ADVERTISEMENT

ಲಕ್ಷ್ಮೇಶ್ವರ | ಮಳೆಗೆ ಮೊಳಕೆಯೊಡೆದ ಗೋವಿನಜೋಳ

ಲಕ್ಷ್ಮೇಶ್ವರ 14,820 ಹೆಕ್ಟೇರ್‌ನಲ್ಲಿ ಗೋವಿನಜೋಳ ಬಿತ್ತನೆ

ನಾಗರಾಜ ಎಸ್‌.ಹಣಗಿ
Published 16 ಅಕ್ಟೋಬರ್ 2024, 5:33 IST
Last Updated 16 ಅಕ್ಟೋಬರ್ 2024, 5:33 IST
ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ ವಾರದಿಂದ ಸುರಿಯುತ್ತಿರುವ ಮಳೆಗೆ ಸೂರಣಗಿ ಭಾಗದಲ್ಲಿ ಗೋವಿನಜೋಳದ ತೆನೆಗಳಲ್ಲಿ ಮೊಳಕೆ ಬಂದಿರುವುದು
ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ ವಾರದಿಂದ ಸುರಿಯುತ್ತಿರುವ ಮಳೆಗೆ ಸೂರಣಗಿ ಭಾಗದಲ್ಲಿ ಗೋವಿನಜೋಳದ ತೆನೆಗಳಲ್ಲಿ ಮೊಳಕೆ ಬಂದಿರುವುದು   

ಲಕ್ಷ್ಮೇಶ್ವರ: ಕಳೆದ ವಾರದಿಂದ ಬಿಟ್ಟೂಬಿಡದೆ ಸುರಿಯುತ್ತಿರುವ ಮಳೆಯಿಂದ ಗೋವಿನಜೋಳ ಬೆಳೆ ಕಟಾವಿಗೆ ಅಡ್ಡಿಯಾಗಿದ್ದು, ಕೆಲವೆಡೆ ಬೆಳೆ ಮೊಳಕೆಯೊಡೆದ ಕಾರಣ ರೈತರು ಆತಂಕದಲ್ಲಿದ್ದಾರೆ.

ಖರ್ಚು ಕಡಿಮೆ, ಲಾಭ ಹೆಚ್ಚು ಎಂಬ ಕಾರಣದಿಂದ ಈ ಬಾರಿ ತಾಲ್ಲೂಕಿನಲ್ಲಿ 14,820 ಹೆಕ್ಟೇರ್‌ನಲ್ಲಿ ಗೋವಿನಜೋಳ ಬಿತ್ತನೆಯಾಗಿದೆ. ಉತ್ತಮ ತೇವಾಂಶದಿಂದಾಗಿ ಬೆಳೆಯೂ ಚೆನ್ನಾಗಿ ಬಂದಿದೆ. ಆದರೆ, ಕೊಯ್ಲು ಮಾಡುವ  ಸಂದರ್ಭದಲ್ಲಿ ಮಳೆ ಸುರಿಯುತ್ತಿದ್ದು, ಒಕ್ಕಣೆ ಮಾಡಲು ಅಡಚಣೆಯಾಗಿದೆ. ಭೂಮಿಗೆ ಬಿದ್ದ ತೆನೆಗಳಿಂದ ಗೋವಿನಜೋಳ ಮೊಳಕೆಯೊಡೆಯುತ್ತಿದ್ದು, ಇದು ರೈತರ ಆತಂಕವನ್ನು ಹೆಚ್ಚಿಸಿದೆ.

‘ಈ ಸಮಯಕ್ಕಾಗಾಗಲೇ ಗೋವಿನಜೋಳ ಮಾರಾಟವಾಗುತ್ತಿತ್ತು. ಆದರೆ, ಮಳೆ ರೈತರ ಕೈಕಟ್ಟಿ ಹಾಕಿದೆ.  ತಾಲ್ಲೂಕಿನಲ್ಲಿ ಕಟಾವಿಗೆ ಬಂದಿರುವ ಗೋವಿನಜೋಳದ ಹೊಲಗಳೇ ಕಂಡುಬರುತ್ತಿವೆ. ಕಣಗಳಲ್ಲಿ ತಾಡಪತ್ರಿ ಮುಚ್ಚಿದ ಗೋವಿನಜೋಳದ ರಾಶಿಯೂ ಇದೆ. ಒಕ್ಕಣೆ ಮಾಡಲು ಮಳೆ ನಿಲ್ಲುವುದನ್ನೇ ಕಾಯುತ್ತಿದ್ದೇವೆ’ ಎಂದು ಸೂರಣಗಿ ಗ್ರಾಮದ ರೈತ ಶರಣಪ್ಪ ಇಚ್ಚಂಗಿ ಹೇಳಿದರು.

ADVERTISEMENT

‘ಗಾಳಿ ಸಹಿತ ಬಿರುಸಿನ ಮಳೆಗೆ ಕೊಯ್ಲಿಗೆ ಬಂದಿದ್ದ ಗೋವಿನಜೋಳದ ತೆನೆಗಳು ಮುರಿದು ಬಿದ್ದು, ಅವು ಮೊಳಕೆಯೊಡೆಯುತ್ತಿವೆ. ಮೊಳಕೆಯೊಡೆದ ಗೋವಿನಜೋಳಕ್ಕೆ ದರ ಕಡಿಮೆ. ಇದೇ ರೀತಿಯ ವಾತಾವರಣ ಮುಂದುವರಿದರೆ ಬೆಳೆಗಾರರಿಗೆ ನಷ್ಟ ತಪ್ಪಿದ್ದಲ್ಲ’ ಎಂದು ತಿಳಿಸಿದರು.

ತೆನೆ ಮುರಿಯದಂತೆ ಸಲಹೆ

‘ಇನ್ನೂ ಮೂರು ದಿನ ಮಳೆ ಸುರಿಯುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ರೈತರು ಗೋವಿನಜೋಳ ತೆನೆಗಳನ್ನು ಮುರಿಯಬಾರದು. ಈಗಾಗಲೇ ಮುರಿದ ತೆನೆಗಳು ತಂಪಾಗದಂತೆ ತಾಡಪತ್ರಿ ಮುಚ್ಚಬೇಕು’ ಎಂದು ಲಕ್ಷ್ಮೇಶ್ವರದ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಚಂದ್ರಶೇಖರ ನರಸಮ್ಮನವರ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.