ಲಕ್ಷ್ಮೇಶ್ವರ (ಗದಗ ಜಿಲ್ಲೆ): ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ತಾಲ್ಲೂಕಿನ ಬಾಲೆಹೊಸೂರು ಸಮೀಪ ಭಾನುವಾರ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂದಿರುಗುವ ವೇಳೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ ನಡೆದಿದೆ.
ಹೆಜ್ಜೇನು ಏಕಾಏಕಿ ದಾಳಿ ಮಾಡಿದ್ದರಿಂದ ಗಲಿಬಿಲಿಗೊಂಡ ವಿದ್ಯಾರ್ಥಿಗಳು, ಶಿಕ್ಷಕರು ದಿಕ್ಕಾಪಾಲಾಗಿ ಓಡಿದರು. ಘಟನೆಯಲ್ಲಿ 15ರಿಂದ 20 ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಹೆಜ್ಜೇನು ಕಡಿದಿದ್ದು, ಲಕ್ಷ್ಮೇಶ್ವರ ತಾಲ್ಲೂಕಿನ ಶಿಗ್ಲಿ ಗ್ರಾಮದ ಶಿಕ್ಷಕಿ ಸರಸ್ವತಿ ಗುಡಿಸಾಗರ ಮತ್ತು ಸರೋಜಾ ದಿಂಡೂರು ಅವರಿಗೆ ಹೆಚ್ಚಿನ ಗಾಯಗಳಾಗಿವೆ.
ಸ್ವತಃ ವೈದ್ಯರಾದ ಶಿರಹಟ್ಟಿ ಮೀಸಲು ಕ್ಷೇತ್ರದ ಶಾಸಕ ಡಾ. ಚಂದ್ರು ಲಮಾಣಿ ಶಿಕ್ಷಕಿಯರನ್ನು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಿದ್ದಾರೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಾಗಲಕೋಟೆ: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಅಂಗವಾಗಿ ಜಿಲ್ಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಾನವ ಸರಪಳಿ ಅಲ್ಲಲ್ಲಿ ತುಂಡರಿಸಿತ್ತು. ಸಂಗಮ ಕ್ರಾಸ್‌ನಿಂದ ಭಗವತಿವರೆಗೆ ಗುಳೇದಗುಡ್ಡಲ್ಲಿನ ಶಾಲೆಗಳವರಿಗೆ ವಹಿಸಲಾಗಿತ್ತು. ಆದರೆ ಅಲ್ಲಲ್ಲಿ ವಿದ್ಯಾರ್ಥಿಗಳಿರಲಿಲ್ಲ. ಮಕ್ಕಳನ್ನು ಬೆಳಿಗ್ಗೆ 8 ಗಂಟೆಯ ಹೊತ್ತಿಗೆ ಕರೆದುಕೊಂಡು ಬಂದಿದ್ದರಿಂದ ಬಿಸಿಲಿಗೆ ಮಕ್ಕಳು ಬಳಲಿದರು. ಕೆಲವು ಕಡೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿರಲಿಲ್ಲ. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಯೇ ಇಬ್ಬರು ಕುಸಿದು ಬಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.