂಭ ನಡೆಯಿತು
ನರಗುಂದ ತಾಲ್ಲೂಕಿನ ಭೈರನಹಟ್ಟಿಯ ದೊರೆಸ್ವಾಮಿ ವಿರಕ್ತಮಠದಲ್ಲಿ ಭೈರನಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 2002-03ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನಾ ಸಮಾರಂಭ ನಡೆಯಿತು   

ನರಗುಂದ: ಗಡಿಭಾಗದ ಕನ್ನಡ ಮಾಧ್ಯಮ ಶಾಲೆಗಳನ್ನು ಮೂಲೆಗುಂಪು ಮಾಡುವ ಹುನ್ನಾರ ಮಹಾರಾಷ್ಟ್ರ ಸರ್ಕಾರ ನಿರಂತರ ಮಾಡುತ್ತಲೇ ಇದೆ. ಈಗ ಮತ್ತೆ ತನ್ನ ಕುಹಕ ಬುದ್ದಿಯನ್ನು ತೋರಿಸುತ್ತಿದೆ. ಅದರ ವಿರುದ್ಧ ರಾಜ್ಯ ಸರ್ಕಾರ ಕಾನೂನು ಹೋರಾಟ ಮಾಡುವುದರ ಮೂಲಕ ಕನ್ನಡ ಮಕ್ಕಳ ಹಿತ ಕಾಪಾಡಲು ಮುಂದಾಗಬೇಕು’ ಎಂದು ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀ ಆಗ್ರಹಿಸಿದರು.

ತಾಲ್ಲೂಕಿನ ಭೈರನಹಟ್ಟಿಯ ದೊರೆಸ್ವಾಮಿ ವಿರಕ್ತಮಠದಲ್ಲಿ ಬುಧವಾರ ಭೈರನಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 2002-03ನೇ ಸಾಲಿನ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಸಮಾರಂಭದಲ್ಲಿ ಮಾತನಾಡಿದರು.

‘ಕನ್ನಡವನ್ನೇ ಅಧಿಕವಾಗಿ ಮಾತನಾಡುವ ಸಾಂಗ್ಲಿ, ಸೊಲ್ಲಾಪೂರ ಜಿಲ್ಲೆಗಳ 250ಕ್ಕೂ ಹೆಚ್ಚು ಗ್ರಾಮಗಳ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮರಾಠಿ ಭಾಷೆಯ ಶಿಕ್ಷಕರನ್ನು ನೇಮಿಸುತ್ತಿರುವ ಮಾಹಾರಾಷ್ಟ್ರ ಸರ್ಕಾರದ ನಡೆ ಖಂಡನೀಯ. ಪ್ರತಿ ವಿಷಯದಲ್ಲೂ ಕನ್ನಡಿಗರನ್ನು ಕೆಣಕುತ್ತಿರುವ ಮಹಾರಾಷ್ಟ್ರ ಈಗ ಮತ್ತೆ ಕನ್ನಡ ಮಕ್ಕಳಿರುವ ಶಾಲೆಗಳ ಮೇಲೆ ಸವಾರಿ ಮಾಡುತ್ತಿದೆ. ಇದಕ್ಕೆ ಪ್ರತಿಯಾಗಿ ನಮ್ಮ ಮುಖ್ಯಮಂತ್ರಿಗಳು ಕನ್ನಡಿಗರಿಗೆ ಬೆನ್ನೆಲುಬಾಗಿ ನಿಂತು ಗಡಿಭಾಗದ ಕನ್ನಡ ಶಾಲೆಗಳನ್ನು ಕಾಪಾಡಬೇಕು. ಇಲ್ಲವಾದರೆ ಕನ್ನಡ ಶಾಲೆಗಳು ನಶಿಸಿ ಹೋಗಲಿವೆ’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

ಗುರುವಂದನೆ ಸ್ವೀಕರಿಸಿ ಮಾತನಾಡಿದ ಶಿಕ್ಷಕ ಆರ್.ಆರ್ ಕಟ್ಟಿ, ‘ವಿದ್ಯೆಗೆ ವಿನಯವೇ ಭೂಷಣ.  ಓದಿನ ಜೊತೆಗೆ ನಮ್ಮಲ್ಲಿರುವ ಸಂಸ್ಕಾರವೂ ಮುಖ್ಯ. ಎಲ್ಲ ವೃತ್ತಿಗಳಿಂತ ಶಿಕ್ಷಕ ವೃತ್ತಿಗೆ ಸಮಾಜದಲ್ಲಿ ಉತ್ತಮ ಗೌರವವಿದೆ. ಶಿಕ್ಷಕರಾದವರು ತಮ್ಮ ವೃತ್ತಿಗೆ ತಕ್ಕಂತೆ ತಮ್ಮ ವ್ಯಕ್ತಿತ್ವವನ್ನು ಮೈಗೂಡಿಸಿಕೊಳ್ಳಬೇಕು. ತಾವು ಪಾಠ ಮಾಡಿದ ಮಕ್ಕಳು ಉತ್ತಮ ನಾಗರಿಕರಾದರೆ ಅದುವೇ ಶಿಷ್ಯರು ತಮ್ಮ ಗುರುಗಳಿಗೆ ನೀಡುವ ಅತಿ ದೊಡ್ಡ ಉಡುಗೊರೆ’ ಎಂದರು.

ಶಿಕ್ಷಕರಾದ ಎಸ್.ಎ ಭಜಂತ್ರಿ, ಸಿ.ಎಸ್ ಜಗಾಪೂರ, ಎನ್.ವೈ ಪಾಟೀಲ, ವೈ.ಆರ್ ಬಸಿಡೋಣಿ, ಆರ್.ಆರ್ ಕಟ್ಟಿ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.

ನಿವೃತ್ತ ಶಿಕ್ಷಕ ವೀರಯ್ಯ ಸಾಲಿಮಠ, ಶರಣಯ್ಯ ಕೊಣ್ಣೂರಮಠ, ದ್ಯಾಮನಗೌಡ ಪಾಟೀಲ, ಸುರೇಶ ಐನಾಪೂರ, ಈಶ್ವರ ಕೀಲಿಕೈ, ಕವಿತಾ ಬಡಿಗೇರ, ನಿಂಗಮ್ಮ ಐನಾಪೂರ, ಸುನೀತಾ ತೆಗ್ಗಿನಮನಿ, ಭೀಮವ್ವ ಈರನಗೌಡ್ರ, ನೀಲಪ್ಪ ದಂಡಿನ, ಶಿವಾನಂದ ಬೆನ್ನೂರ, ರಾಘವೇಂದ್ರ ಬಡಿಗೇರ ಇದ್ದರು. ಪ್ರೇಮಾ ಮನೇನಕೊಪ್ಪ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.