ADVERTISEMENT

ಶಿರಹಟ್ಟಿ | 7 ದಶಕಗಳಿಂದ ಹೋರಾಟ: ಕಂದಾಯವಾಗದ ಗ್ರಾಮ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2024, 5:55 IST
Last Updated 30 ಅಕ್ಟೋಬರ್ 2024, 5:55 IST
ಚನ್ನಪಟ್ಟಣ ಗ್ರಾಮದಲ್ಲಿನ ಕಚ್ಚಾ ರಸ್ತೆಗಳು
ಚನ್ನಪಟ್ಟಣ ಗ್ರಾಮದಲ್ಲಿನ ಕಚ್ಚಾ ರಸ್ತೆಗಳು   

ಶಿರಹಟ್ಟಿ: ಕಂದಾಯ ಗ್ರಾಮ ಸೇರ್ಪಡೆಗೆ ಚನ್ನಪಟ್ಟಣದ ಗ್ರಾಮಸ್ಥರು 70 ವರ್ಷಗಳಿಂದ ಸತತ ಹೋರಾಟ ನಡೆಸುತ್ತಿದ್ದಾರೆ. ಅವರ ಮನವಿಗೆ ಕ್ಯಾರೇ ಎನ್ನದ ಸರ್ಕಾರಗಳ ಬೇಜವಾಬ್ದಾರಿಯಿಂದಾಗಿ ಈಡೀ ಗ್ರಾಮವೇ ಅಸ್ಪೃಶ್ಯತೆ ಅನುಭವಿಸುವಂತಾಗಿದೆ.

ತಾಲ್ಲೂಕಿನ ಮಾಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚನ್ನಪಟ್ಟಣ ಪುಟ್ಟ ಗ್ರಾಮ. 120 ಮನೆಗಳನ್ನು ಹೊಂದಿದ ಈ ಗ್ರಾಮದಲ್ಲಿ 600-700 ಜನಸಂಖ್ಯೆ ಇದೆ. ಒಬ್ಬ ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಅಚ್ಚುಕಟ್ಟಾಗಿ ಚುನಾವಣೆ ನಡೆಸುವ ಸರ್ಕಾರ ಗ್ರಾಮವನ್ನು ಕಂದಾಯವನ್ನಾಗಿ ಮಾಡುವ ಗೋಜಿಗೆ ಇದುವರೆಗೂ ಹೋಗಿಲ್ಲ. ಕಂದಾಯವಲ್ಲದ ಗ್ರಾಮ ಆಗಿರುವುದರಿಂದ ವಿದ್ಯುತ್‌, ರಸ್ತೆ, ನೀರಿನ ಸಂಪರ್ಕ, ಚರಂಡಿ, ಸುಸಜ್ಜಿತ ಶಾಲಾ ಕಟ್ಟಡ ಸೇರಿದಂತೆ ಮೂಲ ಸೌಕರ್ಯ ಸಿಗದೇ ಗ್ರಾಮಸ್ಥರು ಅಕ್ಷರಶಃ ನರಕಯಾತನೆ ಅನುಭವಿಸುತ್ತಿದ್ದಾರೆ.

ನಿರಂತರ ಹೋರಾಟ: ಚನ್ನಪಟ್ಟಣವನ್ನು ಕಂದಾಯ ಗ್ರಾಮವನ್ನಾಗಿ ಸೇರ್ಪಡೆ ಮಾಡುವಂತೆ ಸುಮಾರು 1975ರಿಂದ ಗ್ರಾಮಸ್ಥರು ಮನವಿ ಹಾಗೂ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಹಲವು ಶಾಸಕರು, ಎಂಪಿ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಚುನಾವಣೆಯಲ್ಲಿ ಕೇವಲ ಮತ ಭಿಕ್ಷೆ ಕೇಳಲು ಬರುತ್ತಾರೆ. ಗ್ರಾಮಸ್ಥೆರಲ್ಲ ಒಕ್ಕೊರಲಿನಿಂದ ಚುನಾವಣಾ ಬಹಿಷ್ಕಾರ ಮಾಡಿದರೆ ಅಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ಮೂಗಿಗೆ ತುಪ್ಪ ಸವರುವಂತೆ ಹುಸಿ ಭರವಸೆ ನೀಡುತ್ತಾರೆ. ಈ ವಿಷಯದಲ್ಲಿ ಗ್ರಾಮಸ್ಥರು ಯಾರನ್ನು ನಂಬಿ ಜೀವನ ನಡೆಸಬೇಕು ಎನ್ನುವುದು ದೊಡ್ಡ ತಲೆನೋವು ಆಗಿದೆ.

ADVERTISEMENT

ಕಂದಾಯ ಗ್ರಾಮ ಏಕೆ ಆಗುತ್ತಿಲ್ಲ?: ಚನ್ನಪಟ್ಟಣ ಗ್ರಾಮವು ಕಾಯ್ದಿರಿಸಿದ ಅರಣ್ಯ ಪ್ರದೇಶ ವ್ಯಾಪ್ತಿಯ ಸರ್ವೆ ನಂ 50 ಹಾಗೂ 51ರಲ್ಲಿ ಇದೆ. ಕಂದಾಯ ಇಲಾಖೆ ವ್ಯಾಪ್ತಿಯ ಭೂಮಿಯನ್ನು ಮಾತ್ರ ಕಂದಾಯ ಗ್ರಾಮವನ್ನಾಗಿ ಮಾರ್ಪಡಿಸಲು ಕೆಲವು ಷರತ್ತಬದ್ಧ ನಿಯಮಗಳನ್ನು ರೂಪಿಸಿದ್ದಾರೆಯೇ ಹೊರತು, ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಬರುವ ಪ್ರದೇಶವನ್ನು ಹೇಗೆ ಕಂದಾಯ ಗ್ರಾಮವನ್ನಾಗಿ ಮಾಡಬೇಕೆಂಬ ನಿಯಮಗಳನ್ನು ರೂಪಿಸಿಲ್ಲ. ಒಂದು ಬಾರಿ ಅರಣ್ಯ ಇಲಾಖೆ ಭೂಮಿ ಎಂದು ಆದೇಶವಾದರೆ‌ ಮರಳಿ ಕಂದಾಯ ಪ್ರದೇಶವಾಗಲು ಕಷ್ಟ ಸಾಧ್ಯ. 1980ರ ಅರಣ್ಯ ಕಾಯ್ದೆ ಪ್ರಕಾರ ಅರಣ್ಯ ಪ್ರದೇಶವನ್ನು ಕಂದಾಯ ಗ್ರಾಮವನ್ನಾಗಿ ಮಾಡಬೇಕಾದರೆ ಕಡ್ಡಾಯವಾಗಿ ಕೇಂದ್ರ ಸರ್ಕಾರದ ಅನುಮತಿ ಪಡೆಯಬೇಕು.

ಇನ್ನೊಂದೆಡೆ ಇದೇ ಕಂದಾಯ ಇಲಾಖೆ ಇದೇ ಗ್ರಾಮದ ಕೆಲವು ರೈತರಿಗೆ 1972ರಲ್ಲಿಯೇ ಗ್ರಾಮದ ಜಮೀನು ಸಾಗುವಳಿ ಮಾಡಿದ್ದಾರೆ ಎಂದು ಹಕ್ಕುಪತ್ರ ವಿತರಣೆ ಮಾಡಿದೆ. ಇದನ್ನು ಅರಣ್ಯ ಕಾಯ್ದೆ ಪ್ರಕಾರ ಹಂಚಿಕೆ ಮಾಡಿದ್ದು, ಇದು ಕೇವಲ ಜಮೀನುಗಳಿಗೆ ಮಾತ್ರ ಸೀಮಿತ, ವಸತಿಗೆ ಪರವಾನಗಿ ನೀಡಿಲ್ಲ. ಒಂದು ವೇಳೆ ಕಂದಾಯ ಗ್ರಾಮ ಆಗಬೇಕಾದರೆ ಕಂದಾಯ ಇಲಾಖೆಯವರು ಎಫ್‌ಸಿಯಲ್ಲಿ ಅರ್ಜಿ ಸಲ್ಲಿಸಿ, ಇಷ್ಟು ಜಮೀನಿನಲ್ಲಿ ಇಷ್ಟು ಜನರು ವಾಸವಾಗಿದ್ದಾರೆ ಎಂಬ ಮಾಹಿತಿ ನೀಡಬೇಕು. ಅಲ್ಲದೇ ಇದಕ್ಕೆ ಪರ್ಯಾಯವಾಗಿ ಕಂದಾಯ ಇಲಾಖೆ ಗ್ರಾಮವಿರುವ ಅಳತೆಯ ಜಮೀನನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಬೇಕು. ಸರ್ಕಾರ ಮನಸ್ಸು ಮಾಡಿದರೆ ಇದೇನು ಕಷ್ಟದ ಕೆಲಸವಲ್ಲ ಎಂಬುದು ಗ್ರಾಮಸ್ಥರ ಒಕ್ಕೊರಲಿನ ಅಳಲು.

ಫ್ಲೋರೈಡ್‌ಯುಕ್ತ ನೀರು: ಚನ್ನಪಟ್ಟಣ ಕಂದಾಯ ಗ್ರಾಮವಲ್ಲದೇ  ಇರುವುದರಿಂದ ಪಂಚಾಯಿತಿಯಿಂದ ನೀರಿನ ಪೂರೈಕೆ ಆಗುತ್ತಿಲ್ಲ. ಫ್ಲೋರೈಡ್‌ಯುಕ್ತ ಬೊರವೆಲ್ ನೀರನ್ನೇ ಆಶ್ರಯಿಸಿದ್ದಾರೆ. ಕೈ ಬೋರಿನ ನೀರು ಶೇಖರಣೆ ಮಾಡಿದ ಕೆಲವೇ ಗಂಟೆಗಳಲ್ಲಿ ಮೇಲ್ಭಾಗದಲ್ಲಿ ಫ್ಲೋರೈಡ್ ಪದರು ಬೆಳೆಯುತ್ತದೆ. ನಿತ್ಯ ಈ ನೀರನ್ನು ಸೇವಿಸುತ್ತಿರುವುದು ಬಹುತೇಕ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಯುವಕರಲ್ಲಿಯೇ ಮಂಡಿನೋವು, ಸೊಂಟನೋವು, ಹಲ್ಲಿನ ಸಮಸ್ಯೆಗಳಂತಹ ರೋಗಗಳು ಗ್ರಾಮಸ್ಥರನ್ನು ಚಿಂತಾಕ್ರಾಂತರನ್ನಾಗಿ ಮಾಡುತ್ತಿವೆ. ಆದರೆ ವಿಧಿ ಇಲ್ಲದೇ ಸಂಬಂಧಪಟ್ಟ ಜನಪ್ರತಿನಿಧಿಗಳನ್ನು ಶಪಿಸುತ್ತ ಈ ನೀರನ್ನು ಬಳಕೆ ಮಾಡುವ ಅನಿವಾರ್ಯತೆ ಗ್ರಾಮಸ್ಥರಿಗೆ ಬಂದೊದಗಿದೆ.

ಮೂಲ ಸೌಕರ್ಯಗಳ ಕೊರತೆ: ಸರ್ಕಾರದ ಯಾವುದೇ ಮೂಲ ಸೌಲಭ್ಯಗಳು ಗ್ರಾಮಕ್ಕೆ ದೊರೆಯುತ್ತಿಲ್ಲ. ಸರಿಯಾದ ರಸ್ತೆ ಇಲ್ಲದೆ ಕಚ್ಚಾ ರಸ್ತೆಯಲ್ಲಿಯೇ ಸಂಚಾರ, ಚರಂಡಿಗಳಿಲ್ಲದೇ ತ್ಯಾಜ್ಯ ನೀರು ರಸ್ತೆಗೆ ಬಿಡಲಾಗುತ್ತದೆ. ಕೈಬೋರಿನ ನೀರು ಸೇವನೆ, ವಿದ್ಯುತ್ ತೊಂದರೆ, ಗುಣಮಟ್ಟದ ಶಿಕ್ಷಣದ ಕೊರತೆಯಂತಹ ಎಲ್ಲ ಸಮಸ್ಯೆಗಳು ಕಾಡುತ್ತಿವೆ.

ಗುಳೆ ಹೊಗುವುದು ಅನಿವಾರ್ಯ: ಚನ್ನಪಟ್ಟಣ ಗ್ರಾಮಸ್ಥರಿಗೆ ಒಪ್ಪತ್ತಿನ ಗಂಜಿ ಸಿಗಬೇಕಾದರೆ ಗುಳೆ ಹೋಗುವುದು ಅನಿವಾರ್ಯವಾಗಿದೆ. ದೂರದ ಗೋವಾ, ಮಂಗಳೂರು, ಬೆಂಗಳೂರಿನಂತಹ ದೊಡ್ಡ ನಗರಗಳಿಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ನರೇಗಾ ಯೋಜನೆಯ ಕನಿಷ್ಠ ಜಾಬ್ ಕಾರ್ಡ್‌ಗಳನ್ನು ಸಹ ಗ್ರಾಮಸ್ಥರಿಗೆ‌ ನೀಡದೇ ಅವರು ಹೊರರಾಜ್ಯಗಳಿಗೆ ಕೂಲಿ ಕೆಲಸಕ್ಕೆ ಹೋಗುವಂತಾಗಿದೆ. ಇಂತಹ ಕೆಟ್ಟ ಪರಿಸ್ಥಿತಿಯಲ್ಲಿರುವ ಬದಲಿಗೆ ನಮ್ಮನ್ನು ಆದಿವಾಸಿಗಳಂತೆ ಕೈ ಬಿಟ್ಟು ಬಿಡಿ ಎಂಬುದು ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಚನ್ನಪಟ್ಟಣ ಗ್ರಾಮವು ಕಾಯ್ದಿಟ್ಟ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಬರುತ್ತಿದ್ದು ಈ ಕುರಿತು ಅರಣ್ಯ ಹಕ್ಕು ಸಮಿತಿಯಲ್ಲಿ ಮಂಡಿಸಿ ಮೇಲಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸಲಾಗಿದೆ
ಅನಿಲ ಬಡಿಗೇರ ತಹಶೀಲ್ದಾರ್‌
ಚನ್ನಪಟ್ಟಣ ಅರಣ್ಯ ಪ್ರದೇಶದಲ್ಲಿದ್ದು ತಹಶೀಲ್ದಾರರೊಂದಿಗೆ ಜಂಟಿ ಸರ್ವೆ ಮಾಡಿ ಮುಂದಿನ ಕ್ರಮಕ್ಕಾಗಿ ಮಾಹಿತಿಯನ್ನು ಮೇಲಧಿಕಾರಿಗಳಿಗೆ ಸಲ್ಲಿಸಲಾಗಿದೆ
ರಾಮಪ್ಪ ಪೂಜಾರ ವಲಯ ಅರಣ್ಯ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.