ADVERTISEMENT

ಅವ್ಯವಸ್ಥೆಯ ತಾಣವಾದ ಹೊಳೆಆಲೂರು

ಸಂಚಾರ ಸಮಸ್ಯೆಗೆ ಕಾರಣವಾದ ಸಂತೆ: ಹಲವೆಡೆ ಹದಗೆಟ್ಟ ರಸ್ತೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2024, 5:43 IST
Last Updated 12 ಜೂನ್ 2024, 5:43 IST
ಹೊಳೆಆಲೂರು ಗ್ರಾಮದ ಪ್ರಮುಖ ಬೀದಿಯಲ್ಲಿ ಬಿದ್ದಿರುವ ತ್ಯಾಜ್ಯ
ಹೊಳೆಆಲೂರು ಗ್ರಾಮದ ಪ್ರಮುಖ ಬೀದಿಯಲ್ಲಿ ಬಿದ್ದಿರುವ ತ್ಯಾಜ್ಯ   

ಹೊಳೆ ಆಲೂರು: ಯೆಚ್ಚರೇಶ್ವರ ಸ್ವಾಮೀಜಿ ಪಾವನ ಕ್ಷೇತ್ರ ಎಂದೇ ಹೆಸರಾದ ಗ್ರಾಮ ಹೊಳೆಆಲೂರು ಇಂದು ಅಕ್ಷರಶಃ ಕೊಳಚೆ ಪ್ರದೇಶವಾಗಿದೆ. ಗ್ರಾಮದ ಜನಸಂಖ್ಯೆ ಮತ್ತು ವ್ಯಾಪ್ತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ, ಗ್ರಾಮದ ಬೆಳವಣಿಗೆಗೆ ತಕ್ಕಂತೆ ಮೂಲಸೌಕರ್ಯ ಕಲ್ಪಿಸುವಲ್ಲಿ ಗ್ರಾಮ ಪಂಚಾಯ್ತಿ ವಿಫಲವಾಗಿದೆ.

ಗ್ರಾಮದ ಸಂತೆ ಬಜಾರ್‌ನಿಂದಾಗಿ ಪ್ರತಿ ಶುಕ್ರವಾರ ಗ್ರಾಮದಲ್ಲಿ ವಿಪರೀತ ಎನ್ನುವಷ್ಟು ಸಂಚಾರ ಸಮಸ್ಯೆಯಾಗುತ್ತಿದ್ದರೂ ಗ್ರಾಮ ಪಂಚಾಯ್ತಿ ಮಾತ್ರ ವಾರದ ಸಂತೆ ಸ್ಥಳಾಂತರಿಸಲು ಸಿದ್ಧವಿಲ್ಲ. ಸಂತೆ ಬಜಾರ್‌ನ ಶೌಚಾಲಯಗಳು ಗಬ್ಬೆದ್ದು ನಾರುತ್ತಿದ್ದರೂ ಪಂಚಾಯ್ತಿ ಆಡಳಿತ ವ್ಯವಸ್ಥೆ ಮಾತ್ರ ತಲೆಕೆಡಿಸಿಕೊಳ್ಳುತ್ತಿಲ್ಲ. ಪಕ್ಕದಲ್ಲಿ ಸರ್ಕಾರಿ ಶಾಲೆ ಇದ್ದು, ಗ್ರಾಮದ ವ್ಯಾಪಾರಸ್ಥರು, ಶಾಲಾ ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ಇದೆ.

ಗ್ರಾಮದ ಮಧ್ಯಭಾಗದಲ್ಲಿರುವ ರೈಲ್ವೆ ಕೆಳಸೇತುವೆ ಮಳೆನೀರಿನಿಂದ ತುಂಬಿದ್ದು ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳನ್ನು ಹರಡುವ ತಾಣವಾಗಿದೆ. ಆದರೂ, ಸ್ಥಳೀಯ ಆಡಳತಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲು ಕ್ರಮ ಕೈಗೊಳ್ಳುತ್ತಿಲ್ಲ. ವಾಹನ ಸವಾರರು, ಪಾದಚಾರಿಗಳು ಕೊಳಚೆ ನೀರಿನಲ್ಲಿ ಹಾದು ಹೋಗಬೇಕಾಗಿದೆ.

ADVERTISEMENT

ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಮೇಘರಾಜ ನಗರಕ್ಕೆ ಹೋಗುವ 8ನೇ ವಾರ್ಡ್ ರಸ್ತೆ ಕೂಡ ಸಂಪೂರ್ಣ ಹಾಳಾಗಿದ್ದು, ದ್ವಿಚಕ್ರ ವಾಹನಗಳು ಅಪಘಾತಕ್ಕೆ ಒಳಗಾಗುತ್ತಿವೆ. ಮಳೆಗಾಲದಲ್ಲಿ ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ಕೂಡಲೇ ಗ್ರಾಮ ಪಂಚಾಯ್ತಿ ಇತ್ತಕಡೆ ಗಮನ ಹರಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ಗ್ರಾಮದ ಎಪಿಎಂಸಿ ಮಾರುಕಟ್ಟೆಯ ಮುಖ್ಯದ್ವಾರದ ಮುಂದೆಯೇ ಎಗ್ ರೈಸ್ ಅಂಗಡಿಯವರು, ಹೋಟೆಲ್, ಅಂಗಡಿಯವರು, ಕಟಿಂಗ್ ಶಾಪ್‌ನವರು ತ್ಯಾಜ್ಯಗಳನ್ನು ತಂದು ಸುರಿದು ಮಲಿನಗೊಳಿಸುತ್ತಿದ್ದಾರೆ. ಇದು ಗ್ರಾಮದಲ್ಲಿ ಅನೈರ್ಮಲ್ಯ ನಿರ್ಮಾಣಕ್ಕೆ ಕಾರಣವಾಗಿದ್ದು, ಸಾಂಕ್ರಾಮಿಕ ರೋಗಗಳಿಗೂ ಎಡೆಮಾಡಿಕೊಡುತ್ತಿದೆ.

‘ರೈಲ್ವೆ ಅಂಡರ್ ಬ್ರಿಡ್ಜ್ ಬಳಿ ವ್ಯಾಪಕ ನೀರು ನಿಂತು ರೋಗಗಳ ಆವಾಸ ತಾಣದಂತಾಗಿದೆ. ಶಾಲಾ ಮಕ್ಕಳು ವಾಹನ ಸವಾರರು ನಿತ್ಯ ತ್ಯಾಜ್ಯ ನೀರಿನಲ್ಲಿ ಹಾದು ಹೋಗಬೇಕಿದೆ. ಇದರ ಬಗ್ಗೆ ಪ್ರತಿಭಟಿಸಿದರೂ ರೈಲ್ವೆ ಅಧಿಕಾರಿಗಳು ಕೇವಲ ಆಶ್ವಾಸನೆ ಕೊಡುವುದರಲ್ಲಿಯೇ ಕಾಲ ಹರಣ ಮಾಡುತ್ತಿದ್ದಾರೆ’ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಎಂ.ಎಚ್. ನದಾಫ್ ಆರೋಪಿಸುತ್ತಾರೆ.

ಮೇಘರಾಜ ನಗರದ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ಬೈಕ್ ಸವಾರರು ಅಪಘಾತಕ್ಕೆ ಒಳಗಾದರೂ ಯಾರು ತಲೆ ಕೆಡಿಸಿಕೊಳ್ಳುತ್ತಿಲ್ಲ.
ಧರ್ಮಣ್ಣ ಅಂಬಿಗೇರ, ಹೊಳೆ ಆಲೂರು ನಿವಾಸಿ
ಮಳೆಗಾಲ ಪ್ರಾರಂಭವಾಗಿರುವುದರಿಂದ ಸಮಸ್ಯೆಯಾಗಿದೆ. ಈಗಾಗಲೇ ರಸ್ತೆ ಬದಿ ಅಂಗಡಿಯವರಿಗೆ ತ್ಯಾಜ್ಯ ಸುರಿಯದಂತೆ ಎಚ್ಚರಿಕೆ ನೀಡಿದ್ದು ಕಸ ಎಸೆಯುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
ಬಸವರಾಜ ಗಿರಿತಿಮಣ್ಣವರ, ಪಿಡಿಒ
ಹೊಳೆಆಲೂರು ರೈಲ್ವೆ ಸೇತುವೆ ಬಳಿ ಮೊಣಕಾಲವರೆಗೆ ನಿಂತಿರುವ ನೀರು
ಹೊಳೆಆಲೂರು ಎಪಿಎಂಸಿ ಗೇಟ್ ಬಳಿ ಬಿದ್ದಿರುವ ತ್ಯಾಜ್ಯ
ಹೊಳೆಆಲೂರಿನಲ್ಲಿ ರಸ್ತೆ ಮೇಲೆ ನಿರಂತರವಾಗಿ ಹರಿಯುವ ಚರಂಡಿ ನೀರು
ಸಂಪೂರ್ಣವಾಗಿ ಹಾಳಾಗಿರುವ ಹೊಳೆಆಲೂರಿನ ಮೇಘರಾಜ ನಗರದ ರಸ್ತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.