ಮುಂಡರಗಿ: ‘ಅಬಕಾರಿ ಇಲಾಖೆ ಕಚೇರಿ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ವೇಳೆ ಅಬಕಾರಿ ನಿರೀಕ್ಷಕಿ ಸುವರ್ಣಾ ಕೋಟೆ ಮತ್ತು ಸಿಬ್ಬಂದಿ ಬೂಟು ಧರಿಸಿ ಧ್ವಜಾರೋಹಣ ನೆರವೇರಿಸುವ ಮೂಲಕ ಧ್ವಜಾರೋಹಣದ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ರಾಷ್ಟ್ರ ಹಾಗೂ ರಾಷ್ಟ್ರಧ್ವಜಕ್ಕೆ ಅವಮಾನಿಸಿದ್ದಾರೆ’ ಎಂದು ದಲಿತ ಸಂಘರ್ಷ ಸಮಿತಿ ಮುಖಂಡ ಲಕ್ಷ್ಮಣ ತಗಡಿನಮನಿ ಆರೋಪಿಸಿದ್ದಾರೆ.
‘ಧ್ವಜಾರೋಹಣದ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರದ ಜೊತೆಗೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಇಡಬೇಕಿತ್ತು. ಅವರು ಇಟ್ಟಿಲ್ಲ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.
ಇದರ ಬಗ್ಗೆ ಪ್ರತಿಕ್ರಿಯಿಸಿರುವ ಅಬಕಾರಿ ನಿರೀಕ್ಷಕಿ ಸುವರ್ಣಾ ಕೋಟೆ, ‘ಖಾಕಿ ಸಮವಸ್ತ್ರ ಧರಿಸಿದ ಯಾವುದೇ ಅಧಿಕಾರಿಗಳು ಬೂಟು ಧರಿಸಿ ಧ್ವಜಾರೋಹಣ ಮಾಡಬಹುದು. ನಮ್ಮ ಇಲಾಖೆ ಸಿಬ್ಬಂದಿ ಕುಟುಂಬಸ್ಥರೊಬ್ಬರಿಗೆ ಅಪಘಾತವಾಗಿತ್ತು. ಅದರ ಗಡಿಬಿಡಿಯಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಚಿತ್ರ ಇಡುವುದು ಮರೆತು ಹೋಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.