ADVERTISEMENT

ಧನ ಗಳಿಕೆಯಲ್ಲ, ಧನಾತ್ಮಕ ಸೇವೆ ಮುಖ್ಯ: ಡಾ.ವೈ.ಸಿ.ಯೋಗಾನಂದ ರೆಡ್ಡಿ

ಭಾರತೀಯ ವೈದ್ಯಕೀಯ ಸಂಘದ ಗದಗ ಶಾಖೆ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 15:32 IST
Last Updated 19 ಅಕ್ಟೋಬರ್ 2024, 15:32 IST
ಗದುಗ ನಗರದ ಪೊಲೀಸ್ ಭವನದಲ್ಲಿ ನಡೆದ ಗದಗ ಭಾರತೀಯ ವೈದ್ಯಕೀಯ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು
ಗದುಗ ನಗರದ ಪೊಲೀಸ್ ಭವನದಲ್ಲಿ ನಡೆದ ಗದಗ ಭಾರತೀಯ ವೈದ್ಯಕೀಯ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು   

ಗದಗ: ‘ಯುವ ವೈದ್ಯರು ತಮ್ಮ ವೈದ್ಯಕೀಯ ವೃತ್ತಿಯಲ್ಲಿ ಮನುಷ್ಯತ್ವ, ಮಾನವೀಯತೆ ಹಾಗೂ ವಿನಮ್ರತೆಯಿಂದ ರೋಗಿಗಳ ಸೇವೆ ಮಾಡಲಿ. ಧನಾತ್ಮಕ ಸೇವೆ ಇರಲಿ ವಿನಃ ಧನ (ಹಣ) ಗಳಿಕೆಯೇ ಮುಖ್ಯವಾಗಬಾರದು. ಉತ್ಕೃಷ್ಠ ಸೇವೆಯಿಂದ ಖ್ಯಾತಿ -ಹಣ ಎರಡೂ ತಾನಾಗಿಯೇ ಬರುತ್ತದೆ’ ಎಂದು ಕರ್ನಾಟಕ ಮೆಡಿಕಲ್ ಕೌನ್ಸಿಲ್‌ನ ಗೌರವ ಅಧ್ಯಕ್ಷ ಡಾ.ವೈ.ಸಿ.ಯೋಗಾನಂದ ರೆಡ್ಡಿ ಸಲಹೆ ನೀಡಿದರು.

ಗದುಗಿನ ಪೊಲೀಸ್ ಭವನದಲ್ಲಿ ಶುಕ್ರವಾರ ನಡೆದ ಗದಗ ಭಾರತೀಯ ವೈದ್ಯಕೀಯ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅಧಿಕಾರ ಹಸ್ತಾಂತರಿಸಿ ಮಾತನಾಡಿ, ಭಾರತೀಯ ವೈದ್ಯಕೀಯ ಸಂಸ್ಥೆ ರಾಜ್ಯ ಘಟಕಕ್ಕೆ ಹಾಗೂ ವೈದ್ಯಕೀಯ ಕ್ಷೇತ್ರದ ಉನ್ನತಿಗೆ ಗದಗ ಜಿಲ್ಲೆಯ ಕೊಡುಗೆ ಅಪಾರ’ ಎಂದರು.

ಗದುಗಿನ ಅನುಭವಿ ಘಟಾನುಘಟಿ ವೈದ್ಯರುಗಳ ಮೂಲಕ ರಾಜ್ಯ ಐಎಂಎಗೆ ಸಾಕಷ್ಟು ಬಲ ಬಂದಿದೆ. ಗದುಗಿನ ಮಹಿಳಾ ವೈದ್ಯರುಗಳು ರಾಜ್ಯ, ರಾಷ್ಟ್ರಮಟ್ಟದ ಸಮ್ಮೇಳನ, ಬೃಹತ್ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಂಡಿಸಿದ ಪ್ರಬುದ್ಧ ವಿಷಯಗಳು ಹಿರಿಯ ತಜ್ಞ ವೈದ್ಯರ ಗಮನ ಸೆಳೆದಿವೆ. ರಾಜ್ಯದಲ್ಲಿ ಬೆರಳೆಣಿಕೆಯ ಕ್ರಿಯಾಶೀಲ ಐಎಂಎ ಶಾಖೆಗಳಲ್ಲಿ ಗದಗ ಮುಂಚೂಣಿಯಲ್ಲಿದೆ ಎಂದರು.

ADVERTISEMENT

ರಾಜ್ಯ ಐಎಂಎ ನಿಯೋಜಿತ ಅಧ್ಯಕ್ಷ ಡಾ. ವಿ. ವಿ. ಚಿನಿವಾಲರ ಮಾತನಾಡಿ, ರಾಜ್ಯ ಐಎಂಎ ಸಂಘಟನೆಯ ಬಲವರ್ಧನೆಗೆ ಗದುಗಿನ ಸಹಕಾರವನ್ನು ಮರೆಯುವಂತಿಲ್ಲ. ಗದಗ ಜಿಲ್ಲೆಯವರಾದ ಡಾ. ಎನ್. ಎಚ್. ಗೋಡಬೋಲೆ, ಡಾ. ಆರ್. ಆರ್. ಜೋಷಿ, ಡಾ. ಬಿ. ಎಂ. ಆಲೂರ, ಡಾ. ಆರ್. ಎಸ್. ಬಳ್ಳಾರಿ, ಡಾ. ಜಿ. ಬಿ. ಬಿಡಿನಹಾಳ, ಡಾ. ಅನ್ನದಾನಿ ಮೇಟಿ, ಡಾ. ಎಚ್. ಬಿ.ಲಕ್ಕೋಳ ಇವರು ರಾಜ್ಯ ಶಾಖೆಯ ಅಧ್ಯಕ್ಷರಾಗಿ ಸಾಕಷ್ಟು ಸುಧಾರಣೆ ತಂದಿದ್ದಾರೆ ಹಾಗೆಯೇ ಗದಗ ಶಾಖೆಗೆ ಉತ್ತಮ ಮಾರ್ಗದರ್ಶನ ನೀಡಿ ಉತ್ಕೃಷ್ಠತೆಯನ್ನು ಹೆಚ್ಚಿಸಿದ ಹೆಗ್ಗಳಿಕೆ ಗದುಗಿಗೆ ಸಲ್ಲುವದು ಎಂದರು.

ಗದಗ ಐಎಂಎ ಕಳೆದ ವರ್ಷದ ತಂಡ ಒಳ್ಳೆಯ ಕೆಲಸ ಮಾಡಿದೆ ಅದೇ ರೀತಿಯಾಗಿ ಈ ವರ್ಷದ ತಂಡವೂ ಸಹ ಉತ್ತಮ ಕೆಲಸ ಮಾಡಲಿ ಎಂದರಲ್ಲದೆ ವೈದ್ಯರು ಐಎಂಎ ಸದಸ್ಯರಾಗುವ ಮೂಲಕ ಸಂಘದ ಹಾಗೂ ಹಲವು ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಬೇಕು ಜೊತೆಗೆ ಕುಟುಂಬದ ಭದ್ರತೆಗೆ ಇರುವ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಬೇಕೆಂದರು.

ನೂತನ ಅಧ್ಯಕ್ಷ ಡಾ. ಪವನ ಪಾಟೀಲ ತಮ್ಮ ಅಧಿಕಾರದ ಅವಧಿಯಲ್ಲಿ ಹಮ್ಮಿಕೊಳ್ಳಲಿರುವ ಕಾರ್ಯ ಯೋಜನೆಗಳನ್ನು ವಿವರಿಸಿದರು. ವೇದಿಕೆಯ ಮೇಲೆ ಗದಗ ಐಎಂಎ ಮಹಿಳಾ ಘಟಕದ ಮಹಿಳಾ ಘಟಕದ ಅಧ್ಯಕ್ಷೆ ಡಾ. ಅನುಪಮಾ ಪವನ ಪಾಟೀಲ, ಕಾರ್ಯದರ್ಶಿ ಡಾ. ಶಿಲ್ಪಾ ಪ್ರಕಾಶ ಕುಷ್ಟಗಿ (ಧಡೂತಿ), ನಿಕಟಪೂರ್ವ ಅಧ್ಯಕ್ಷೆ ಡಾ. ಸೋನಿಯಾ ಕರೂರ, ನಿಕಟಪೂರ್ವ ಕಾರ್ಯದರ್ಶಿ ಡಾ. ರಾಧಿಕಾ ಬಳ್ಳಾರಿ, ಡಾ.ಚಂದ್ರಶೇಖರ ಬಳ್ಳಾರಿ, ಡಾ. ಭೀಮಸಿಂಗ ಸಮೂರೇಕರ, ಡಾ.ಜಿ.ಎಸ್.ಪಲ್ಲೇದ, ಡಾ.ಶಶಿಧರ ರೇಶ್ಮೆ, ಡಾ.ಜಿ.ಬಿ. ಬಿಡಿನಹಾಳ, ಡಾ.ತುಕಾರಾಮ ಸೋರಿ ಇದ್ದರು.

‘ವೈದ್ಯಕೀಯ ಕಾನೂನು ತಿದ್ದುಪಡಿ ಚಿಂತನೆಗೆ ಗದಗ ಶಾಖೆ ವೇದಿಕೆ’

‘ಅಖಿಲ ಭಾರತ ಮಟ್ಟದಲ್ಲಿ ಸಹಕಾರಿ ಆಂದೋಲನವನ್ನು ಹುಟ್ಟು ಹಾಕಿದ್ದು ಗದುಗಿನ ಪುಣ್ಯಭೂಮಿ. ಮುದ್ರಣ ಕಾಶಿ ಎಂದೇ ಹೆಸರಾದ ಗದುಗಿನಲ್ಲಿ ವೈದ್ಯರ ಸಂಘ 1976 ರಲ್ಲಿ ಆರಂಭಗೊಂಡಿದೆ. ಆ ನಂತರ ಹಲವು ರಚನಾತ್ಮಕ ಕಾರ್ಯಗಳಿಂದಾಗಿ ರಾಜ್ಯದ ಗಮನ ಸೆಳೆದಿದೆ. ಗದಗ ಐಎಂಎದಲ್ಲಿ ಚರ್ಚೆಯ ರೂಪುರೇಷೆಗಳು ಗಂಭೀರ ವಿಷಯಗಳು ಫಲಪ್ರದಗೊಂಡಿವೆ. ಹೋರಾಟದ ಮಾರ್ಗ -ಬೇಡಿಕೆಗಳಿಗೆ ವೈದ್ಯಕೀಯ ಕಾನೂನು ತಿದ್ದುಪಡಿ ತರುವಂತಹ ಚಿಂತನೆಗಳಿಗೆ ವೇದಿಕೆಯಾದದ್ದು ಗದುಗಿನ ಐಎಂಎ ಶಾಖೆಯ ವೇದಿಕೆ’ ಎಂದು  ಡಾ.ವೈ.ಸಿ.ಯೋಗಾನಂದ ರೆಡ್ಡಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.