ಗದಗ: ‘ಬಡತನ ನಿರ್ಮೂಲನೆಗಾಗಿ ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಇದರಿಂದ ಬಡವರ ಬದುಕಿನಲ್ಲಿ ಆರ್ಥಿಕ ಸ್ವಾವಲಂಬನೆ ಮೂಡುವುದರೊಂದಿಗೆ ಕ್ರಾಂತಿಕಾರಕ ಬದಲಾವಣೆ ಸಾಧ್ಯವಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಗದಗ ತಾಲ್ಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.
‘ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ರಾಜ್ಯ ಸರ್ಕಾರ ₹50 ಸಾವಿರ ಕೋಟಿ ಯೋಜನೆಯನ್ನು ಭ್ರಷ್ಟಾಚಾರವಿಲ್ಲದೇ ಜನರಿಗೆ ತಲುಪಿಸುವ ಕೆಲಸ ಮಾಡಿದೆ. ಇದು ಸರ್ಕಾರದ ಮಹತ್ವದ ಸಾಧನೆಯಾಗಿದೆ’ ಎಂದರು.
‘ಗ್ಯಾರಂಟಿ ಯೋಜನೆ ಅನುಷ್ಠಾನದಿಂದ 1.10 ಕೋಟಿ ಕುಟುಂಬಗಳನ್ನು ಬಡತನ ರೇಖೆಯಿಂದ ಮೇಲೆತ್ತಲಾಗಿದೆ. ಈ ಮೂಲಕ ಬಡಜನರಲ್ಲಿ ಆತ್ಮಾಭಿಮಾನ, ಸ್ವಾಭಿಮಾನ ಮೂಡಿಸುವ ಕೆಲಸವಾಗಿದೆ. ಉಳಿದ ಅರ್ಹರಿಗೆ ಗ್ಯಾರಂಟಿ ಯೋಜನೆಗಳ ಸೌಲಭ್ಯ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಾರ್ಯನಿರ್ವಹಿಸಬೇಕು’ ಎಂದು ತಿಳಿಸಿದರು.
ಗೃಹಜ್ಯೊತಿ ಯೋಜನೆಯಡಿ ಗದಗ ಗ್ರಾಮಿಣ ಉಪವಿಭಾಗದಲ್ಲಿ 52,909 ಸ್ಥಾವರಗಳು ಹಾಗೂ ಶಹರ ವಿಭಾಗದಲ್ಲಿ 45,024 ಸ್ಥಾವರಗಳ ನೋಂದಣಿ ಮೂಲಕ ಶೇ 92.98ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಹೆಸ್ಕಾಂ ಅಧಿಕಾರಿಗಳು ಸಭೆಗೆ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಗದಗ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ಮಾತನಾಡಿ, ‘ರಾಜ್ಯ ಸರ್ಕಾರ ಬಡಜನರ ಶ್ರೇಯೋಭಿವೃದ್ಧಿಗೆ ಪಂಚ ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದು, ಪ್ರತಿ ಕುಟುಂಬಕ್ಕೆ ತಿಂಗಳಿಗೆ ₹5 ಸಾವಿರಗಳಂತೆ ವಾರ್ಷಿಕ ₹60 ಸಾವಿರ ಹಣವನ್ನು ಅರ್ಹ ಫಲಾನುಭವಿಯ ಖಾತೆ ನೇರವಾಗಿ ಜಮಾ ಮಾಡುತ್ತಿದೆ’ ಎಂದು ತಿಳಿಸಿದರು.
ಗದಗ ಸಿಡಿಪಿಒ ಹುಲಿಗೆಮ್ಮ ಜೋಗೇರ ಮಾತನಾಡಿ, ‘ಗೃಹಲಕ್ಷ್ಮಿ ಯೋಜನೆಯಡಿ ಗದಗ ತಾಲ್ಲೂಕಿನ ಯಜಮಾನಿ ಕಾರ್ಡ್ ಹೊಂದಿರುವವರ ಸಂಖ್ಯೆ ಒಟ್ಟು 78,009 ಇದ್ದು, ಆ ಪೈಕಿ 77,611 ಮಂದಿ ಫಲಾನುಭವಿಗಳ ನೋಂದಣಿಯಾಗಿದೆ. 76,291 ಫಲಾನುಭವಿಗಳಿಗೆ ಡಿಬಿಟಿ ಮೂಲಕ ಖಾತೆಗೆ ನೇರ ಪಾವತಿಸಲಾಗುತ್ತಿದೆ. ಜಿಎಸ್‌ಟಿ, ಐಟಿ ತೊಂದರೆಗಳಿಂದ 1,320 ಅರ್ಜಿಗಳು ಬಾಕಿ ಉಳಿದಿವೆ’ ಎಂದು ಮಾಹಿತಿ ಒದಗಿಸಿದರು.
ಅನ್ನಭಾಗ್ಯ ಯೋಜನೆಯಡಿ ಡಿಬಿಟಿ ಮೂಲಕ ನಗದು ವರ್ಗಾವಣೆಯನ್ನು ಜುಲೈ-2023 ರಿಂದ ಆರಂಭಿಸಲಾಯಿತು. ಪ್ರತಿ ಸದಸ್ಯರಿಗೆ ಹೆಚ್ಚುವರಿ 5 ಕೆ.ಜಿ. ಅಕ್ಕಿಯ ಮೊತ್ತ ₹170ರಂತೆ 6,43,423 ಜನರಿಗೆ ಜುಲೈ-2023ರಲ್ಲಿ ಪಾವತಿಸಲಾಯಿತು. ನಂತರ ನಿರಂತರವಾಗಿ ಪ್ರತಿ ತಿಂಗಳು ಪಾವತಿಸಲಾಗುತ್ತಿದೆ. ಜೂನ್ 2024ರಲ್ಲಿ 7,59,604 ಸದಸ್ಯರಿಗೆ ಡಿಬಿಟಿ ಮುಲಕ ಹೆಚ್ಚುವರಿ ಅಕ್ಕಿಯ ಮೊತ್ತವನ್ನು ಪಾವತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಶಕ್ತಿ ಯೋಜನೆಯಿಂದ ಸಾರಿಗೆ ಸಂಸ್ಥೆಯ ಗದಗ ವಿಭಾಗಕ್ಕೆ ಸೆಪ್ಟೆಂಬರ್ 2024ರವರೆಗೆ ₹65,46,66,516 ಆದಾಯ ಬಂದಿದೆ. ಒಟ್ಟಾರೆ ಮಹಿಳಾ ಫಲಾನುಭವಿಗಳಿಂದ ₹36,78,23,531 ಆದಾಯವಾಗಿದೆ ಎಂದು ಸಭೆಗೆ ತಿಳಿಸಿದರು.
ಯುವ ನಿಧಿ ಯೋಜನೆಗೆ 2022-23ನೇ ಶೈಕ್ಷಣಿಕ ಸಾಲಿನಲ್ಲಿ ಅಧ್ಯಯನ ಮಾಡಿ 2023ರಲ್ಲಿ ತೇರ್ಗಡೆಯಾಗಿ, ತೇರ್ಗಡೆಯಾದ ದಿನಾಂಕದಿಂದ 180 ದಿನ ಕಳೆದರೂ ಉದ್ಯೋಗ ಲಭಿಸದ ಪದವೀಧರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ₹3 ಸಾವಿರ ನಿರುದ್ಯೋಗ ಭತ್ಯೆ ಹಾಗೂ ಡಿಪ್ಲೊಮಾ ಪಾಸಾದ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ₹1,500 ನಿರುದ್ಯೋಗ ಭತ್ಯೆ ನೀಡಲಾಗುತ್ತದೆ. ಯುವನಿಧಿ ಯೋಜನೆಯಡಿ ಇದುವರೆಗೆ 1,171 ಅಭ್ಯರ್ಥಿಗಳ ನೋಂದಣಿಯಾಗಿದೆ ಎಂದು ಸಭೆಗೆ ತಿಳಿಸಿದರು.
ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್‌ಸಾಬ ಬಬರ್ಜಿ, ಗದಗ ಜಿಲ್ಲಾ ಮಟ್ಟದ ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಬಿ.ಅಸೂಟಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ, ಗ್ಯಾರಂಟಿ ಸಮಿತಿಯ ಸದಸ್ಯರಾದ ಶಂಭು ಎಸ್ ಕಾಳೆ, ಮೀನಾಕ್ಷಿ ಬೆನಕಣ್ನವರ, ದಯಾನಂದ ಪವಾರ, ಸಂಗು ಕರಕಲಕಟ್ಟಿ, ನಿಂಗಪ್ಪ ದೇಸಾಯಿ, ಸಂಗಮೇಶ ಹಾದಿಮನಿ, ರಮೇಶ ಹೊನ್ನಿನಾಯಕರ, ದೇವರೆಡ್ಡಿ ತಿರ್ಲಾಪುರ, ಮಲ್ಲಪ್ಪ ದಂಡಿನ, ಗಣೇಶ ಸಿಂಗ್ ಮಿಟಾಡ್, ಮಲ್ಲಪ್ಪ ಬಾರಕೇರ, ಬಾಷಾ ಮಲ್ಲಸಮುದ್ರ, ಕೃಷ್ಣಗೌಡ ಎಚ್.ಪಾಟಿಲ, ಸಾವಿತ್ರಿ ಹೂಗಾರ ಸೇರಿದಂತೆ ಗ್ಯಾರಂಟಿ ಯೋಜನೆ ಸಂಬಂಧಿತ ಅಧಿಕಾರಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.