ಲಕ್ಷ್ಮೇಶ್ವರ: ತಾಲ್ಲೂಕು ವ್ಯಾಪ್ತಿಯ ಅಕ್ಕಿಗುಂದ, ಬಟ್ಟೂರು, ಅಮರಾಪೂರ, ಹುಲ್ಲೂರು, ಅದರಹಳ್ಳಿ, ಕೋಗನೂರು ಗ್ರಾಮಗಳಲ್ಲಿ ಅಕ್ರಮ ಮರಳು ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು ಅದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿ ಸೋಮವಾರ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಜಿಲ್ಲಾದ್ಯಕ್ಷ ಶರಣು ಗೋಡಿ ನೇತೃತ್ವದಲ್ಲಿ ಕಾರ್ಯಕರ್ತರು ತಹಶೀಲ್ದಾರ್ ವಾಸುದೇವ ಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
‘ಕೆಲವರು ಟಿಪ್ಪರ್ ಮತ್ತು ಲಾರಿಗಳ ದೂರ ದೂರದ ಊರುಗಳಿಗೆ ಪಾಸ್ ತೆಗೆದುಕೊಂಡು ಒಂದೇ ಪಾಸು ಪಡೆದು ತಮಗೆ ಎಲ್ಲಿ ಬೇಕೆಂದಲ್ಲಿ ಮರಳನ್ನು ತುಂಬಿಕೊಂಡು ಅದೇ ಪಾಸ್‍ನಲ್ಲಿ ನಾಲ್ಕೈದು ಟ್ರಿಪ್ ಮರಳು ಸಾಗಾಟ ಮಾಡುತ್ತಿದ್ದಾರೆ. ಟ್ರ್ಯಾಕ್ಟರ್‌ಗಳಲ್ಲಿ ಅಕ್ರಮ ಮರಳು ಸಾಗಾಣಿಕೆ ಅವ್ಯಾಹತವಾಗಿ ನಡೆದಿದ್ದು ಇದರಿಂದಾಗಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ’ ಎಂದು ಆರೋಪಿಸಿದರು.
ಕರವೇ ಸ್ವಾಭಿಮಾನಿ ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ನಾಗೇಶ ಅಮರಾಪುರ ಮಾತನಾಡಿ ‘ಲಾರಿ ಮತ್ತು ಟಿಪ್ಪರ್‌ಗಳಿಗೆ ಜಿಪಿಎಸ್ ಇದ್ದರೂ ನಂಬಂಧಪಟ್ಟ ಇಲಾಖೆಯ ಕಣ್ಣು ತಪ್ಪಿಸಿ ಜಿಪಿಎಸ್ ಬಂದ್ ಮಾಡಿ ಮರಳು ಗುತ್ತಿಗೆದಾರರ ಜೊತೆ ಹೊಂದಾಣಿಕೆಯಾಗಿ ಸಕ್ರಮದ ಜೊತೆ ಅಕ್ರಮ ಮರಳು ಸಾಗಾಣಿ ಮಾಡಿ ಸರ್ಕಾರಕ್ಕೆ ನಷ್ಟ ಮಾಡುತ್ತಿದ್ದಾರೆ. ಮರಳು ದಂಧೆಕೋರರ ಮೇಲೆ ಸೂಕ್ತ ಕಾನೂನುಕ್ರಮ ಒಂದು ವಾರದೊಳಗೆ ಜರುಗಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಗುವುದು’ ಎಂದು ಎಚ್ಚರಿಸಿದರು.
ಜಿಲ್ಲಾ ಕಾರ್ಯದ್ಯಕ್ಷ ಇಸ್ಮಾಯಿಲ್ ಆಡೂರ, ಪ್ರವೀಣ ಆಚಾರಿ, ಯಲ್ಲಪ್ಪ ಹಂಜಗಿ, ಅಷ್ಪಾಕ ಬಾಗೋಡಿ, ಕೈಸರ ಮಹಮ್ಮದ ಅಲಿ, ಅಭಿಷೇಕ ಸಾತಪುತೆ, ದುದ್ದು ಅಕ್ಕಿ, ನಾಸಿರ ಶಿದ್ದಿ, ಸುಲೇಮಾನ ಬಾರಿಗಿಡದ, ಮುಕ್ತಿಯಾರ ಜಮಖಂಡಿ, ನದಿಮ್ ಕುಂದಗೋಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.