ಗದಗ: ‘ಇಂದಿನ ಯುವಪೀಳಿಗೆಗೆ ಕಾನೂನಿನ ಅರಿವು ಅತ್ಯವಶ್ಯಕ. ಜನರಿಗೆ ಮಾನವ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವಲ್ಲಿ ಯುವಜನತೆ ಪ್ರಮುಖ ಪಾತ್ರ ವಹಿಸಬೇಕಿದೆ’ ಎಂದು ಹಿರಿಯ ನ್ಯಾಯಾಧೀಶ ಎಸ್.ಜಿ.ಸಲಗರೆ ಅಭಿಪ್ರಾಯಪಟ್ಟರು.
ನಗರದ ಕೆಎಲ್‌ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯ, ನೆಹರೂ ಯುವ ಘಟಕ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ನಡೆದ ವಿಶ್ವ ಮಾನವ ಹಕ್ಕುಗಳ ದಿನಾಚರಣೆಯಲ್ಲಿ ಮಾತನಾಡಿದರು.
‘ಮಾನವ ಹಕ್ಕುಗಳು ಗೌರವಯುತವಾಗಿ ಬದುಕಲು ಅಗತ್ಯವಾಗಿದ್ದು, ಸಂವಿಧಾನ ಪ್ರಜೆಗಳಿಗೆ ನೀಡಿರುವ ಹಕ್ಕುಗಳನ್ನು ಬಳಸಿಕೊಂಡು ಉತ್ತಮ ಜೀವನ ನಡೆಸಬೇಕು. ಬೇರೆಯವರ ಹಕ್ಕುಗಳನ್ನು ಗೌರವಿಸಬೇಕು’ ಎಂದು ಹೇಳಿದರು.
‘ಬಾಲ ನ್ಯಾಯ ಮಂಡಳಿಯ ಹಿರಿಯ ನ್ಯಾಯಾಧೀಶೆ ಜೆ.ಸಿ.ರಶ್ಮಿ ಮಾತನಾಡಿ, ‘ಮಾನವ ಹಕ್ಕುಗಳು ಜೀವನಕ್ಕೆ ದಾರಿದೀಪವಿದ್ದಂತೆ. ಹಾಗಾಗಿ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಕಾನೂನು ಅರಿವು ಮಹತ್ವದ ಕಾರ್ಯ ನಿರ್ವಹಿಸುತ್ತದೆ’ ಎಂದು ಹೇಳಿದರು.
‘ಹಕ್ಕು ಶಕ್ತಿಯಾಗಬೇಕು, ಶಕ್ತಿ ಹಕ್ಕಾಗಬಾರದು. ಮಾನವಹಕ್ಕುಗಳು ಮನುಷ್ಯನ ಘನತೆಗೆ ಅಗತ್ಯವಾಗಿದ್ದು, ಪ್ರತಿಯೊಂದು ರಾಷ್ಟ್ರವೂ ಕಾನೂನುಬದ್ಧವಾಗಿ ಅವುಗಳನ್ನು ರಕ್ಷಣೆ ಮಾಡುವ ಹೊಣೆ ಹೊತ್ತಿವೆ’ ಎಂದರು.
ನೆಹರೂ ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯ ಅಧಿಕಾರಿ ಎನ್.ರಂಜನಿ ಮಾನವ ಹಕ್ಕುಗಳ ಮಹತ್ವ ತಿಳಿಸಿದರು.
ಕೆಎಲ್‌ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಪ್ರೊ.ಎಂ.ಬಿ. ಕೊಳವಿ ಸಂಪನ್ಮೂಲ, ಜೆ.ಟಿ. ಕಾಲೇಜಿನ ಪ್ರಾಚಾರ್ಯ ಪಿ.ಜಿ.ಪಾಟೀಲ, ಡಾ. ವೀಣಾ, ಪ್ರೊ. ಕಲ್ಯಾಣಿ ಬಿ. ಹುಲಕುಂದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.